Saturday, April 10, 2010

ವೀಕ್ಷಕರು ಜಾಗೃತರಾಗಿದ್ದಾರೆ ಎಚ್ಚರಿಕೆ!


ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳಾಗಲಿ ಅಥವಾ ಭಿತ್ತರವಾಗುತ್ತಿರುವ ಕಾರ್ಯಕ್ರಮಗಳಾಗಲಿ ಅವುಗಳ ಸಮಂಜಸತೆ ಎಷ್ಟು ಎಂಬುವಂತಹ ವಿಚಾರಗಳು ಆಗಾಗ್ಗೆ ಚರ್ಚೆಯಾಗುತ್ತಿರುತ್ತವೆ. ಈ ಹಿಂದೆ ಮಾಧ್ಯಮಗಳ ವೈಭವೀಕರಣವನ್ನು ಬುದ್ಧಿ ಜೀವಿಗಳೆನಿಸಿಕೊಂಡವರು ಮಾತ್ರ ಪ್ರಶ್ನಿಸುತ್ತಿದ್ದರು ಹಾಗೂ ಚರ್ಚಿಸುತ್ತಿದ್ದರು ಆದರೆ ಜನಸಾಮಾನ್ಯರೂ ಸಹ ವ್ಯಾಪಕವಾಗಿ ಪ್ರಶ್ನಿಸುವಂತಹ ಕಾಲವೊಂದು ಹತ್ತಿರದಲ್ಲಿಯೇ ಇದೆ ಎಂದರೆ ಆಶ್ಚರ್ಯವೇನಿಲ್ಲ. ಮಾಧ್ಯಮಗಳ ಗುಣಾತ್ಮಕ ಕಾರ್ಯಾಚರಣೆಗೆ ಇಂತಹದ್ದೊಂದು ಬೆಳವಣಿಗೆ ಒಳ್ಳೆಯದ್ದೇ ಆದರೆ ಜನಸಾಮಾನ್ಯರು ಹೀನಾಮಾನವಾಗಿ ಮಾಧ್ಯಮಗಳನ್ನು ಪ್ರಶ್ನಿಸುವ ಮುನ್ನ ಈ ದೇಶದ ಮಾಧ್ಯಮಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು ಒಳಿತು ಎಂಬುದು ಆಗಾಗ್ಗೆ ಕೇಳಿ ಬರುತ್ತಿರುವ ಮಾತು. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದ ಸುದ್ದಿಗಳಷ್ಟೇ ಈ ವರೆಗೆ ಟೀಕೆ ಟಿಪ್ಪಣಿಗಳಿಗೆ ಒಳಗಾಗುತ್ತಿದ್ದವು ಆದರೆ ಪಕ್ಷ, ಜಾತಿ, ಗುಂಪುಗಳ ಆಧಾರದ ಮೇಲೆ ಅಂತಹ ಆರೋಪಗಳು ನಶಿಸಿಹೋಗುತ್ತಿದ್ದವು ಆದರೆ ಈಗ ಮಾಧ್ಯಮಗಳಲ್ಲಿ ವಿಶೇಷವಾಗಿ ಖಾಸಗಿ ಟಿವಿ ಹಾಗೂ ಖಾಸಗಿ ರೇಡಿಯೋ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳೂ ಸಹ ಪ್ರತಿ ನಿತ್ಯ ಟೀಕೆಗೀಡಾಗುತ್ತಿರುವುದು ಈ ದೇಶದ ಮಾಧ್ಯಮ ರಂಗದ ದುರಂತವೇ ಸರಿ.
ಟಿವಿ ಹಾಗೂ ರೇಡಿಯೋಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಏಕಮುಖವಾಗಿರುವುದರಿಂದ ಟೀಕೆ ಟಿಪ್ಪಣಿಗಳು ಎಲ್ಲೋ ಒಂದೆಡೆ ಕೇಳಿ ಆನಂತರ ತಣ್ಣಗಾಗುತ್ತಿದ್ದವು ಆದರೆ ಈಗ ಯಾವುದೋ ಗಳಿಗೆಯ ತಪ್ಪುಗಳನ್ನ ವೀಕ್ಷಕರು ಮತ್ತೊಂದು ಮಾಧ್ಯಮದಲ್ಲಿ ಅಭಿವ್ಯಕ್ತಿಗೊಳಿಸುವ ಅಥವಾ ಸಂಬಂಧಿಸಿದ ಮಾಧ್ಯಮಗಳಿಗೇ ತಪ್ಪಿನ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಗಳು ನಡೆಯುತ್ತಿವೆ ಈ ಮೂಲಕ ಮಾಧ್ಯಮಗಳು ತಾವು ಏನು ಮಾಡಿದರೂ ಸರಿ ಎಂಬ ಭ್ರಮೆಯಿಂದ ಹೊರಬರುವಂತೆ ಮಾಡಿವೆ ಈ ನಡುವೆಯೂ ತಮ್ಮ ತಪ್ಪುಗಳನ್ನು ಶತಾಯಗತಾಯ ಒಪ್ಪದೇ ಇರುವಂತಹ ಮಾಧ್ಯಮ ಮಿತ್ರರೂ ನಮ್ಮ ನಡುವೆ ಇದ್ದಾರೆ. ಇವುಗಳೆಲ್ಲದರ ಪರಿಣಾಮ ಏನೋ ಎಂಬಂತೆ ಮಾಧ್ಯಮಗಳಲ್ಲಿನ ವೃತ್ತಿನಿರತರು ಜನಸಾಮಾನ್ಯರನ್ನ ಭೇಟಿಯಾದಾಗ ವೇಳೆ ಸಾವಿರಾರು ಪುಕ್ಕಟ್ಟೆ ಸಲಹೆಗಳು, ಒಮ್ಮೊಮ್ಮೆ ವಾಗ್ವಾದಗಳು ಜೊತೆ ಜೊತೆಗೆ ಸಣ್ಣ ಪುಟ್ಟ ಚರ್ಚೆಗಳಿಗೆ ತಯಾರಾಗಿರಲೇ ಬೇಕಾಗಿರುತ್ತದೆ ಎಂಬುದು ಇತ್ತೀಚೆಗಷ್ಟೇ ಅರಿವಾಯ್ತು.
ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ಹೊರಗೇ ಹಲವು ಕಾರ್ಯಕ್ರಮಗಳು ನಡೆದ ಪರಿಣಾಮ ಹುಬ್ಬಳ್ಳಿ, ಹಾಸನ, ಮೈಸೂರು, ದಾವಣಗೆರೆ ಅಂತೆಲ್ಲ ಸುತ್ತಾಟವೋ ಸುತ್ತಾಟ ಹೋದಲ್ಲೆಲ್ಲ ಹೊಸ ಹೊಸ ಜನರ ಪರಿಚಯ, ಹೊಸ ಸಂಸ್ಕೃತಿಗಳ ಒಡನಾಟ ಜೊತೆಗೆ ವೈವಿಧ್ಯಮಯ ರುಚಿಯ ಸ್ವಾಗತ ಇವುಗಳೆಲ್ಲದರ ನಡುವೆ ಮಾಧ್ಯಮಗಳ ಕುರಿತಾದ ಚರ್ಚೆ ಜೊತೆಗೆ ಉಚಿತ ಸಲಹೆಗಳು ಇವುಗಳೆಲ್ಲವನ್ನು ಹೊತ್ತು ಬಂದ ನಾನು ಯಾವುದನ್ನು ಬರೆಯುವುದು ಯಾವುದನ್ನು ಬಿಡುವುದು ಎಂಬ ಚಿಂತೆಯಲ್ಲಿದೆನೆ ಈ ನಡುವೆ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದ ಎರಡು ಘಟನೆಗಳನ್ನು ಹೇಳಲೇ ಬೇಕೆನಿಸುತ್ತಿದೆ.
ಪ್ರತಿ ದಿನವೂ ಕೆಲಸ ಕೆಲಸವೆಂದು ಕಂಪ್ಯೂಟರ್ ಹಾಗೂ ಫೈಲ್ ಗಳ ನಡುವೆ ಮುಳುಗಿ ಹೋಗುವ ನಾವು ಮಾಧ್ಯಮದಲ್ಲಿದ್ದುಕೊಂಡು ಇಡೀ ಒಂದು ಸಮುದಾಯಕ್ಕೆ ತಲುಪುತ್ತಿರುತ್ತೇವೆ ಎಂಬ ವಿಚಾರ ಮರೆತೇ ಹೋಗಿರುತ್ತದೆ. ಪ್ರತಿಯೊಂದು ಸಂಚಿಕೆಗಳನ್ನು ಅಚ್ಚುಕಟ್ಟಾಗಿ ನೀಡಬೇಕೆಂದುಕೊಳ್ಳುವ ನಾವು ವೀಕ್ಷಕ ನಮ್ಮಿಂದ ಏನನ್ನು ಆಪೇಕ್ಷಿಸುತ್ತಿದ್ದಾನೆ ಎಂಬುದನ್ನು ಅರಿಯಲು ಸಮಾಜದೊಂದಿಗೆ ಒಡನಾಡಲೇ ಬೇಕು. ಹುಬ್ಬಳ್ಳಿಗೆ ಹೋಗಿದ್ದ ಸಂದರ್ಭ ಮಾಧ್ಯಮಗಳ ಬಗ್ಗೆ ಅತೀವವಾದ ಆಸಕ್ತಿ ಬೆಳೆಸಿಕೊಂಡಿರುವ ವಿಚಿತ್ರ ವ್ಯಕ್ತಿಯೋರ್ವನ ಪರಿಚಯವಾಯ್ತು ಆತನಿಗೆ ಮಾಧ್ಯಮಗಳ ಜೊತೆಗೆ ಎಷ್ಟು ವರ್ಷಗಳ ಒಡನಾಟವಿದೆಯೋ ಗೊತ್ತಿಲ್ಲ ಆದರೆ ಈಗಾಗಲೇ ಎಲ್ಲಾ ಮಾಧ್ಯಮಗಳ ಧೋರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಗೆಳೆಯ ಕನ್ನಡದ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳ ಬಗೆಗಿನ ಒಪ್ಪು ತಪ್ಪುಗಳನ್ನು ನಿಖರವಾಗಿ ಹೇಳುವಷ್ಟು ಪಾಂಡಿತ್ಯ ಸಂಪಾದಿಸಿಕೊಂಡಿದ್ದಾರೆ. ಈ ಎಲ್ಲಾ ವಿಮರ್ಶೆಯ ನಂತರ ಮಾಧ್ಯಮಗಳ ಬಗ್ಗೆಗಿನ ಅವರ ಅಂತಿಮ ತೀರ್ಪೆಂದರೆ ಈಗಿರುವ ಮಾಧ್ಯಮಗಳು ಬ್ರಹ್ಮನಿಂದಲೂ ಸರಿಪರಿಸಲಾಗದ ಸ್ಥಿತಿ ತಲುಪಿವೆ ಆದ್ದರಿಂದ ಪರ್ಯಾಯ ಮಾಧ್ಯಮ ವಲಯವೊಂದನ್ನೇ ಸೃಷ್ಟಿಸುವ ಅಗತ್ಯವಿದೆ ಎಂಬ ವಾದ ಮುಂದಿಟ್ಟರು. ಈ ತೀರ್ಪಿಗೆ ಏನು ಪ್ರತಿಕ್ರಿಯೆ ನೀಡಬೇಕೆಂಬುದು ನನಗೆ ತಿಳಿಯದೆ ಕಕ್ಕಾಬಿಕ್ಕಿಯಾಗಿ ಕುಳಿತಿದ್ದ ನನ್ನನ್ನು ತಮ್ಮ ಸ್ಟುಡಿಯೋದತ್ತ ಕರೆದೊಯ್ದ ವ್ಯಕ್ತಿ ಪರ್ಯಾಯ ದೃಷ್ಯಮಾಧ್ಯಮ ಹೇಗಿರಬೇಕು ಎಂಬ ಬಗ್ಗೆಯೂ ತಮ್ಮದೇ ಆದ ಚೌಕಟ್ಟಿನ ನೀಲಿ ನಕ್ಷೆಯನ್ನು ನನ್ನ ಮುಂದಿರಿಸಿದರು.
ಒಂದು ಟಿವಿ ಚಾನೆಲ್ ಎಂದರೆ ಅದು ಹೇಗಿರಬೇಕು ಅದು ಹೇಗೆ ಕಾರ್ಯ ನಿರ್ವಹಿಸಬೇಕು ಅದರಲ್ಲಿ ಜನಸಾಮಾನ್ಯರಿಗೆ ಉಪಯೋಗವಾಗುವಂತಹ ಎಂತೆಂತಹ ಕಾರ್ಯಕ್ರಮಗಳು ಪ್ರಸಾರವಾಗಬೇಕು ಸುದ್ದಿಗಳು ಎಷ್ಟಿರಬೇಕು ಹೇಗಿರಬೇಕು ಪ್ರತಿಯೊಂದು ಸುದ್ದಿ ಸಂಚಿಕೆಗಳೂ ಸಹ ಕಾಲಕ್ಕೆ ಅನುಗುಣವಾಗಿ ಹೇಗಿರಬೇಕು ಎಂಬುದರ ಕುರಿತಾಗಿ ನೀಲಿನಕ್ಷೆಯನ್ನೇ ತಯಾರಿಸಿಟ್ಟುಕೊಂಡಿರುವ ಆವ್ಯಕ್ತಿಯ ಮಾಧ್ಯಮ ಪ್ರಿತಿ ನನಗೂ ಇಷ್ಟವಾಯ್ತು ಆದರೆ ಅದು ಕಾರ್ಯ ಸಾಧುವೇ ಎಂಬ ಪ್ರಶ್ನೆ ಈಗ ನನ್ನ ತಲೆ ಕೊರೆಯುತ್ತಿದೆ.
ಮಾಧ್ಯಮಗಳ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ಮತ್ತೊರ್ವ ವಿಚಿತ್ರ ವ್ಯಕ್ತಿ ಪರಿಚಯವಾಗಿದ್ದು ದೂರದ ದಾವಣಗೆರೆಯಲ್ಲಿ. ಖಾಸಗಿ ರೇಡಿಯೋ ಚಾನೆಲ್ ಗಳ ಮಾತಿನ ಹಾವಳಿಯಿಂದ ತತ್ತರಿಸಿ ಹೋಗಿ, ಖಾಸಗಿ ಟಿವಿವಾಹಿನಿಗಳ ಆಧುನಿಕ ಕಾರ್ಯಕ್ರಮಗಳಿಗೆ ಹೊಂದಿಕೊಳ್ಳಲಾಗದೆ ಬಸವಳಿದಿರುವ ದಾವಣಗೆರೆಯ ಶಿಕ್ಷಕ ಸಹ ಮಾಧ್ಯಮಗಳ ಒಪ್ಪು ತಪ್ಪುಗಳ ಕುರಿತಾಗಿ ಬಲವಂತವಾಗಿಯೇ ನನ್ನ ಬಳಿ ಅವಲತ್ತುಕೊಂಡರು ನನ್ನಿಂದಲೂ ಯಾವುದೇ ಸಮಾಧಾನಕರ ಉತ್ತರಗಳು ದೊರೆಯದ ಕಾರಣವೋ ಏನೋ ಒಂದು ತೀರ್ಮಾನಕ್ಕೆ ಬಂದ ಅವರು ನನ್ನ ವಿಳಾಸ ಹಾಗೂ ಸಂಪರ್ಕ ಸಂಖ್ಯೆತೆಗೆದುಕೊಂಡು ಅಂತಿಮವಾಗಿ ಹೇಳಿದ್ದೇನು ಗೊತ್ತಾ? ನೋಡಿ ಸಾರ್ ಯಾವ್ ಯಾವ್ ಟೀವಿಲಿ ಏನೇನು ಅಚಾತುರ್ಯ ನಡಿತಾ ಇದೆ ಅನ್ನೋ ಪಟ್ಟಿ ನನ್ನ ಹತ್ತಿರ ಇದೆ. ಅವುಗಳಿಗೆಲ್ಲ ಪರಿಹಾರವನ್ನೂ ಸಹ ನಾನೇ ತಯಾರಿ ಮಾಡಿಟ್ಟಿದ್ದೇನೆ ನನಗೆ ಎಲ್ಲಾ ಚಾನೆಲ್ ಗಳಲ್ಲೂ ಯಾರ್ಯಾರೋ ಪರಿಚಯ ಇದ್ದಾರೆ ಈಗೆ ನಿಮ್ಮ ಚಾನೆಲ್ ಕಡೆಯಿಂದ ನೀವು ಪರಿಚಯ ಆಗಿದ್ದು ಒಳ್ಳೆದೇ ಆಯ್ತು ನಮಗೆ ಮುಂದಿನ ತಿಂಗಳಿಂದ ಬೇಸಿಗೆ ರಜೆ ಬರೋಬ್ಬರಿ ಎರಡು ತಿಂಗಳು ರಜಾ, ಒಂದಿಪ್ಪತ್ತು ದಿವಸ ಬೆಂಗಳೂರಿಗೆ ಬಂದು ಎಲ್ಲಾ ಚಾನೆಲ್ ಗಳನ್ನೂ ವಿಸಿಟ್ ಮಾಡಿ ಅವರವರ ತಪ್ಪಿನ ಬಗ್ಗೆ ಅರಿವು ಮಾಡಿಕೊಡುವ ಕಾರ್ಯಕ್ರಮ ಇದೆ ಬೆಂಗ್ಳೂರಲ್ಲೇ ಮೀಟ್ ಮಾಡೋಣ ನಿಮ್ ಚಾನೆಲ್ ಗೆ ಬರ್ತಿನಿ ಅಂತ ಹೇಳಿ ಹೊರಟು ಹೋದರು ಆದರೆ ಈ ಶಿಕ್ಷಕರ ಪ್ರಯತ್ನ ಫಲ ನೀಡೀತೇ ಎಂಬ ಚಿಂತೆಗೆ ನಾನು ಬಿದ್ದೆ.
ಮಾದ್ಯಮಗಳ ಧೋರಣೆ ಬಗ್ಗೆ ಗೆ ಜನಸಾಮಾನ್ಯರಲ್ಲಿ ಒಂದು ಅರಿವು ಮೂಡಿರುವುದಂತೂ ಸತ್ಯ. ಜವಾಬ್ದಾರಿ ಅರಿತು ಎಚ್ಚರಿಕೆಯಿಂದ ಕೆಲಸ ಮಾಡುವ ಸರದಿ ಈಗ ನಮ್ಮದು.

Tuesday, January 19, 2010

ಭಾರತೀಯ ಉನ್ನತ ಶಿಕ್ಷಣದ ತಲ್ಲಣಗಳು

ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಡೀಮ್ಡ್ ವಿಶ್ವವಿದ್ಯಾನಿಲಯಗಳ ಪೈಕಿ ೪೪ ಡೀಮ್ಡ್ ವಿಶ್ವವಿದ್ಯಾನಿಲಯಗಳ ಮಾನ್ಯತೆಯನ್ನು ರದ್ದುಗೊಳಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿರುವುದು ಸ್ವಾಗತಾರ್ಹ ಕ್ರಮ. ಕೇಂದ್ರ ಸರ್ಕಾರ ಡೀಮ್ಡ್ ವಿಶ್ವವಿದ್ಯಾನಿಲಯಗಳಿಗೆ ಮಾನ್ಯತೆ ನೀಡಿದ್ದು ಅಲ್ಲದೇ ಸ್ವಲ್ಪ ತಿಂಗಳುಗಳ ಹಿಂದಷ್ಟೇ ಡೀಮ್ಡ್ ಎಂಬ ಪದ ಕೈಬಿಟ್ಟು ಸ್ವತಂತ್ರವಾಗಿ 'ವಿಶ್ವವಿದ್ಯಾಲಯ' ಎಂಬ ಶಿರೋನಾಮೆಯನ್ನು ಬಳಸಲು ಅವುಗಳಿಗೆ ಅನುಮತಿ ನೀಡಿದಾಗಲೇ ನಾಗರೀಕರಲ್ಲಿ ಆತಂಕ ಎದುರಾಗಿತ್ತು. ಆ ಆತಂಕವನ್ನು ಸುಳ್ಳು ಮಾಡದ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಡೀಮ್ಡ್ ವಿವಿಗಳು ತಮ್ಮ ಸ್ವಾಯತ್ತತೆಗೆ ಕುಂದುಂಟುಮಾಡಿಕೊಂಡಿವೆ ಜೊತೆಗೆ ನಾಗರೀಕರ ನಾಡಿ ಮಿಡಿತ ಅರಿತ ಕೇಂದ್ರ ಸರ್ಕಾರ ಕಳಪೆ ಗುಣಮಟ್ಟ ಹಾಗೂ ಸ್ವಾರ್ಥಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಂತಹ ಡೀಮ್ಡ್ ವಿವಿಗಳ ಸ್ವಾಯತ್ತೆಯನ್ನು ರದ್ದುಗೊಳಿಸುವ ಪ್ರಸ್ಥಾವನೆ ನೀಡುವ ಮೂಲಕ ಪ್ರಜ್ಞಾವಂತ ನಾಗರೀಕರ ಆತಂಕಕ್ಕೆ ಮಂಗಳ ಹಾಡಿದೆ.
ಜ್ಞಾನಾಧಾರಿತ ಸಮಾಜ ನಿರ್ಮಾಣ ಈ ದಶಕದ ಸವಾಲೆಂದು ಸ್ವೀಕರಿಸಿರುವ ಯುಪಿಎ ಆಡಳಿತದ ಕೇಂದ್ರ ಸರ್ಕಾರ ಹೇಗಾದರೂ ಸರಿಯೇ ೨೦೧೫ರ ವೇಳೆಗೆ ಈ ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆಯನ್ನು ಶೇಖಡ 15ಕ್ಕೆ ಏರಿಸುವ ಗುರಿ ಇರಿಸಿಕೊಂಡು ಅದನ್ನು ತಲುಪಲು ಅವಿರತವಾಗಿ ಶ್ರಮಿಸುತ್ತಿದೆ. ದೇಶದಲ್ಲಿ ಪ್ರಸ್ತುತ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಶೇಖಡ 7ರ ಆಸುಪಾಸಿನಲ್ಲಿದೆ. 2015ಕ್ಕೆ ಈ ಪ್ರಮಾಣ ಶೇಖಡ 15ರಷ್ಟಾಗಬೇಕೆಂದರೆ ದೇಶದ ಜನಸಂಖ್ಯೆ ಹಾಗೂ ಯುವಜನತೆಯ ಲೆಕ್ಕಾಚಾರಗಳೆಲ್ಲವನ್ನು ಕೂಡಿ ಕಳೆದರೆ ಏಳು(೭) ಹದಿನೈದಾಗಬೇಕೆಂದರೆ ಸರಿಸುಮಾರು ಈಗಿರುವ ಉನ್ನತ ಶಿಕ್ಷಣದ ಸವಲತ್ತುಗಳು ಪುನಹ ಶೇಖಡ ೧೦೦ ರಷ್ಟು ಹೆಚ್ಚಾಗಬೇಕು ಈ ಹಿನ್ನೆಲೆಯಲ್ಲಿ ಈಗಿರುವ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಹಾಗೂ ಉಪನ್ಯಾಸಕರ ಸಂಖ್ಯೆ ಎಲ್ಲವೂ ಎರಡರಷ್ಟು ಹೆಚ್ಚಾಗಲೇ ಬೇಕಾದ ಅನಿವರ್ಯತೆ ಸರ್ಕಾರದ ಮುಂದಿದೆ. ಈ ಗುರಿಯನ್ನು ಕೇವಲ ಸರ್ಕಾರ ವೊಂದೇ ತಲುಪಲು ಸಾಧ್ಯವಿಲ್ಲ ಎಂಬುದನ್ನು ಚನ್ನಾಗಿಯೇ ಅರಿತಿರುವ ಸರ್ಕಾರ ಉನ್ನತ ಶಿಕ್ಷಣದ ಗುರಿಮುಟ್ಟಲು ಖಾಸಗಿಯವರನ್ನು ಅವಲಂಭಿಸಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಸರಳೀಕರಣ ಮಾಡಿದ ಪರಿಣಾಮ ಈಗ ಆಕ್ಷೇವನ್ನೇ ಅತಂತ್ರವನ್ನಾಗಿಸಿದೆ.
ದೇಶದಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಹೆಚ್ಚಾಗ ಬೇಕು ಎಂಬುದು ಪ್ರತಿಯೊಬ್ಬ ಪ್ರಜ್ಞಾವಂತರ ಆಶಯ ಆದರೆ ಅದನ್ನು ತಲುಪಿಸುವ ಆತುರದಲ್ಲಿ ಅದಕ್ಕಾಗಿಯೇ ಇರುವ ರೀತಿ ನೀತಿಗಳನ್ನು ಸರ್ಕಾರವೇ ಮರೆತು ಮುನ್ನಡೆದರೆ ದೇಶದ ಭವಿಷ್ಯದ ಗತಿಯೇನು? ವಿಶ್ವ ಸಂಸ್ಥೆಯ ಮುಂದೆ ತಲೆ ತಗ್ಗಿಸಿ ನಿಲ್ಲಬೇಕಲ್ಲ ಎಂಬ ಒಂದೇ ಒಂದು ಕಾರಣದಿಂದ ದೇಶದ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸಲು ಮುಂದಾದ ಸರ್ಕಾರ ಶಿಕ್ಷಣ ರಂಗದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಮುಂದಾಯಿತು ಹದಿನಾಲ್ಕು ವರ್ಷದ ಒಳಗಿರುವ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆತರಲೇ ಬೇಕು ಎಂಬ ಮಹಾತ್ವಾಕಾಂಕ್ಷೆಯಿಂದ ಮುನ್ನಡೆದ ಸರ್ಕಾರ ವಿಶ್ವವೇ ನಿಬ್ಬೆರಗಾಗಿ ನೋಡುವಂತಹ 'ಸರ್ವಶಿಕ್ಷಾ ಅಭಿಯಾನ' ದಂತಹ ಬೃಹತ್ ಪ್ರಮಾಣದ ಕಾರ್ಯಕ್ರಮವನ್ನೇನೋ ಅನುಷ್ಟಾನ ಗೊಳಿಸಿತು ಆದರೆ ಇದು ಮಕ್ಕಳನ್ನು ಶಾಲೆಗೆ ಕರೆತರಲಷ್ಟೇ ಯಶಸ್ವಿಯಾಯಿತೇ ವಿನಹ ಕಲಿಸುವಲ್ಲಿ ಯಾವುದೇ ಪ್ರಗತಿ ಸಾಧನೆಯಾಗಲಿಲ್ಲ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ಸಾಭೀತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಓದುತ್ತಿರುವ ಏಳನೇ ತರಗತಿಯ ಮಕ್ಕಳು ಎರಡನೇ ತರಗತಿಯ ಪುಸ್ತಕ ಓದಲು ಹೆಣಗಾಡುತ್ತಿರುವುದೇ ಇದಕ್ಕೆ ಉತ್ತಮ ಉದಾಹರಣೆ.
ಗುರಿ ಸಾಧನೆಯ ಆತುರದಲ್ಲಿ ಪ್ರಾಥಮಿಕ ಶಿಕ್ಷಣದ ಸ್ಥಿತಿಗತಿಯನ್ನು ಬುಡ ಮೇಲು ಮಾಡಿರುವ ಸರ್ಕಾರ ಈ ವಿದ್ಯಾಮಾನದಿಂದ ಎಚ್ಚೆತ್ತುಕೊಳ್ಳದೇ ಇರುವುದು ದುರಂತವೇ ಸರಿ.
ಇದುವರೆಗೂ ಸರ್ಕಾರಿ ವಲಯದಲ್ಲಿಯೇ ತಕ್ಕ ಮಟ್ಟಿಗೆ ಮುನ್ನಡೆಯುತ್ತಿದ್ದ ಉನ್ನತ ಶಿಕ್ಷಣವನ್ನು ಡೀಮ್ಡ್ ವಿವಿಗಳಿಗೆ ಧಾರೆ ಎರೆಯುವ ಮೂಲಕ ದೇಶದ ಭವಿಷ್ಯಕ್ಕೆ ಕುತ್ತು ತರುವಂತಹ ಕಾಯಕಕ್ಕೆ ಸರ್ಕಾರ ಮುಂದಾಗಿದೆ ಈ ಎಲ್ಲಾ ಬೆಳವಣಿಗೆಗಳ ನಂತರವೂ ಉನ್ನತ ಶಿಕ್ಷಣದ ಸ್ವಾಯತ್ತತೆಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಎರಡು ಬಾರಿ ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗಿದೆ ಡೀಮ್ಡ್ ವಿವಿಗಳು ಸ್ವತಂತ್ರವಾಗಿ ವಿಶ್ವವಿದ್ಯಾನಿಲಯ ಎಂಬ ಶಿರೋನಾಮೆ ಬಳಸಬಹುದು ಎಂದು ಅನುಮತಿ ನೀಡಿದ್ದ ಸರ್ಕಾರ ಸುಪ್ರೀಂನ ಆದೇಶದಂತೆ ಅದನ್ನು ಹಿಂಪಡೆದಿತ್ತು. ಈಗ ಮೂಲಸೌಕರ್ಯ ಒದಗಿಸದ ಹಾಗೂ ಶೈಕ್ಷಣಿಕ ಪರಿಗಣನೆಯ ಮೇಲೆ ನಡೆಯದೆ ಕುಟುಂಬದ ಆಸ್ತಿಯಂತೆ ಬಳಕೆಯಾಗುತ್ತಿದ್ದ ಡೀಮ್ಡ್ ವಿವಿಗಳ ಮಾನ್ಯತೆಯನ್ನು ರದ್ದುಗೊಳಿಸಲು ಮುಂದಾಗಿ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗಿದೆ.
ಶಿಕ್ಷಣ ಎಂಬುವಂತದ್ದು ಯಾವುದೇ ದೇಶದ ಹಾಗೂ ವ್ಯವಸ್ಥೆಯ ಪ್ರಗತಿ ಸೂಚಕವಿದ್ದಂತೆ ಈ ರಂಗದ ಯಾವುದೇ ಹೊಸ ನಿರ್ಧಾರಗಳನ್ನು ಘೋಷಿಸುವ ಮುನ್ನ ಜಾಗ್ರತೆ ಅಗತ್ಯ, ಅಂತಹ ಜವಾಬ್ದಾರಿಯುತವಾದ ಜಾಗೃತೆಯನ್ನು ಸರ್ಕಾರಗಳು ವಹಿಸುವುದು ಅತ್ಯಗತ್ಯ. ಖಾಸಗೀಕರಣ , ಉದಾರೀಕರಣ ಏನೇ ಇರಲಿ ಅವುಗಳ ಲಾಲನೆ ಪಾಲನೆಯ ಕುಣಿಕೆ ಸರ್ಕಾರದ ಕೈಯಲ್ಲೇ ಇರಬೇಕು ಈಗಲೂ ಅದು ಇದೆ, ಆದಾಗ್ಯೂ ಸರ್ಕಾರದ ಕಣ್ತಪ್ಪಿಸಿ ಗುಣಮಟ್ಟದಲ್ಲಿ ರಾಜಿ ಹಾಗೂ ಸ್ವಾರ್ಥ ಸಾಧನೆ ನಡೆಯುತ್ತಲೇ ಸಾಗಿದೆ ಎಂದರೆ ಅದು ಸರ್ಕಾರದ ಆಡಳಿತದ ವೈಕರಿಯನ್ನು ಪ್ರಶ್ನಿಸಬೇಕಾಗುತ್ತದೆ. ಸರ್ಕಾರ ಇಂತಹ ಪರೀಕ್ಷೆಗೆ ತನ್ನನ್ನು ತಾನು ಆಗ್ಗಾಗ್ಗೆ ಒಡ್ಡಿಕೊಳ್ಳುತಲೇ ಇರಬಾರದು. ಈಗೇನು ಸರ್ಕಾರ ತನ್ನ ವಿವೇಚನೆಯಿಂದ ಡೀಮ್ಡ್ ವಿವಿಗಳ ಮಾನ್ಯತೆ ರದ್ದು ಮಾಡಲು ಮುಂದಾಗಿಲ್ಲ ಕೆಲವು ಡೀಮ್ಡ್ ವಿವಿಗಳು ವಾಣಿಜ್ಯ ಉದ್ದೇಶದಿಂದ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲ ಶೈಕ್ಷಣಿಕ ನಿಯಮ ಮತ್ತು ಮಾನದಂಡಗಳನ್ನು ಗಾಳಿಗೆ ತೂರಿವೆ ಆದ್ದರಿಂದ ಇವುಗಳ ವಿರುದ್ದ ಕ್ರಮ ಜರುಗಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಲಾಗಿತ್ತು ಈ ಹಿನ್ನೆಲೆಯಲ್ಲಿ ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಸಚಿವಾಲಯ ಕ್ರಮಕ್ಕೆ ಮುಂದಾಗಿದೆ. ಈ ಅಂಶ ಸರ್ಕಾರಕ್ಕೆ ಉನ್ನತ ಶಿಕ್ಷಣದ ಏಳು ಬೀಳುಗಳ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ.

Friday, December 4, 2009

ವಾಸ್ತವ: ಮತ್ತೆ ಮೈತಳೆದ ಅಜ್ಞಾತ ದೇವಾಲಯ

ವಾಸ್ತವ: ಮತ್ತೆ ಮೈತಳೆದ ಅಜ್ಞಾತ ದೇವಾಲಯ

ಮತ್ತೆ ಮೈತಳೆದ ಅಜ್ಞಾತ ದೇವಾಲಯ






ಬರೋ ಬರಿ ಎಂಟು ವರ್ಷಗಳ ಕಾಲ ಸಾಂಸ್ಕೃತಿಕ ರಾಜ್ಯದಾನಿ ಮೈಸೂರಿನಲ್ಲಿ ಕಳೆದ ನನಗೆ ಅಲ್ಲಿಯ ಆಸುಪಾಸಿನ ಎಲ್ಲಾ ಸ್ಥಳಗಳ ಪರಿಚಯವೂ ಇದೆ. ಎಲ್ಲವೂ ಮತ್ತೊಮ್ಮೆ ಮಗದೊಮ್ಮೆ ನೋಡಿರುವ ಸ್ಥಳಗಳೇ ಆಗಿರುವುದರಿಂದ ಹೊಸ ಹೊಸ ಅನುಭವ ಹೊಂದುವುದು ದುಸ್ಥರವೇ ಸರಿ. ಮೊನ್ನೆ ಮೊನ್ನೆ ಮೈಸೂರಿಗೆ ಹೋದ ಸಂದರ್ಭ ನಾಲ್ಕು ಗೋಡೆಗಳ ಮಧ್ಯೆ ಹರಟೆ ಹೊಡೆಯುವುದಕ್ಕಿಂತಲೂ ಆತ್ಮೀಯರೊಂದಿಗೆ ಸ್ವತಂತ್ರವಾಗಿ ಓಡಾಡಿಕೊಂಡು ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಬೇಕೆನಿಸಿತು ಎಲ್ಲವೂ ನೋಡಿರುವ ಸ್ಥಳಗಳೇ ಆಗಿರುವುದರಿಂದ ಎಲ್ಲಿಗೆ ಹೋಗುವುದು? ಅಲ್ಲಿ ನಮಗೆ ಸಿಗುವ ಮನೋಲ್ಲಾಸವಾದರೂ ಎಷ್ಟು ಪ್ರಮಾಣದ್ದು ಎಂಬ ಲೆಕ್ಕಾಚಾರವೇ ಮೇಲಾಯ್ತು. ಹಾಗಿದ್ದರೆ ಐತಿಹಾಸಿಕವಾಗಿ ಪ್ರವಾಸಿಗರ ಸ್ವರ್ಗ ಎಂದೆನಿಸಿಕೊಂಡಿರುವ ಮಹಿಷನೂರಿನಂತಹ ಮೈಸೂರು ಇಷ್ಟು ಬೇಗ ಆಕರ್ಷಣೆ ಕಳೆದುಕೊಂಡಿತೆ ಎಂಬ ಪ್ರಶ್ನೆಗಳು ಮನದಾಳದಲ್ಲಿ ಮೂಡತೊಡಗಿದವು. ಆ ಕ್ಷಣದಲ್ಲಿ ಇದ್ದಕ್ಕಿದಂತೆ ನೆನಪಾಗಿದ್ದು ಇಷ್ಟು ವರ್ಷಗಳ ಕಾಲ ಕಳೆದು ಹೋಗಿದ್ದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ.

ಹಲವು ವರ್ಷಗಳ ಹಿಂದೆಯೇ ಇತಿಹಾಸದ ಕಾಲಗರ್ಭದಲ್ಲಿ ಲೀನವಾಗಿ ಕೆಆರ್ಎಸ್ ನ ಹಿನ್ನೀರಿನಲ್ಲಿ ಮುಳುಗಿ ಮರೆಯಾಗಿದ್ದ ಹೊಯ್ಸಳ ಶೈಲಿಯ ದೇವಾಲಯವೊಂದು ಮೈಸೂರು ಇತಿಹಾಸದ ಪುಟಗಳನ್ನು ಪುನಹ ಆಕ್ರಮಿಸಿಕೊಳ್ಳುವ ಪ್ರಯತ್ನದಲ್ಲಿದೆ ಎಂಬುದರ ಅರಿವಾಗಿದ್ದು ವೇಣುಗೋಪಾಲಸ್ವಾಮಿ ದೇವಾಲಯದ ಅಂಗಳದಲ್ಲಿ ನಿಂತು ನೋಡಿದಾಗಲೇ. ಹೌದು ಪ್ರವಾಸಿಗರ ಊರು ಎಂದೆನಿಸಿಕೊಂಡಿರುವ ಮೈಸೂರಿನ ಕಿರೀಟಕ್ಕೆ ಈಗ ಮತ್ತೊಂದು ಗರಿ ಸೇರ್ಪಡೆಗೊಳ್ಳುತ್ತಿದೆ. 1909ರಲ್ಲಿ ಕನಂಬಾಡಿ ಬಳಿ ನಾಡಿನ ಜೀವನದಿ ಕಾವೇರಿಗೆ ಅಣೆ ನಿರ್ಮಿಸಬೇಕು ಎಂದು ಯೋಜನೆ ತಯಾರಾದಾಗಲೇ ಈ ದೇವಾಲಯ ಮುಳುಗಡೆಯಾಗಲಿದೆ ಎಂಬುದು ಖಚಿತವಾಗಿತ್ತು ಆದರೆ ಆ ಹೊತ್ತಿಗೆ ಅದನ್ನು ರಕ್ಷಿಸಲು ಯಾರೂ ಮುಂದೆ ಬಂದಿರಲಿಲ್ಲ. 1930ರಲ್ಲಿ ಕೃಷ್ಣರಾಜ ಸಾಗರ ಯೋಜನೆ ಪೂರ್ಣಗೊಂಡಾಗ ಈ ದೇವಾಲಯ ಕೆಆರ್ಎಸ್ ಹಿನ್ನೀರಿನಲ್ಲಿ ಮುಳುಗಿ ಹೋಗಿತ್ತು. 2000ನೇ ಇಸವಿ ನಂತರ ರಾಜ್ಯದಲ್ಲಿ ಮೇಲಿಂದ ಮೇಲೆ ವಾರ್ಷಿಕವಾಗಿ ಕಾಣಿಸಿಕೊಂಡ ಬರ ಈ ಐತಿಹಾಸಿಕ ದೇವಾಲಯದ ಜಲ ಬಂಧನಕ್ಕೆ ಬಿಡುಗಡೆ ಹಾಡಿತು.


ಈ ಸಂದರ್ಭವನ್ನು ಸದ್ಭಳಕೆ ಮಾಡಿಕೊಂಡ ಖೋಡೆಸ್ ಕಂಪನಿಯ ಶ್ರೀ ಹರಿಖೋಡೆ ಜಲಧಾರೆಯಲ್ಲಿ ಮಿಂದು ಹಲವು ವರ್ಷಗಳಿಂದ ಅಜ್ಞಾತವಾಗಿದ್ದ ಅಮೂಲ್ಯ ಸಾಂಸ್ಕೃತಿ ಸಿರಿಯೊಂದನ್ನು ಪುನರ್ ನಿರ್ಮಿಸುವ ಕಾಯಕಕ್ಕೆ ಕೈ ಹಾಕಿ ಯಶಸ್ಸಿನ ಮೆಟ್ಟಿಲೇರಿದ್ದಾರೆ. ಏಳುನೂರು ವರ್ಷಗಳ ಇತಿಹಾಸವುಳ್ಳ ಐತಿಹಾಸಿಕ ದೇವಾಲಯವನ್ನು ಬೇರೆಡೆಗೆ ಸ್ಥಳಾಂತರಿಸಿ ಪುನರ್ ಪ್ರತಿಷ್ಟಾಪಿಸುವ ಕಾಯಕಕ್ಕೆ ಕೋಟ್ಯಾಂತರ ರೂಪಾಯಿ ಹಣ ವ್ಯಯಿಸಲಾಗಿದೆ. ಇಂದಿಗೂ ನಿತ್ಯವೂ ನೂರಾರು ಜನ ಕಾಯಕದಲ್ಲಿ ನಿರತರಾಗಿದ್ದಾರೆ. ಇದೆಲ್ಲದರ ನಡುವೆಯೂ ಮಹತ್ವ ಎನಿಸುವುದೆಂದರೆ ನಮ್ಮ ಕೈ ಜಾರಿಯೇ ಹೋಯಿತು ಎಂದುಕೊಂಡಿದ್ದ ಮಹತ್ವದ ಶಿಲ್ಪ ಕಲಾಕೃತಿಯೊಂದು ಪುನಹ ನಮ್ಮದಾಗಿದೆ. ನಮಗಷ್ಟೆ ಅಲ್ಲ ನಮ್ಮ ಮುಂದಿನ ಪೀಳಿಗೆಯೂ ಸಹ ಇದನ್ನು ನೋಡಿ ಆನಂದಿಸುವ ಅವಕಾಶವೊಂದನ್ನು ಹರಿಖೋಡೆ ನಮಗಿತ್ತಿದ್ದಾರೆ.

"ವೇಣುಗೋಪಾಲಸ್ವಾಮಿ ದೇವಾಲಯ ಮುಳುಗಡೆಯಾಗಿತ್ತು, ಕೆಆರ್ಎಸ್ನಲ್ಲಿ ನೀರು ಕಾಲಿಯಾದಾಗ ಅದು ಕಾಣುತ್ತಿತ್ತಂತೆ ಆದರೆ ಈಗ ಅದನ್ನು ಬೇರೆಡೆಗೆ ವರ್ಗಾಯಿಸಿ ಪುನರ್ ಪ್ರತಿಷ್ಟಾಪಿಸಲಾಗಿದೆಯಂತೆ ಎಂಬ ಸುದ್ದಿ ಬಹಳ ಮಹತ್ವದ್ದು ಎಂದೆನಿಸಿಕೊಳ್ಳಬೇಕು ಎಂದರೆ ಪುನರ್ ಪ್ರತಿಷ್ಟಾಪನೆಗೊಂಡಿರುವ ದೇವಾಲಯವನ್ನು ನೋಡಲೇ ಬೇಕು ಆ ಬೃಹತ್ ದೇವಾಲಯದ ಅಂಗಳದಲ್ಲಿ ನಿಂತಾಗಲೇ ಆ ಸುದ್ದಿ ಅದೆಷ್ಟು ಮಹತ್ವದ್ದು ಎಂಬುದರ ಅರಿವಾಗುತ್ತದೆ. ಭಾರತದಲ್ಲಿ ಗುಡಿಯಿಂದ ಹಿಡಿದು ಮಂದಿರದಂತಹ ವಿವಿಧ ಗಾತ್ರದ ದೇವಾಲಯಗಳಿವೆ, ಆದರೆ ಒಂದೆರಡು ದಿವಸಗಳಲ್ಲಿ ಅಥವಾ ತಿಂಗಳಿನ ಲೆಕ್ಕದಲ್ಲಿ ಸ್ಥಳಾಂತರಿಸಬಹುದಾದ ಗಾತ್ರದ ದೇವಾಲಯ ಇದಲ್ಲ. ಒಂದೊಂದು ಕಲ್ಲುಗಳೂ ಸಹ ಬಹಳ ಸೂಕ್ಷವಾಗಿ ಎಚ್ಚರಿಕೆಯಿಂದ ಸಾಗಿಸಬೇಕಾದಂತಹ ದೇವಾಲಯ ಅದು. ಬಹುಷ ಇಲ್ಲಿನ ಒಂದೊಂದು ಕಲ್ಲುಗಳನ್ನು ಸಹ ಸಾಗಿಸಲು ಅದೆಷ್ಟು ದಿವಸಗಳು ಉರುಳಿವೆಯೋ, ಆಧುನಿಕ ಶತಮಾನದಲ್ಲಿ ಉನ್ನತ ತಂತ್ರಜ್ಞಾನ ಬಳಸಿ ನಿರ್ಮಿಸುತ್ತಿರುವ ದೇವಾಲಯ ಆಗಬಹುದು ಅಥವಾ ಯಾವುದೇ ಕಟ್ಟಡ ಇರಬಹುದು ಅವುಗಳು ನೀರಿನಲ್ಲಿ ಮುಳುಗದೇ ಇದ್ದರೂ ಸಹ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಪುನರ್ ಪ್ರತಿಷ್ಟಾಪಿಸಲಾಗುವುದಿಲ್ಲ ಆದರೆ ಏಳು ಶತಮಾನಗಳ ಹಿಂದೆ ನಿರ್ಮಿಸಿರುವ ಸಂಪೂರ್ಣ ಕಲ್ಲಿನ ಕಟ್ಟಡ ಅನೇಕ ಶತಮಾನಗಳು ಉರುಳಿದ ಮೇಲೂ ಅದು ಅಳಿಯದೇ ನಿಲ್ಲುತ್ತದೆ ಎಂದರೆ ಅದೆಂತಹ ಸುಸ್ಥಿರ ತಂತ್ರಜ್ಞಾನವಿರಬಹುದು ಎಂಬ ಆಶ್ಚರ್ಯ ಎಂತಹವರನ್ನು ನಿಬ್ಬೆರಗಾಗಿಸುತ್ತದೆ.

ದೇವಾಲಯ ಸ್ಥಳಾಂತರದೊಂದಿಗೆ ಕೆಲ ಅನುಕೂಲಗಳು ನೋಡುಗರಿಗೆ ದೊರೆತಂತಾಗಿದೆ. ಮುಳುಗಡೆಗೆ ಮುನ್ನ ಹಾಗೂ ಮುಳುಗಡೆಯ ನಂತರ ಹಾನಿಗಿಡಾಗಿದ್ದ ಶಿಲ್ಪಕಲಾಕೃತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದುರಸ್ಥಿಗೊಳಿಸಲಾಗಿದ್ದು ಸಂಪೂರ್ಣ ಭಗ್ನಾವಶೇಷಗೊಂಡಿದ್ದ ಕಲಾಕೃತಿಗಳನ್ನು ಪುನರ್ ನಿರ್ಮಿಸಲಾಗಿದೆ. ತಮಿಳುನಾಡಿನಿಂದ ಆಗಮಿಸಿರುವ ಶಿಲಾ ಕಲಾಕಾರರು ಇದಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಹಲವು ವರ್ಷಗಳ ಕಾಲ ನೀರಿನಲ್ಲಿ ಮುಳುಗಿ ಪಾಚಿಕಟ್ಟಿದ್ದ ಕಲ್ಲುಗಳಿಗೆ ಹೊಳಪು ನೀಡಲಾಗಿದ್ದು ದೇವಾಲಯ ಹೊಚ್ಚ ಹೊಸತರಂತೆ ಮಿಂಚುತ್ತಿದ್ದು ಮತ್ತಷ್ಟು ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಂಡಿದೆ.

ಇಲ್ಲಿನ ದೇವಾಲಯಕ್ಕೆ ಬಳಸಲ್ಪಟ್ಟಿರುವ ಕಲ್ಲು ಬೇಲೂರು, ಹಳೇಬೀಡಿನ ಕಲಾಕೃತಿಗಳಲ್ಲಿ ಬಳಸಿರುವ ಕಲ್ಲಿಗಿಂತಲೂ ಒರಟಾಗಿದ್ದು ಭಾರವಾಗಿವೆ ಈ ಪರಿಯ ಕಲ್ಲಿನ ದೇವಾಲಯದ ಸ್ಥಳಾಂತರ ಸಾಧನೆಯೇ ಸರಿ. ಕೃಷ್ಣರಾಜ ಸಾಗರದ ದಂಡೆಯ ಪ್ರದೇಶಕ್ಕೆ ಸ್ಥಳಾಂತರಗೊಂಡಿರುವ ದೇವಾಲಯ ಬರೋಬ್ಬರಿ ಎರಡೆಕೆರೆ ಪ್ರದೇಶದಷ್ಟು ವಿಸ್ಥಾರವಾಗಿದೆ.

ದೇವಾಲಯದ ಸ್ಥಳಾಂತರ ಈಗಾಗಲೇ ಪೂರ್ಣಗೊಂಡಿದ್ದು ಪುನರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ದೇವಾಲಯ ಲೋಕಾರ್ಪಣೆಗೊಳ್ಳಲು ಇನ್ನೊಂದಾರು ತಿಂಗಳಾದರೂ ಬೇಕಾಗಬಹುದು, ಹೊಸ ಕನ್ನಬಾಡಿಯ ಸನಿಹದಲ್ಲಿರುವ ದೇವಾಲಯಕ್ಕೆ ತಲುಪಲು ಸೂಕ್ತ ರಸ್ತೆಯ ಅಗತ್ಯವಿದೆ. ಮುಂದಿನ ದಿವಸಗಳಲ್ಲಿ ಇದು ಮೈಸೂರಿನ ಅಚ್ಚು ಮೆಚ್ಚಿನ ಪ್ರೇಕ್ಷಣೀಯ ಸ್ಥಳವಾಗುವ ಎಲ್ಲಾ ಲಕ್ಷಣಗಳೂ ಘೋಚರಿಸುತ್ತಿವೆ. ಪುನಹ ಕಾವೇರಿ ದಂಡೆಯಲ್ಲಿಯೇ ಮೈದಳೆದಿರುವ ದೇವಾಲಯವನ್ನು ನೋಡ ನೋಡುತ್ತ ಇಡೀ ದಿವಸ ಸರಿದು ಹೋಗ್ಗಿದ್ದರೆ ಅರಿವೇ ಆಗಲಿಲ್ಲ, ದೇವಾಲಯದ ಎರಡು ದಿಕ್ಕುಗಳನ್ನು ಕಾವೇರಿಯ ಹಿನ್ನೀರು ಆಕ್ರಮಿಸಿಕೊಂಡಿರುವುದು ಮಾತ್ರ ಮತ್ತೆ ದೇವಾಲಯ ಯಾವಾಗ ಮುಳುಗುತ್ತದೆಯೋ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತಲೇ ಇತ್ತು.



Friday, October 9, 2009

ಸಹ್ಯಾದ್ರಿಯಲ್ಲಿ ಇಬ್ಬಾಗದ ಸಂಕಟ





ಮುಖ್ಯಮಂತ್ರಿಗಳಾದವರು ತಮ್ಮ ಸ್ವಕ್ಷೇತ್ರಗಳನ್ನು ಜಿಲ್ಲೆಯನ್ನಾಗಿ ಪರಿವರ್ತಿಸಿಕೊಳ್ಳುವ ಕೆಲಸ ಇತ್ತೀಚಿನ ದಿವಸಗಳಲ್ಲಿ ಹಚ್ಚಾಗುತ್ತಿದೆ. ಆಡಳಿತದ ಹಿತದೃಷ್ಟಿಯಿಂದ ವಿಶಾಲವಾಗಿರುವ ಜಿಲ್ಲೆಗಳು ಮತ್ತಷ್ಟು ಕಿರಿದಾಗಬೇಕು ಎಂಬುದು ಎಲ್ಲರೂ ಒಪ್ಪುವಂತಹ ವಿಷಯವೇ ಆದರೆ ಅಂತಹ ಅಗತ್ಯತೆಗಳು ಎಲ್ಲೆಲ್ಲಿವೆಯೋ ಅಲ್ಲಿ ಆ ಕೆಲಸ ಈಡೇರಬೇಕೋ ಹೊರತು ಕೇವಲ ಇದು ನಾನು ಪ್ರತಿನಿಧಿಸುತ್ತಿರುವ ಜಿಲ್ಲೆ ಎಂಬ ಏಕೈಕ ಕಾರಣಕ್ಕೆ ಗಡಿಯೊಂದಿಗೆ ಭಾವನೆಗಳನ್ನೂ ಮೈಗೂಡಿಸಿಕೊಂಡಿರುವ ಪ್ರದೇಶಗಳನ್ನು ಒಡೆದು ಒಡೆದು ಹೋಳು ಮಾಡುವಂತದ್ದು ಎಷ್ಟರ ಮಟ್ಟಿಗೆ ಸರಿ?
ಈಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ತಮ್ಮ ಸ್ವಕ್ಷೇತ್ರ ಶಿಕಾರಿಪುರವನ್ನು, ಶಿವಮೊಗ್ಗದಿಂದ ಬೇರ್ಪಡಿಸಿ ಪ್ರತ್ಯೇಕ ಜಿಲ್ಲೆಯನ್ನಾಗಿಸಲು ಸಕಲ ಏರ್ಪಾಡುಗಳೆಲ್ಲವನ್ನೂ ಮಾಡಿಕೊಳ್ಳುತ್ತಿದ್ದಾರೆ ಎಂಬ ಗುಲ್ಲು ಈಗ ಸಹ್ಯಾದ್ರಿ ಸೆರಗಿನ ತುಂಬಾ ರೆಕ್ಕೆ ಪುಕ್ಕಗಳೆಲ್ಲವನ್ನೂ ಕಟ್ಟಿಕೊಂಡು ಸುತ್ತಾಡುತ್ತಿದೆ. ಒಂದೆಡೆ ಶಿಕಾರಿಪುರ ಕ್ಷೇತ್ರದ ಜನತೆಗೆ ಇದು ಸಂತೋಷವನ್ನು ನೀಡಿದರೆ ಸಹ್ಯಾದ್ರಿಯ ಮಲೆಗಳೊಂದಿಗೆ ಭಾವನಾತ್ಮಕ ಬೆಸುಗೆ ಹೊಂದಿರುವ ಅಖಂಡ ಶಿವಮೊಗ್ಗದ ಜನತೆಯ ಮನಸ್ಸಿನಲ್ಲಿ ಈ ವಿಚಾರ ತಲ್ಲಣವನ್ನುಂಟು ಮಾಡಿದೆ. ಮತದಾರರಿಗೆ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳ ರುಚಿ ತೋರಿಸಿ ಅದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಈ ಜನಪ್ರಿಯತೆಯನ್ನು ಮತಗಳನ್ನಾಗಿ ಪರಿವರ್ತಿಸಿ ಕೊಳ್ಳುವ ಹುನ್ನಾರ ಇದಾಗಿದ್ದು ಮತ್ತೇನು ಅಲ್ಲ ಎಂಬುದನ್ನು ಈ ಹಿಂದಿನ ಉದಾಹರಣೆಗಳು ನಿರೂಪಿಸಿವೆ.
ತಮ್ಮ ಸ್ವಕ್ಷೇತ್ರಗಳನ್ನು ಜಿಲ್ಲೆಯನ್ನಾಗಿ ರೂಪಿಸಿಕೊಳ್ಳುವ ಕೆಲಸ ಪ್ರಾರಂಭವಾಗಿದ್ದು ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲರ ಕಾಲದಲ್ಲಿ ೧೫.೦೮.೧೯೯೭ ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್, ದಾವಣಗೆರೆಯನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಿದರು. ಆದರೆ ಆಡಳಿತ ದೃಷ್ಟಿಯಿಂದ ಅದು ಅಗತ್ಯವೂ ಆಗಿತ್ತು. ಅಂದು ದಾವಣಗೆರೆಯೊಂದಿಗೆ ಇನ್ನಿತರೆ ಜಿಲ್ಲೆಗಳೂ ಸಹ ಅಸ್ಥಿತ್ವಕ್ಕೆ ಬಂದವು, ಆನಂತರ ಸರಿಯಾಗಿ ಹತ್ತು ವರ್ಷಗಳ ನಂತರ ೨೪.೦೮.೨೦೦೭ರಂದು ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಸ್ವಕ್ಷೇತ್ರ ರಾಮನಗರಕ್ಕೆ ಜಿಲ್ಲೆಯ ಸ್ಥಾನಮಾನ ದೊರಕಿಸಿಕೊಟ್ಟರು. ಈಗ ಈ ಹಿಂದಿನ ಮುಖ್ಯಮಂತ್ರಿಗಳು ಹಾಕಿಕೊಟ್ಟಿರುವ ಪರಂಪರೆಯನ್ನು ಯಡಿಯೂರಪ್ಪನವರೂ ಮುಂದುವರಿಸಲು ಮುಂದಾಗಿದ್ದು ಶಿಕಾರಿಪುರವನ್ನು ಜಿಲ್ಲೆಯನ್ನಾಗಿಸಲು ಮುಂದಾಗಿದ್ದಾರೆ. ಆದರೆ ಅಗತ್ಯ ಸಿದ್ದತೆಗಳೆಲ್ಲವೂ ತೆರೆಮರೆಯಲ್ಲಿ ನಡೆಯುತ್ರಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕನ್ನು ಸೇರಿಸಿ ಶಿಕಾರಿಪುರವನ್ನು ಜಿಲ್ಲೆಯನ್ನಾಗಿಸಬೇಕೆಂಬ ಪ್ರಯತ್ನ ಹಲವು ತಿಂಗಳುಗಳಿಂದ ನಡೆಯುತ್ತಿದ್ದು ಇದಕ್ಕೆ ಇಂಬು ನೀಡುವಂತೆ ಶಿಕಾರಿಪುರಕ್ಕೆ ೨೯೧ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಮುಖ್ಯಮಂತ್ರಿಗಳು ಈ ವಾಸ್ತವವನ್ನು ಅಲ್ಲಗಳೆಯುತ್ತಿದ್ದಾರೆ ಆದಾಗ್ಯೂ ತಾಲ್ಲೂಕು ಕೇಂದ್ರ ಶಿಕಾರಿಪುರದ ಆಸ್ಪತ್ರೆಯನ್ನು ಜಿಲ್ಲಾಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಸುತ್ತೋಲೆಯನ್ನು ಹೊರಡಿಸಲಾಗಿದೆ.
ಹಾಗೆ ನೋಡಿದರೆ ಮತ್ತೊಂದು ತಾಲ್ಲೂಕು ಹಾಗೂ ಉಪವಿಭಾಗದ ಕೇಂದ್ರ ಸ್ಥಾನವನ್ನು ಹೊಂದಿರುವ ಸಾಗರ ಆಡಳಿತಾತ್ಮಕವಾಗಿ ಜಿಲ್ಲಾ ಕೇಂದ್ರಕ್ಕೆ ಸೂಕ್ತ ಸ್ಥಳ ಎಂದು ಅಲ್ಲಿಯ ಜನತೆ ಈಗಾಗಲೇ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಆದರೆ ಸ್ವಕ್ಷೇತ್ರ ವ್ಯಾಮೋಹಉಳ್ಳವರಿಗೆ ಆ ಜನರ ಕೂಗಾದರೂ ಹೇಗೆ ಕೇಳಿಸೀತು?
ಹೆಚ್ಚು ಹೆಚ್ಚು ಜಿಲ್ಲೆಗಳಾಗಬೇಕೆಂಬುದು ಎಲ್ಲರ ಆಶಯ ಆದರೆ ಯಾವುದೇ ಒಂದು ಸ್ಥಳವನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಮೊದಲು ಆ ಬಗ್ಗೆ ಚಿಂತನೆ ಅಗತ್ಯ, ಕೇವಲ ತಮ್ಮ ತಮ್ಮ ರಾಜಕೀಯು ಹಿತಾಸಕ್ತಿಗಾಗಿ ಹಾಗೂ ರಾಜಕಾರಣಿಗಳ ಭವಿಷ್ಯದ ಅಸ್ಥಿತ್ವಕ್ಕಾಗಿ ಜಿಲ್ಲೆಗಳನ್ನಾಗಿ ಪರಿವರ್ತಿಸುತ್ತಾ ಸಾಗಿದರೆ ಅದರಿಂದ ಜನತೆಯ ಕಲ್ಯಾಣವನ್ನು ನಿರೀಕ್ಷಿಸಲಾಗುವುದಿಲ್ಲ. ಇಂತದ್ದೇ ಪರಿಪಾಟ ಹೀಗೆಯೇ ಮುಂದುವರಿದರೆ ಮುಂದೆ ಹರದನಹಳ್ಳಿ, ಪಡುವಲಹಿಪ್ಪೆಗಳೂ ಒಂದೊಂದು ಪ್ರತ್ಯೇಕ ಜಿಲ್ಲೆಗಳಾಗುವ ದಿವಸಗಳು ದೂರವಾಗುವುದಿಲ್ಲ.

Sunday, August 2, 2009

ಸಮಕಾಲೀನ ಶಿಕ್ಷಣದ ತಲ್ಲಣಗಳು

ದೇಶದ ಶಿಕ್ಷಣ ರಂಗದಲ್ಲಿ ಮತ್ತೊಂದು ಮಹತ್ತರವಾದ ಕ್ರಾಂತಿ ಮಾಡಲು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ತುದಿಗಾಲಲ್ಲಿ ನಿಂತಿದ್ದಾರೆ. ಈ ಕಾರ್ಯಕ್ಕಾಗಿ ತನ್ನ ಸಚಿವಾಲಯವನ್ನು ಸಜ್ಜುಗೊಳಿಸಿಕೊಂಡು ಕಾಯುತ್ತಿದ್ದಾರೆ. ಈ ಕುರಿತಂತೆ ತಿಂಗಳ ಹಿಂದೆ ಪತ್ರಿಕಾ ಗೋಷ್ಠಿ ನಡೆಸಿ ತಮ್ಮ ಕ್ರಾಂತಿಕಾರಕ ವಿಚಾರಗಳನ್ನು ಹಂಚಿಕೊಂಡ ನಂತರ ದೇಶದಾದ್ಯಂತ ಪರ ವಿರುದ್ಧ ಅಭಿಪ್ರಾಯಗಳು ಎಣೆ ಇಲ್ಲದಂತೆ ಪ್ರಕಟಗೊಂಡಿದ್ದವು ಆನಂತರ ತಣ್ಣಗಾಗಿದ್ದ ಸಚಿವರು ಪುನಹ ಕಳೆದ ಶನಿವಾರ ತಮ್ಮ ಈ ಹಿಂದಿನ ನಿಲುವನ್ನು ಪುನಹ ಸ್ಪಷ್ಟಪಡಿಸಿದ್ದಾರೆ. ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶದಲ್ಲಿರುವ ಎಲ್ಲಾ ರಾಜ್ಯಗಳು ಸಹ ಏಕರೂಪ ಪರಿಕ್ಷಾ ಪದ್ದತಿ ಜಾರಿ ಮಾಡಲು ಆದೇಶಿಸಿದ್ದಾರೆ. ಆದೇಶ ಪಾಲಿಸದೇ ಇದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬ ಗಡುವನ್ನು ಸಹ ಅವರು ನೀಡಿದ್ದಾರೆ. ಸಚಿವರ ನೂತನ ಕಾರ್ಯಕ್ರಮವನ್ನು ವಿವಿಧ ಮಗ್ಗುಲುಗಳಿಂದ ನೋಡಿದರೆ ಎಲ್ಲಾ ಪದ್ಧತಿಗಳಲ್ಲಿ ಇರುವಂತೆ ನೂತನ ಶೈಕ್ಷಣಿಕ ಪದ್ಧತಿಯಲ್ಲಿಯೂ ವಿವಿಧ ಲೋಪ ದೋಷಗಳಿವೆ ಜೊತೆ ಜೊತೆಗೆ ಅನುಕೂಲಗಳು ಇವೆ. ಆದರೆ ಜಾರಿಗೆ ಬರಲಿರುವ ಪದ್ಧತಿ ಕೇವಲ ಸರ್ಕಾರ ತನ್ನ ಹುಳುಕುಗಳನ್ನು ಮುಚ್ಚಿಕೊಂಡು ಜಗತ್ತಿನ ಮುಂದೆ ದೊಡ್ಡ ಮನುಷ್ಯನಂತೆ ಪೋಸು ಕೊಡಲಷ್ಟೇ ಸೀಮಿತವಾಗಬಾರದು ಎಂಬ ತಲ್ಲಣ ಪ್ರಜ್ಞಾವಂತರನ್ನು ಕಾಡುತ್ತಿದೆ.
ಸ್ವಾತಂತ್ರಾನಂತರ ಸಂವಿಧಾನದಲ್ಲಿ ಈ ದೇಶದ ಪ್ರತಿಯೊಬ್ಬರಿಗೂ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ನೀಡುವುದಾಗಿ ಘೋಷಿಸಿದ ಪರಿಣಾಮ ಈ ಮೌಲ್ಯಗಳನ್ನು ಜಾರಿಗೆ ತರುವ ದೃಷ್ಟಿಯಿಂದ ಸರ್ಕಾರ ಶಿಕ್ಷಣಕ್ಕೆ ಮಾರುಹೋಯಿತು. ದೇಶದ ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡಲೇ ಬೇಕಾದ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ ಶಿಕ್ಷಣಕ್ಕೆ ವಿವಿಧ ರೀತಿಯ ಪ್ರೋತ್ಸಾಹಗಳನ್ನು ನೀಡಿತು, ಇದೇ ವೇಳೆ ಶಿಕ್ಷಣದ ಖಾಸಗೀಕರಣವನ್ನು ಮಾಡಿದ ಸರ್ಕಾರ ಆನಂತರ ಖಾಸಗೀ ಶಿಕ್ಷಣ ಸಂಸ್ಥೆಗಳ ಉರುಳಿಗೆ ತನಗೆ ತಾನೇ ಸಿಕ್ಕಿ ಪೇಚಾಡುವ ಸ್ಥಿತಿ ತಂದುಕೊಂಡಿದಂತೂ ಸರ್ಕಾರದ ದುರಂತಗಳಲ್ಲಿ ಒಂದು. ರಾಜ್ಯ ಸರ್ಕಾರ ಇಂದಿಗೂ ಸಹ ವೃತ್ತಿ ಶಿಕ್ಷಣದ ಸಮಸ್ಯೆಗೆ ಸಂಬಂಧಿಸಿದಂತೆ ಹಾಗೂ ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಪ್ರತಿಸಾರಿಯೂ ಮುಜುಗರ ಅನುಭವಿಸುತ್ತಿರುವುದು ತಾಜಾ ಉದಾಹರಣೆಯಾಗಿದೆ. ಸರ್ಕಾರಗಳು ಶಿಕ್ಷಣಕ್ಕೆ ಸಬಂಧಿಸಿದಂತೆ ಯಾವುದೇ ಸ್ಪಷ್ಟ ನೀತಿ ನಿಯಮಗಳನ್ನು ಹೊಂದಿಲ್ಲ ಹಾಗೂ ಒಂದು ವೇಳೆ ಹೊಂದಿದ್ದರೂ ಅದು ಕಾರ್ಯರೂಪಕ್ಕೆ ಬರುವಲ್ಲಿ ವಿಫಲವಾಗಿದೆ ಎಂಬುದು ಈ ಉದಾಹರಣೆಗಳಿಂದ ಧೃಡವಾಗಿದೆ.
ಅದೇನೇ ಇರಲಿ ಶಿಕ್ಷಣದ ಸಾರ್ವತ್ರಿಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಆತುರಾತುರವಾಗಿ ಕೈಗೊಂಡ ನಿರ್ಧಾರಗಳು ಸರ್ಕಾರ ತನ್ನ ಮರ್ಯಾದೆಯನ್ನು ಉಳಿಸಿಕೊಳ್ಳಲು ನೆರವಾಗಿದೆಯೋ ವಿನಹ: ಇದರಿಂದ ಶಿಕ್ಷಣ ರಂಗದ ಗುಣಮಟ್ಟ ಸುಧಾರಿಸಲಿಲ್ಲ. ಇದಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅಪರಾದಗಳೇ ಪ್ರತ್ಯಕ್ಷ ಸಾಕ್ಷಿಯಾಗಿವೆ. ಶಿಕ್ಷಣದ ಹೆಚ್ಚಳದೊಂದಿಗೆ ಪೋಲೀಸ್ ಠಾಣೆಗಳು, ನ್ಯಾಯಾಲಯಗಳು ಅಪಘಾತಗಳು ಹಾಗೂ ಅಪರಾದಗಳು ಗಣನೀಯವಾಗಿ ಕಡಿಮೆ ಆಗಬೇಕಿತ್ತು. ಆದರೆ ಅದಕ್ಕೆ ತದ್ವಿರುದ್ದವಾದ ಬೆಳವಣಿಗೆ ಸಂಭವಿಸುತ್ತಿರುವುದು ಶಿಕ್ಷಣದ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಶಿಕ್ಷಿತರ ಹೆಚ್ಚಳದೊಂದಿಗೆ ಅಪರಾಧಗಳು, ಸಾಮಾಜಿಕ ಅನಾಹುತಗಳು ಸಮಾಜದಲ್ಲಿ ಹೆಚ್ಚಾಗುತ್ತಲೆ ಸಾಗಿವೆ ಎಂದರೆ ಅಂತಹ ಶಿಕ್ಷಣದ ಅವಶ್ಯಕತೆಯಾದರೂ ಏನು?
ಆರ್ಥಿಕ ಅಭಿವೃದ್ಧಿಯ ಮಾನದಂಡವಾಗಿ ಮಾನವ ಆಭಿವೃದ್ದಿ ಸೂಚ್ಯಾಂಕವನ್ನು ಬಳಸಲು ಆರಂಭಿಸದ ಮೇಲೆ ಅಭಿವೃದ್ದಿ ಎಂಬುದು ಕೇವಲ ಯಂತ್ರ, ಕಟ್ಟಡ, ರಸ್ತೆ, ಸೂರಿಗಷ್ಟೇ ಸೀಮಿತಗೊಂಡಿಲ್ಲ ಅದಕ್ಕೆ ಬದಲಾಗಿ ಸಾಕ್ಷರತೆ, ಆರೋಗ್ಯ, ಉದ್ಯೋಗದಂಹ ವಿಚಾರಗಳನ್ನು ಒಳಗೊಂಡಿದ್ದು ಇವುಗಳ ಗರಿಷ್ಟತೆ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳಬೇಕೆಂದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿರುವ ವಿಷಯಗಳನ್ನು ಉನ್ನತೀಕರಿಸಬೇಕಿದೆ ಇವುಗಳೆಲ್ಲವೂ ಅಂಕಿ ಸಂಖ್ಯೆಗಳಲ್ಲಿಯೇ ನಿರ್ಧಾರವಾಗುತ್ತಿರುವುದರಿಂದ ಕೇವಲ ಅಂಕಿಸಂಖ್ಯೆನ್ನು ಉನ್ನತೀಕರಿಸಲಷ್ಟೇ ಸರ್ಕಾರ ಲಕ್ಷ್ಯ ನೀಡುತ್ತಿರುವುದು ಹಲವು ತಲೆಮಾರುಗಳಿಗೆ ಮಾಡಿದ ದ್ರೋಹವಲ್ಲದೆ ಮತ್ತೇನೂ ಅಲ್ಲ.
ಸರ್ಕಾರಿ, ಖಾಸಗಿ ಅಥವಾ ಪಟ್ಟಣ ಹಾಗೂ ಗ್ರಾಮೀಣ ಶಿಕ್ಷಣಗಳನ್ನು ತೌಲನಿಕವಾಗಿ ಗಮನಿಸಿದಾಗ ಅವುಗಳ ನಡುವೆ ಇರುವ ಅಂತರ ಅಗಾಧವಾದುದೇ ಅಗಿದೆ. ಈ ಜಟಿಲತೆಯಲ್ಲಿ ಸಿಲುಕಿರುವ ಲಕ್ಷಾಂತರ ವಿದ್ಯಾರ್ಥಿಗಳು ಅದರಲ್ಲಿಯೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಆರಕ್ಕೆರದ ಮೂರಕ್ಕಿಳಿಯದ ಸ್ಥಿತಿಯಲ್ಲಿದ್ದು ಯಾತನೆ ಅನುಭವಿಸುತ್ತಿದ್ದಾರೆ. ಪಟ್ಟಣ ಪ್ರದೇಶದ ಶಾಲೆಗಳಲ್ಲಿರುವ ಸೌಕರ್ಯ ಆ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಎತ್ತರಿಸಿದ್ದರೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಸರ್ಕಾರ ನೀಡಿರುವ ಸೌಲಭ್ಯ ವಿದ್ಯಾರ್ಥಿಗಳಿಗೆ ತಲುಪುವುದಕಿಂತಲೂ ಜನಪ್ರಿಯತೆಗಷ್ಟೇ ಸೀಮಿತವಾಗಿರುವುದು ಮತ್ತೊಂದು ದುರಂತ. ಈ ನಡುವೆ ಸರ್ಕಾರ ಶೈಕ್ಷಣಿಕ ವಲಯದಲ್ಲಿ ವಿವಿಧ ಬಗೆಯ ಮಾರ್ಪಾಡುಗಳನ್ನು ಮಾಡಿದ್ದರೂ ಅವುಗಳೆಲ್ಲವೂ ಸರ್ಕಾರ ಶೈಕ್ಷಣಿಕ ಸಾರ್ವತ್ರೀಕರಣವನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ನೆರವಾಗಿವೆ ಮತ್ತು ನೆರವಾಗುತ್ತಿವೆ.
ಈಗ ಸರ್ಕಾರ ಪ್ರಾರ್ಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ಹಂತ ತಲುಪಿಯಾಗಿದೆ. ಮುಂದಿನ ಸವಾಲಿರುವುದು ಉನ್ನತ ಶಿಕ್ಷಣದ್ದು, ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆಯನ್ನು ಆದಷ್ಟು ಬೇಗ ಹೆಚ್ಚಿಸಿ ಅಲ್ಲಿಯೂ ನಾವು ಸಾಧನೆಗೈದಿದ್ದೇವೆ ಎಂಬುದನ್ನು ಸರ್ಕಾರ ವಿಶ್ವ ಸಂಸ್ಥೆಯ ಮಟ್ಟದಲ್ಲಿ ಸಾಭೀತು ಮಾಡಿ ಮತ್ತಷ್ಟು ಷಹಬ್ಬಾಸ್ ಗಿರಿ ಸಂಪಾದಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವರು ಜಾಗೃತರಾಗಿದ್ಧಾರೆ. ಭಾರತ 2020ರ ವೇಳೆಗೆ ವಿಶ್ವದ ಸೂಪರ್ ಪವರ್ ದೇಶಗಳಲ್ಲೊಂದಾಗಬೇಕು ಎಂದರೆ ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಮತ್ತಷ್ಟು ಹೆಚ್ಚುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶಿಕ್ಷಣ ಸುಧಾರಣೆಗೆ ಮುಂದಾಗಿದೆ. ದೇಶದ ಹೆಚ್ಚು ಜನರಿಗೆ ಉನ್ನತ ಶಿಕ್ಷನವನ್ನು ತಲುಪಿಸುವುದು ಸ್ವಾಗತಾರ್ಹ ಬೆಳೆವಣಿಗೆಯೇ ಆದರೆ ಅದು ಸರ್ಕಾರದ ಪ್ರತಿಷ್ಟೆಗಷ್ಟೇ ಸೀಮಿತವಾಗದೆ ಜನರ, ಸಮಾಜದ ಒಳಿತಿಗೆ ಅನುಕೂಲಕರವಾದರೆ ಮಾತ್ರ ಸರ್ಕಾರದ ಆಶಯಕ್ಕೆ ಬೆಲೆ ಇರುತ್ತದೆ.

Wednesday, October 22, 2008

ಮಹಾ ಕುಸಿತವೆಂಬ ಮಹಾಮಾರಿ


ವಿ. ಮಧುಸೂದನ್

ವಿಶ್ವ ಆರ್ಥಿಕ ಮುಗ್ಗಟ್ಟಿನ ಪರಿಣಾಮಗಳು ಒಂದೊಂದಾಗಿಯೇ ಭಾರತದ ಆರ್ಥಿಕ ವ್ಯವಸ್ಥೆಯನ್ನು ಭಾದಿಸಲು ಪ್ರಾರಂಭವಾಗಿದೆ. ಮಹಾಕುಸಿತದ ಪರಿಣಾಮಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಅಂಶವೆಂದರೆ ಉದ್ಯೋಗದ ಕಡಿತ. ಆರ್ಥಿಕ ಹಿಂಜರಿತದಿಂದ ಉಂಟಾಗುತ್ತಿರುವ ಆರ್ಥಿಕ ನಷ್ಟವನ್ನು ಭರಿಸುಕೊಳ್ಳಲು ಕಾರ್ಪೊರೇಟ್ ಸಂಸ್ಥೆಗಳು ಕಂಡು ಕೊಂಡ ಮಾರ್ಗವೇ ಉದ್ಯೋಗದ ಕಡಿತ. ಈ ನೀತಿ ಹೆಚ್ಚು ಭಾದಿಸುವುದು ಭಾರತದಂತಹ ಮಾನವ ಸಂಪನ್ಮೂಲ ಆಧಾರಿತ ರಾಷ್ಟ್ರಗಳನ್ನು. ಈಗಾಗಲೆ ಕೆಲ ವಿಮಾನಯಾನ ಸಂಸ್ಥೆಗಳು ಹಾಗೂ ಕೆಲ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ತಮ್ಮ ಉದ್ಯೋಗದ ಪ್ರಮಾಣದಲ್ಲಿ ಕಡಿತ ಮಾಡಲು ಮುಂದಾಗಿರುವುದು ಎಂತಹವರಿಗೂ ಕರುಳು ಕಲಕುವಂತಹ ವಿಚಾರವಾಗಿದೆ. ಆರ್ಥಿಕ ಮುಗ್ಗಟ್ಟಿನಂತಹ ವಿಚಾರಗಳು ವಿಶ್ವದಲ್ಲಿ ಸಂಭವಿಸುತ್ತಿರುವುದು ಇದೇ ಮೊದಲೇನು ಅಲ್ಲ ಈ ಹಿಂದೆ ಇಂತಹ ಸಂದರ್ಭಗಳು ಅನೇಕ ದೇಶಗಳಿಗೆ ವಿವಿಧ ವ್ಯವಸ್ಥೆಗಳಿಗೆ ಬಂದೊದಗಿವೆ ಆದರೆ ಈ ಬಾರಿಯ ಮುಗ್ಗಟ್ಟು ಹಾಗೂ ಉದ್ಯೋಗ ಕಡಿತ ಒಂದನ್ನೊಂದು ಪರಸ್ಪರ ಅವಲಂಭಿಸಿದ್ದು, ಇದು ಮುಂಬರುವ ದಿವಸಗಳಲ್ಲಿ ಎಂತಹ ಪರಿಣಾಮಗಳನ್ನು ಉಂಟುಮಾಡಲಿವೆ ಎಂಬುದು ಊಹೆಗೆ ನಿಲುಕದ ಸಂಗತಿಯಾಗಿದೆ.
ಈ ಹಿಂದೆಯೇ ಅನೇಕ ಐಟಿ ಸಂಸ್ಥೆಗಳು ಹಲವು ಉದ್ಯೋಗಿಗಳನ್ನು ತನ್ನ ಸಂಸ್ಥೆಯಿಂದ ಬಿಡುಗಡೆ ಮಾಡುತ್ತಿದಂತಹ ಘಟನೆಗಳು ಅಗಾಗ್ಗೆ ಸಂಭವಿಸುತ್ತಿದ್ದವು ಆದರೆ ಈಗ ಅದು ಹಲವು ಕಂಪೆನಿಗಳಿಗೆ ಅನಿವಾರ್ಯವಾಗಿದೆ. ಈಗ ಮಾಡುತ್ತಿರುವ ಉದ್ಯೋಗದ ಕಡಿತ ಏಕೆ ಮಹತ್ವ ಪಡೆದುಕೊಂಡಿದೆ ಎಂದರೆ ಇಂದು ಉದ್ಯೋಗ ಎಂಬುದು ಮಧ್ಯಮ ವರ್ಗದ ಜನರ ಜೀವನ ಶೈಲಿಯನ್ನು, ವಿಧಾನವನ್ನು ಬಹಳ ಗಮನಾರ್ಹವಾಗಿ ಬದಲಿಸಿದ ಸಂಗತಿಯಾಗಿದೆ. ಇದಕ್ಕೆ ಕಾರಣವೆಂದರೆ ಮುಂದುವರೆದ ತಂತ್ರಜ್ಞಾನ, ಉತ್ತಮವಾದಂತಹ ಆರ್ಥಿಕ ಪ್ರಗತಿ ಹಾಗೂ ಯೋಗ್ಯ ಸಂಪನ್ಮೂಲದ ಲಭ್ಯತೆ ಎಂದರೆ ತಪ್ಪಾಗಲಾರದು. ಹೀಗೆ ಒಂದು ಸಾಮಾಜಿಕ ಸ್ಥರವನ್ನೆ ಬದಲಾವಣೆ ಮಾಡಿದ ಮಹತ್ವದ ಅಂಶ ಇಂದು ಬುಡಸಮೇತ ಅಲುಗಾಡಿಸುತ್ತಿದೆ ಎಂದರೆ ಅದು ಮಹತ್ವದ ಅಂಶವೇ ಸರಿ. ಎಂಬತ್ತರ ದಶಕದ ನಂತರ ಸ್ಪರ್ಧೆಗೆ ತನ್ನನ್ನು ತಾನು ತೆರದುಕೊಂಡ ವಿಶ್ವದ ಉದ್ಯಮ ಅನೇಕ ಕ್ರಾಂತಿಗಳಿಗೆ ಕಾರಣವಾಯಿತು. ಇದರ ಸಲುವಾಗಿ ಮೂರಂಕೆಯಲ್ಲಿದ್ದ ಸಂಬಳ ಆರು ಅಂಕೆಗಳ ವರೆಗೂ ಏರಿಕೆಯಾಯ್ತು, ಮೂರು ಕಾಸಿಗೆ ಬಾಳುತ್ತಿದ್ದವರನ್ನೆಲ್ಲಾ ಆರು ಕಾಸಿಗೆ ನೇಮಕ ಮಾಡಿಕೊಂಡಿದ್ದು ಕಾರ್ಪೊರೇಟ್ ಕಂಪೆನಿಗಳು ಅದೇ ಕಾರ್ಪೊರೇಟ್ ಕಂಪೆನಿಗಳು ದುಡಿದ ಆರು ಕಾಸನ್ನು ಖರ್ಚು ಮಾಡುವುದು ಹೇಗೆ ಎಂಬ ವಿಧಾನಗಳನ್ನು ಸ್ಪಷ್ಟವಾಗಿ ಹೇಳಿಕೊಟ್ಟವು ಇದೆಲ್ಲದರ ನಂತರ ಹೇಗೋ ಒಂದು ಹಂತ ತಲುಪಿ ಇದೇ ಉತ್ತಮ ಜೀವನ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದ ಜನ ತತ್ತರಿಸುವಂತಹ ಕಾಲ ಇದಾಗಿದೆ.
ಕೈತುಂಬಾ ಐದರಿಂದ ಆರು ಅಂಕೆಗಳ ಸಂಬಳ ಪಡೆಯುತ್ತಿದ್ದ ಯುವ ಜನತೆ ಎಗ್ಗು ಸಿಗ್ಗಿಲ್ಲದಂತೆ ಖರ್ಚು ಮಾಡಿ ಜೀವನದ ಅನುಭವ ಹೊಂದುತ್ತಿದ್ದರು. ಕಾರು, ಫ್ಲಾಟುಗಳೆಂಬ ನಕ್ಷತ್ರಕ್ಕೆ ಕೈಚಾಚಲು ಸಾಲವೆಂಬ ಏಣಿಯನ್ನು ಹತ್ತಿ ಎತ್ತರಕ್ಕೆ ಏರುತ್ತಿದ್ದವರಿಗೆ ಈಗ ಸಂಕಷ್ಟ ಬಂದೊದಗಿದೆ. ಸಂಬಳವನ್ನೇ ಆಧರಿಸಿ ಅನೇಕ ಕಮಿಟ್ ಮೆಂಟ್ಗಳನ್ನು ಮಾಡಿಕೊಂಡಿದ್ದ ಜನರನ್ನ ಏಕಾ ಏಕಿ ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂಬ ಮೆಸೇಜುಗಳು ಬರ ಸಿಡಿಲಿನಂತ ಬಂದಪ್ಪಳಿಸುತ್ತಿದ್ದರೆ ಮಾಯಾನಗರಿಗಳಲ್ಲಿ ಆಫೀಸು ಎಂಬ ಸ್ವರ್ಗದಲ್ಲಿ ದುಡಿಯುತ್ತಿದ್ದ ಜನತೆ ಗ್ರಾಮೀಣ ಭಾಗದ ರೈತರಂತೆ ಆತ್ಮಹತ್ಯಾ ಸರಣಿಗೆ ಕೊರಳೊಡ್ಡುವ ದಿವಸಗಳು ಹತ್ತಿರವಾಗುತ್ತಿವೆಯೇನೋ ಎಂಬಂತೆ ಬಾಸವಾಗುತ್ತಿವೆ.

Tuesday, October 7, 2008

ವಿಜಯ ದಶಮಿಯ ಸಂಕಲ್ಪ



ಭಾರತದಲ್ಲಿ ಆಚರಣೆಯಲ್ಲಿರುವ ವಿವಿಧ ಹಬ್ಬಗಳಂತೆ ದಸರೆಯೂ ಸಹ ಐತಿಹಾಸಿಕವಾದ ಮಹತ್ವವನ್ನು ಹೊಂದಿದೆ. ಆಶ್ವೀಜ ಶುದ್ದ, ಪಾಡ್ಯದಿಂದ ದಶಮಿಯವರೆಗೆ ಹತ್ತು ದಿವಸಗಳ ಕಾಲ ಆಚರಿಸಲ್ಪಡುವ ಹಬ್ಬವನ್ನು ದಸರಾ, ದಶಹರ ಹಾಗೂ ನವರಾತ್ರಿ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಈ ನವರಾತ್ರಿ ಅಥವಾ ಹತ್ತು ದಿವಸಗಳ ಕಾಲಾವಧಿಯಲ್ಲಿ ಬಹಳ ಮಹತ್ವ ಪಡೆದುಕೊಂಡಿರುವುದು ಕೊನೆಯ ದಿವಸಗಳಾದ ಮಹಾನವಮಿ ಮತ್ತು ವಿಜಯದಶಮಿಗಳು. ಇವು ದಸರೆಯ ದಿನಗಳಲ್ಲಿಯೇ ಬಹಳ ಮುಖ್ಯವಾದ ದಿವಸಗಳಾಗಿವೆ. ಈ ದಿವಸಗಳನ್ನು ಐತಿಹಾಸಿಕವಾಗಿ ದಾನವರಿಗೂ, ದೇವರಿಗೂ ನಡೆದ ಯುದ್ದದಲ್ಲಿ ದೇವತೆಗಳಿಗೆ ಉಂಟಾದ ವಿಜಯವನ್ನು ಆಚರಿಸುವ ಪದ್ದತಿ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಶ್ರೀರಾಮ ಲಂಕೆಯ ಮೇಲೆ ದಂಡೆತ್ತಿ ರಾವಣನನ್ನು ಸಂಹರಿಸಿ ವಿಜಯ ಸಾಧನೆಗೈದ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ಹೀಗೆಯೇ ಮುಹಿಷಾಸುರರಂತಹ ದುಷ್ಟ ಶಕ್ತಿಗಳನ್ನು ಸಂಹರಿಸಿದ ವಿಜಯದ ಸಂಕೇತವಾಗಿ ಪ್ರಾಚೀನ ಕಾಲದಿಂದಲೂ ಭಾರತದ ಎಲ್ಲೆಡೆಯೂ ಈ ಹಬ್ಬವನ್ನು ಆಚರಿಸುವ ಪದ್ದತಿ ನಡೆದು ಬಂದಿದೆ. ಈ ದಿನಗಳ ವಿಶೇಷ ಎಂದರೆ ಶಕ್ತಿ ಪೂಜೆ.

ಕರ್ನಾಟಕದಲ್ಲಿ ಈ ಹಬ್ಬವನ್ನು ಬಹಳ ವೈಭವದಿಂದ ವಿಜಯನಗರದ ಕಾಲದ ಸಾಮ್ರಾಜ್ಯದಲ್ಲಿ ಆಚರಿಸಲಾಗುತ್ತಿತ್ತು ಎಂಬುದಕ್ಕೆ ಅನೇಕ ಆಧಾರಗಳಿವೆ ಬಹುಮುಖ್ಯವಾಗಿ ವಿದೇಶಿ ಯಾತ್ರಿಕರಾದ ಅಬ್ದುಲ್ ರಜಾಕ್, ಪೆಯಾಸ್, ನ್ಯೂನಿಜ್ ಮೊದಲಾದವರು ತಮ್ಮ ಗ್ರಂಥಗಳಲ್ಲಿ ವಿಜಯನಗರದ ದಸರೆಯ ಸಂಭ್ರಮವನ್ನು ವರ್ಣಿಸಿದ್ದಾರೆ. ಮಳೆಗಾಲ ಇಳಿಮುಖಗೊಂಡು ಬಿಡುವಿರುತ್ತಿದ್ದ ಈ ಸಂದರ್ಭವನ್ನು ರಾಜ ಮಹಾರಾಜರು ಯುದ್ದಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು ನೆರೆ ರಾಜ್ಯಗಳ ಮೇಲೆ ದಂಡೆತ್ತಿ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವುದೇ ಈ ಯುದ್ದಗಳ ಮಹತ್ವವಾಗಿತ್ತು. ಹೀಗೆ ಕದನ ನಿರ್ಧರಿಸಿ ಯುದ್ದಕ್ಕೆ ಅಣಿಯಾಗುವ ಕಾಲವಾಗಿಯೂ ಸಹ ದಸರೆಯನ್ನು ಆಚರಿಸಲಾಗುತ್ತಿತ್ತು ಈ ವೇಳೆ ಇಡೀ ಸಾಮ್ರಾಜ್ಯದ ವಿವಿಧ ಭಾಗದ ಸೈನ್ಯಗಳು ಒಂದೆಡೆ ಜಮಾವಣೆಯಾಗುತ್ತಿತ್ತು. ಸಾಮಂತರು, ಮಂಡಲಾಧಿಪತಿಗಳು, ದಂಡನಾಯಕರು ತಮ್ಮ ತಮ್ಮ ಸೈನ್ಯಗಳ ಜೊತೆಗೆ ರಾಜಧಾನಿಗೆ ಆಗಮಿಸಿ ತಮ್ಮ ಸೈನ್ಯಗಳ ಪ್ರದರ್ಶನ ನಡೆಸುತ್ತಿದ್ದರು ಇದರ ಜೊತೆ ಜೊತೆಯಲ್ಲಿಯೇ ಕಪ್ಪ ಕಾಣಿಕೆಗಳನ್ನು ಒಪ್ಪಿಸಲೂ ಸಹ ಈ ಕಾಲವನ್ನು ನಿಶ್ಚಯಿಸಿಕೊಳ್ಲಲಾಗಿತ್ತು.

ಈ ಎಲ್ಲಾ ತಾಲೀಮು, ತಯಾರಿ ಹಾಗೂ ಪ್ರದರ್ಶನವನ್ನು ವೀಕ್ಷಿಸಲು ಉನ್ನತವಾದ, ಭವ್ಯವಾದ ಮಂಟಪವನ್ನು ಸಹ ನಿರ್ಮಿಸಲಾಗುತ್ತಿತ್ತು. ಹಂಪಿಯಲ್ಲಿ ಈಗಲೂ ಇರುವ ಮಹಾನವಮಿ ದಿಬ್ಬದ ಅವಶೇಷವೇ ಇದಕ್ಕೆ ಉದಾಹರಣೆ. ನವರಾತ್ರಿಯ ಒಂಬತ್ತು ದಿನಗಳೂ ಸಹ ಸಂಜೆ ರಾಜನು ಈ ಅತ್ಯುನ್ನತವಾದ ಮಂಟಪದಲ್ಲಿ ರತ್ನಖಚಿತವಾದ ಸಿಂಹಾಸನದ ಮೇಲೆ ಕುಳಿತು ಪ್ರದರ್ಶನವನ್ನು ವೀಕ್ಷಿಸುತ್ತಿದ್ದ.

ರಣಬಲಿಯಿಂದ ಆರಂಭವಾಗಿ ಪಟ್ಟದ ಕುದುರೆ ಆನೆಗಳನ್ನು ಪುರೋಹಿತರು ಪೂಜಿಸುತ್ತಿದ್ದರು ಈ ಮಂಟಪದಲ್ಲಿ ನೃತ್ಯ, ಗಾಯನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸಹ ನಡೆಯುತ್ತಿದ್ದವು, ಒಂಬತ್ತು ದಿವಸಗಳ ಕಾಲವೂ ಸಹ ವಿಧವಿಧವಾದ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿತ್ತು ಜೊತೆಗೆ ವಿವಿಧ ಸ್ಪರ್ಧೆಗಳೂ ಸಹ ನಡೆಯುತ್ತಿದ್ದವು ಗೆದ್ದವರಿಗೆ ರಾಜ ಬಹುಮಾನಗಳನ್ನು ವಿತರಿಸುತ್ತಿದ್ದ.

ನವಮಿಯ ದಿವಸ ಆಯುಧ ಪೂಜೆ ಹಮ್ಮಿಕೊಳ್ಳಲಾಗುತ್ತಿತ್ತು ಆ ವೇಳೆಗೆ ಕಪ್ಪ ಕಾಣಿಕೆಗಳ ಒಪ್ಪಿಸುವಿಕೆ ಮುಗಿದು ಜೈತ್ರಯಾತ್ರೆಗೆ ಪೂರ್ಣ ಸಿದ್ಧತೆ ನಡೆಸಿದಂತಾಗುತ್ತಿತ್ತು. ರಾಜರೂ ಹಾಗೂ ಅವರ ಸೈನಿಕರು ಶತ್ರುನಿಗ್ರಹಕ್ಕಾಗಿ ಬಳಸುತ್ತಿದ್ದ ಆಯುಧಗಳನ್ನು ಪೂಜಿಸುತ್ತಿದ್ದರು ಅಂತೆಯೇ ಜನಸಾಮಾನ್ಯರು ತಮ್ಮ ಜೀವನ ಪಯಣಕ್ಕೆ ಅನುಕೂಲ ಕಲ್ಪಿಸುತ್ತಿದ್ದ ಕೊಡಲಿ, ಕುಡುಗೋಲು, ನೇಗಿಲುಗಳನ್ನು ಪೂಜಿಸುತ್ತಿದ್ದರು ಆಧುನೀಕರಣ ಮುಂದುವರೆದಂತೆಲ್ಲ ಯಂತ್ರಗಳನ್ನು ಪೂಜಿಸುವ ಪರಿಪಾಠ ಬೆಳೆದು ಬಂತು.

ಈ ಎಲ್ಲಾ ಪ್ರದರ್ಶನ ಹಾಗೂ ಆಚರಣೆ ಅರಸರಿಗೆ ಪ್ರಮುಖವಾದುದಾಗಿತ್ತಾದರೂ ಅದನ್ನು ಜನಸಾಮಾನ್ಯರೂ ಆಚರಿಸುತ್ತಿದ್ದರು, ಬಹುಷ ಅದೇ ಇಂದು ದಸರಾ ಪಡೆದುಕೊಂಡಿರುವ ವೈಭವ ಹಾಗೂ ಸಂಭ್ರಮವನ್ನು ಪಡೆಯುತ್ತಿರಲಿಲ್ಲ ಅದಕ್ಕೆ ಬದಲಾಗಿ ಜನಸಾಮಾನ್ಯರು ಸಹ ಈ ಆಚರಣೆಯಲ್ಲಿ ಪಾಲ್ಗೊಂಡು ಸ್ವತಹ ಆಚರಿಸಿದ್ದುದ್ದರಿಂದ ಅದು ಮತ್ತಷ್ಟು ಸಂಭ್ರಮವನ್ನು ಹೊಂದಿತ್ತು.

ವಿಜಯನಗರದ ರಾಜಧಾನಿಯಲ್ಲಿ ಮಹಾನವಮಿಯ ಉತ್ಸವಕ್ಕಾಗಿ ಪ್ರತಿ ಮನೆ ಮನೆಯ ಮುಂದೆ ಮಂಟಪಗಳನ್ನು , ತೋರಣಗಳನ್ನು ನಿರ್ಮಿಸಿ ಉತ್ಸವ ಆಚರಿಸುತ್ತಿದ್ದರು ಹಾಗೂ ಅರಸರು ಆಚರಿಸುತ್ತಿದ್ದುದನ್ನು ಅನುಕರಿಸುವ ಸಲುವಾಗಿ ಪ್ರತಿ ಮನೆಯಲ್ಲಿಯೂ ಗೊಂಬೆಗಳನ್ನು ಕೂರಿಸಿ ರಾಜರು ನಡೆಸುತ್ತಿದ್ದ ದರ್ಬಾರನ್ನು ಅನುಕರಣೆ ಮಾಡುತ್ತಿದ್ದರು. ಗೊಂಬೆಗಳನ್ನು ಕೃತಕ ಆಭರಣ ಹಾಗೂ ವಸ್ತ್ರಗಳಿಂದ ಅಲಂಕರಿಸಿ ತಮ್ಮ ಕಲಾವಂತಿಕೆಯ ಜಾಣ್ಮೆ ಮೆರೆಯುತ್ತಿದ್ದರು.

ಈ ಪರಿಯ ವೈಭವದಲ್ಲಿ ನಡೆಯುತ್ತಿದ್ದ ದಸರಾ ಆಚರಣೆ ವಿಜಯನಗರ ಸಾಮ್ರಾಜ್ಯದ ಅವನತಿಯೊಂದಿಗೆ ಈ ಆಚರಣೆಯೂ ಅವನತಿ ಹೊಂದಿತು. ಆನಂತರ ಮೈಸೂರಿನ ಅರಸರು ವಿಜಯನಗರದ ಮಾಧರಿಯನ್ನು ಅನುಕರಿಸಿ ಹತ್ತು ದಿನಗಳ ದಸರೆಗೆ ತಮ್ಮದೇ ಆದಂತಹ ಹೊಸ ಮೆರುಗನ್ನು ನೀಡಿದರು. ಮೈಸೂರನ್ನು ಆಳಿದ ವಿವಿಧ ಅರಸರ ಕಾಲದಲ್ಲಿ ಬಗೆ ಬಗೆಯಾದ ಆಚರಣೆ ಉತ್ಸವಗಳನ್ನು ಮೈಗೂಡಿಸಿಕೊಂಡ ಮೈಸೂರು ದಸರಾ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ವಿಶ್ವವಿಖ್ಯಾತ ಮೈಸೂರು ದಸರೆ ಎಂದೆನಿಸಿಕೊಂಡಿತು.

ಮೈಸೂರರಸರ ಆಡಳಿತ ಕೊನೆಗೊಂಡ ಮೇಲೆ ತನ್ನ ವಿನ್ಯಾಸದಲ್ಲಿ ಅಲ್ಪ ಮಾರ್ಪಾಡುಗಳನ್ನು ಮಾಡಿಕೊಂಡು ದಸರೆ ಇಂದಿಗೂ ಆಚರಿಸಲ್ಪಡುತ್ತಿದೆ. ಒಟ್ಟಾರೆ ದಸರೆ ಎಂಬುದು ಆರಂಭವಾದುದೇ ದುಷ್ಟ ಸಂಹಾರದ ವಿಜಯದ ಸಂಕೇತವಾಗಿದೆ ಆದರೆ ಇಂದು ಅದರ ಮೂಲ ಆಶಯವನ್ನು ಮರೆತು ಕೇವಲ ವೈಭವ, ಸಂಭ್ರಮ, ಮೋಜು, ಮಸ್ತಿಗಾಗಿ ದಸರೆ ಆಚರಿಸ್ಪಡುತ್ತಿದೆ ಇದರ ಜೊತೆ ಜೊತೆಗೆ ದಸರಾ ಉತ್ಸವ ವಾಣಿಜ್ಯೀಕರಣಗೊಂಡಿದೆ. ದಸರೆಯ ಹೆಸರಿನಲ್ಲಿ ಪ್ರವಾಸಿಗರ ಆಕರ್ಷಣೆ, ವ್ಯಾಪಾರ, ಪ್ರಯೋಜಕತ್ವಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ.

ಯಾವುದೋ ಕಾಲದ ಏಕೈಕ ದುಷ್ಟ ಸಂಹಾರದ ವಿಜಯದ ಸಂಕೇತವಾಗಿ ದಸರೆ ಆಚರಿಸ್ಪಡಲಾಯ್ತು ಆದರೆ ದುಷ್ಟ ಶಕ್ತಿಯ ಸಂಪೂರ್ಣ ಹನನವಾಗಲಿಲ್ಲ. "ಸತ್ಯಕ್ಕೆ ಸಾವಿಲ್ಲ" ಎಂಬ ಮಾತು ಎಷ್ಟು ಸತ್ಯವೋ, ದುಷ್ಟ ಅಟ್ಟಹಾಸಕ್ಕೂ ಕೊನೆಯಿಲ್ಲ ಎಂಬುದು ಇತಿಹಾಸದಿಂದ ಹಾಗೂ ಇಂದು ಸಂಭವಿಸುತ್ತಿರುವ ವಿದ್ಯಾಮಾನಗಳಿಂದ ಸಾಬೀತಾಗುತ್ತಿದೆ. ಕಾಲಕಾಲಕ್ಕೆ ವಿವಿಧ ಪರಿಸ್ಥಿತಿಗಳಿಗೆ ಅನುಗುಣವಾಗಿ ದುಷ್ಟ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇಂದಿಗೂ ನಮ್ಮ ಸಮಾಜವನ್ನು ಭಾದಿಸುತ್ತಿರುವ ಭ್ರಷ್ಟಾಚಾರ, ಭಯೋತ್ಪಾದನೆ, ಮತಾಂದತೆ ಇವುಗಳೂ ಸಹ ದುಷ್ಟ ಚಟುವಟಿಕೆಯ ವಿವಿಧ ಮುಖಗಳು, ಜಾಗೃತಿಯ ಮೂಲಕ ಇವುಗಳ ಸಂಹಾರವೂ ಆಗಬೇಕು ಆಗ ಮಾತ್ರ ವಿಜಯದಶಮಿ ಆಚರಣೆ ಅರ್ಥ ಬಂದೀತು.

Friday, August 22, 2008

ಇವರೂ ರೈತರೆ ಇತ್ತಲೂ ನೋಡಿ


ವಿ.ಮಧುಸೂದನ್

ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೂರನೇ ದಿನದತ್ತ ಮುನ್ನಡೆಯುತ್ತಿದೆ. ಅಧಿಕಾರಕ್ಕೆ ಬಂದ ದಿವಸದಿಂದಲೂ ತಾವು ರೈತಪರ ರಾಜಕಾರಣಿ ಎಂಬುದನ್ನು ತೋರಿಸಿಕೊಳ್ಳಲು ಪರಿಪರಿಯಾಗಿ ಮಾತನಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದುವರೆಗೆ ಕೇವಲ ಮಾತನಾಡಿದ್ದೇ ಆಯಿತು. ತಾವು ಚುನಾವಣೆಯ ಪೂರ್ವದಲ್ಲಿ ರೈತರಿಗೆ ಅನುಕೂಲವಾಗುವಂತಹ ಕೆಲವು ಅಂಶಗಳನ್ನು ಏನು ಘೋಷಿಸಿದ್ದರೋ ಅದಷ್ಟೇ ಪ್ರಸ್ತುತ ರೈತರ ಅಗತ್ಯ ಅದನ್ನು ಹೊರತು ಪಡಿಸಿ ರಾಜ್ಯದ ರೈತರಿಗೆ ಯಾವುದೇ ಸಮಸ್ಯೆಗಳೂ ಇಲ್ಲ ಎಂದು ಮುಖ್ಯಮಂತ್ರಿಗಳು ಭಾವಿಸಿದಂತಿದೆ. ಆರಂಭ ಶೂರತ್ವ ಎಂಬಂತೆ ಅಧಿಕಾಕ್ಕೆ ಏರಿದ ಮೊದಲ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳನ್ನು ಸುತ್ತಿ ಅಲ್ಲೆಲ್ಲ ರೈತರನ್ನೂ ಒಳಗೊಂಡಂತೆ ವಿವಿಧ ಸಭೆ, ಸಂವಾದಗಳನ್ನು ಮಾಡಿದ ಯಡಿಯೂರಪ್ಪ ಆಪರೇಷನ್ ಕಮಲಕ್ಕೆ ಕೈ ಹಾಕಿದ ಮೇಲೆ ಅವುಗಳನ್ನೆಲ್ಲಾ ಮರೆತಂತಿದೆ. ರೈತರನ್ನು ಪುನಹ ನೆನಪು ಮಾಡಿಕೊಳ್ಳುವಂತಹ ವಿದ್ಯಾಮಾನಗಳು ರಾಜ್ಯದಲ್ಲಿ ನಡೆಯುತ್ತಿದ್ದರೂ ಸಹ ಅವರು ಯಾಕೋ ಅತ್ತ ಮನಸ್ಸು ಮಾಡುತ್ತಿಲ್ಲ.


ಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಆಲೋಗಡ್ಡೆ ಬೆಳೆ ಈ ಸಾಲಿನಲ್ಲಿ ಹೇಗೆ ನೆಲಕಚ್ಚಿದೆ ಎಂದರೆ ಅದನ್ನು ಹಾಸನ ಜಿಲ್ಲೆಗೆ ಹೋಗಿ ನೋಡಿದರೆ ಅದರ ಹಾನಿಯ ಪ್ರಮಾಣ ಏನು ಎಂಬುದು ಗೊತ್ತಾಗುತ್ತದೆ. ಹಾಸನದ ರೈತರಿಗೆ ಹಣ ಹರಿದು ಬರುವುದೇ ಆಲೋಗಡ್ಡೆಯಿಂದ ರಾಜ್ಯದಲ್ಲಿಯೇ ಅಪಾರ ಪ್ರಮಾಣದ ಆಲೋಗಡ್ಡೆಯನ್ನು ಇಲ್ಲಿ ಬೆಳೆಯಲಾಗುತ್ತದೆ. ವಾಣಿಜ್ಯ ನಗರಿ ಮುಂಬೈನ ಆಲೋಗಡ್ಡೆ ಬೇಡಿಕೆ ಈಡೇರುವುದೇ ಹಾಸನದಲ್ಲಿ ಬೆಳೆಯುವ ಆಲೋಗಡ್ಡೆಯಿಂದ . ಈ ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು ೪೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು ೭೧ ಸಾವಿರಕ್ಕೂ ಅಧಿಕ ಕೃಷಿಕರು ಆಲೂಗಡ್ಡೆ ಬೆಳೆಯುತ್ತಾರೆ ಎಂಬ ಅಂಶವನ್ನು ಕೃಷಿ ಇಲಾಖೆಯಲ್ಲಿ ದಾಖಲಿಸಲಾಗಿದೆ. ಇಲ್ಲಿ ರಾಷ್ಟ್ರದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಆಲೂಗಡ್ಡೆಯನ್ನು ಬೆಳೆಯಲಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಆಲೂಗಡ್ಡೆ ಬೆಳೆಯುತ್ತಾರಾದರೂ ಈಚಿನ ದಿವಸಗಳಲ್ಲಿ ಬಹಳ ಜನಪ್ರೀಯವಾಗಿರುವ ಕುರ್ಕುರೆ, ಲೇಸ್, ಬಿಂಗೋ, ಪೆಪ್ಸಿಯಂತಹ ಬಹುರಾಷ್ಟ್ರೀಯ ಕಂಪೆನಿಗಳು ಉತ್ಪಾದಿಸುತ್ತಿರುವ ಅಲೂಗಡ್ಡೆ ಆಧಾರಿತ ಆಹಾರ ಪದಾರ್ಥಗಳಿಗೆ ಬಹುತೇಕ ಹಾಸನ ಜಿಲ್ಲೆಯಲ್ಲಿ ಬೆಳೆಯುವ ಆಲೂಗಡ್ಡೆಯೇ ಹೆಚ್ಚು ಪ್ರಮಾದಲ್ಲಿ ಸರಬರಾಜಾಗುತ್ತಿದೆ. ಹಾಸನ ಜಿಲ್ಲೆಯ ಅಲೂಗಡ್ಡೆ ಇಲ್ಲಿ ನಡೆಸುವ ವಾರ್ಷಿಕ ವಹಿವಾಟು ಸುಮಾರು ೩೦೦ ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿದೆ. ಇದುವರೆಗೆ ಕೇವಲ ಬೆಲೆ ಸಮಸ್ಯೆ ಎದುರಿಸುತ್ತಿದ್ದ ಆಲೂ ಬೆಳೆ ಈಗ ರೋಗ ಬಾಧೆಗೆ ಒಳಗಾಗಿದೆ. ಅಂಗಮಾರಿ ಹೆಸರಿನ ಈ ರೋಗ ಬಿಳಿಯ ಹೂವ್ವಿನೊಂದಿಗೆ ನಳನಳಿಸಬೇಕಿದ್ದ ಆಲೋಗಡ್ಡೆಯನ್ನು ಸಾಲು ಸಾಲಾಗಿ ಮಲಗಿಸಿ ಬಿಟ್ಟಿದೆ. ಜಿಲ್ಲೆಯ ಚನ್ನರಾಯಪಟ್ಟಣ, ಹೊಳೇನರಸೀಪುರ, ಅರಕಲಗೂಡು, ಹಾಸನ, ಆಲೂರು ಹಾಗೂ ಬೇಲೂರು ತಾಲ್ಲೊಕುಗಳಲ್ಲಿ ಹೆಚ್ಚು ಪ್ರಮಾಣದ ಆಲೂ ಬೆಳೆಯಲಾಗುತ್ತಿದ್ದು ಈ ತಾಲ್ಲೂಕುಗಳಲ್ಲಿ ಎಲ್ಲಿ ನೋಡಿದರೂ ರೋಗದಿಂದ ಕಪ್ಪು ಹಿಡಿದಿರುವ ಆಲೂಗಡ್ಡೆ ಗಿಡಗಳು ಹಾಸಿ ಹೊದ್ದಂತೆ ಮಲಗಿಬಿಟ್ಟಿದೆ. ಆಲ್ಲೂಗಡ್ಡೆ ಬೆಳೆಯ ಬಗ್ಗೆ ಅತೀವವಾದ ವಿಶ್ವಾಸ ಇರಿಸಿಕೊಂಡಿರುವ ಈ ಜಿಲ್ಲೆಯ ರೈತರು ಸಾಲಾ ಸೂಲದ ಜೊತೆಗೆ ತಮ್ಮ ಪತ್ನಿಯರ ಚಿನ್ನಾಭರಣಗಳನ್ನು ಮಾರಿ, ಅಡವಿಟ್ಟು ಇಲ್ಲಿ ಆಲೂಗಡ್ಡೆ ಭಿತ್ತನೆ ಮಾಡುತ್ತಾರೆ. ಆದರೆ ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇಖಡ ೯೨ % ರಷ್ಟು ಆಲೂಗಡ್ಡೆ ಬೆಳೆ ಅನಾರೋಗ್ಯಕ್ಕೆ ಒಳಗಾಗಿದ್ದು, ಈಗ ಅವರೆಲ್ಲರೂ ಸಂಕಷ್ಟದಲ್ಲಿದ್ದು ಅವರ ಗೋಳನ್ನು ಕೇಳುವವರೇ ಇಲ್ಲ.


ಪರಿಸ್ಥಿತಿ ಹೀಗಿರುವಾಗಲೇ ಯಡಿಯೂರಪ್ಪ ಹಾಸನ ಜಿಲ್ಲೆಗೆ ಭೇಟಿ ನೀಡಿದ್ದರು ಆಗ ಅವರನ್ನು ಭೇಟಿಯಾಗಿದ್ದ ರೈತರ ಅಹವಾಲು ಏನು ಎಂಬುದನ್ನು ಪೂರ್ಣವಾಗಿ ಕೇಳುವಂತಹ ಸಂಯಮವನ್ನು ಸಹ ಮುಖ್ಯಮಂತ್ರಿಗಳು ತೋರಲಿಲ್ಲ. ನೈಸರ್ಗಿಕ ರೋಗಕ್ಕೆ ಕೃಷಿ ಅಧಿಕಾರಿಗಳೇ ಕಾರಣ ಎಂದು ಹರಿಹಾಯ್ದ ಅವರು ಕೃಷಿ ಇಲಾಖೆ ಅಧಿಕಾರಿಗಳು ಕತ್ತೆ ಕಾಯುತ್ತಿದ್ದಾರೆಯೇ ಎಂದು ತನ್ನ ಉದ್ಧಟತನವನ್ನು ತೋರಿ ತಿರುಗಿಯೂ ನೋಡದೆ ಬೆಂಗಳೂರಿಗೆ ಹಾರಿ ಹೋದರು. ರಾಜ್ಯದ ಮುಖ್ಯಮಂತ್ರಿಯಾಗಿ ಒಂದು ಜಿಲ್ಲೆಯ ರೈತರ ಸಂಕಷ್ಟಕ್ಕೆ ಭಾಗಿಯಾಗದ ಇವರು ಇನ್ನು ರಾಜ್ಯದ ರೈತರ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೋ ಎಂಬುದನ್ನು ಊಹಿಸಿಕೊಳ್ಳಲು ಇದು ಸಕಾಲವಾಗಿದೆ. ರಾಜಕೀಯ ದ್ವೇಶಕ್ಕೆ ಒಂದು ಜಿಲ್ಲೆಯ ಕೃಷಿಕರನ್ನು ಬಲಿ ಮಾಡುವುದು, ಅವರನ್ನು ನಿರ್ಲಕ್ಷಿಸುವುದು ಸರಿಯಾದ ಕ್ರಮವಲ್ಲ ರಾಜಕೀಯ ಗೊಂದಲಗಳು ಏನೇ ಇರಬಹುದು ಆದರೆ ಇಡೀ ಜಿಲ್ಲೆಯಲ್ಲಿ ಸತತ ಆರು ತಿಂಗಳುಗಲ ಕಾಲ ಸಾವಿರಾರು ಜನರಿಗೆ ಉದ್ಯೋಗ ನೀಡುವ ಒಂದು ಕೃಷಿ ಉತ್ಪನ್ನದ ಸಮಸ್ಯೆಯನ್ನು ನಿರ್ಲಕ್ಷಿಸುವುದು ಅವಿವೇಕಿತನದ ಪರಮಾವಧಿ ಅಲ್ಲದೇ ಮತ್ತೇನೂ ಅಲ್ಲ.
ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆದರೂ ಅದು ಒಂದು ಅಲ್ಪಾವಧಿಯ ಬೆಳೆ ಕೇವಲ ಎರಡೇ ಎರಡು ತಿಂಗಳಲ್ಲಿ ಮುಗಿದು ಹೋಗುತ್ತದೆ. ಇಂತದ್ದೆ ಅನೇಕ ಬೆಳೆಯನ್ನು ಇಲ್ಲಿ ಬೆಳೆಯಲಾಗುತ್ತಿದೆ ಹಾಗಾಗಿ ಸಮಸ್ಯೆ ಇಲ್ಲ ಎಂದು ಅನೇಕರು ವಾದಿಸುತ್ತಾರೆ. ಆದರೆ ಆಲೂಗಡ್ಡೆ ಅಲ್ಪಾವಧಿ ಬೆಳೆಯಾದರೂ ಸಹ ಇದರ ಮೇಲೆ ಅಪಾರ ಪ್ರಮಾಣದ ಬಂಡವಾಳ ಹೋಡಿಕೆಯಾಗುತ್ತದೆ. ಆಲೂಗಡ್ಡೆಯ ಸಾಗುವಳಿಗೆ ಕನಿಷ್ಟ ಒಂದು ಎಕರೆಗೆ ೨೫ ಸಾವಿರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಇದರ ಜೊತೆಗೆ ಮುಂಗಾರು ಹಂಗಾಮಿನಲ್ಲಿ ಏಪ್ರಿಲ್-ಮೇ ತಿಂಗಳಿನಿಂದ ಡಿಸೆಂಬರ್ವರೆಗೆ ಸರಿಸುಮಾರು ಎರಡು ಲಕ್ಷ ಜನರಿಗೆ ಈ ಬೆಳೆ ಉದ್ಯೋಗ ದೊರಕಿಸಿಕೊಡುತ್ತದೆ. ಆಲೂಗಡ್ಡೆ ಭಿತ್ತನೆಯಿಂದ ಹಿಡಿದು, ಅದರ ಸಾಗುವಳಿ, ಕೊಯ್ಲು, ವಿಂಗಡಣೆ, ಸಾಗಣೆ, ಚೀಲ ಮಾಡುವಿಕೆ ಹಾಗೂ ಸಂಸ್ಕರಣೆಯ ಮಾಡಲು ಈ ಪ್ರಮಾಣದ ಜನ ದುಡಿಯುತ್ತಿದ್ದಾರೆ. ಅದರ ಜೊತೆಗೆ ಆಲೂಗಡ್ಡೆ ಸಾಗಣೆ ಒಂದು ಪ್ರಮುಖ ವಾಣಿಜ್ಯ ವ್ಯವಹಾರವಾಗಿದ್ದು, ಸಾವಿರಾರು ಲಾರಿಗಳು ಅದರ ಸಾಗಣೆ ಕೆಲಸವನ್ನು ಮಾಡುತ್ತವೆ. ಆದರೆ ಈ ಸಾರಿ ಇಂತಹ ಅಪಾರ ಪ್ರಮಾಣದ ಉದ್ಯೋಗ ಸೃಷ್ಟಿಯ ಒಂದು ಕೃಷಿಯಾಗಿರುವ ಆಲೂಗಡ್ಡೆ ಈ ಸಾರಿ ಭಾದೆಗೊಳಗಾಗಿದ್ದು ಲಕ್ಷಾಂತರ ಜನ ನಿರುದ್ಯೋಗಿಗಳಾಗುವ ಸಾಧ್ಯತೆ ಜಿಲ್ಲೆಯಲ್ಲಿ ಸೃಷ್ಪಿಯಾಗಿದೆ.


ಹಾಸನ ಜಿಲ್ಲೆಯ ಆಲೂಗಡ್ಡೆ ಬೆಳೆಗೆ ಬಂದೆರಗಿರುವ ಅಂಗಮಾರಿ ರೋಗವನ್ನು ತಡೆಯುವಲ್ಲಿ ಈಗಾಗಲೇ ವಿಫಲರಾಗಿದ್ದೇವೆ. ಯಾವುದೇ ಕೃಷಿ ಸಮಸ್ಯೆಗಳು ನಿಧಾನಗತಿಯಲ್ಲಿ ತಮ್ಮ ಪರಿಣಾಮಗಳನ್ನು ಬೀರುತ್ತವೆ ಹಾಗೂ ಅವು ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಕೋಟ್ಯಾಂತರ ರೂಪಾಯಿಯನ್ನು ಭೂಮಿಗೆ ಸುರಿದು ಈಗ ವಿಭ್ರಾಂತರಾಗಿ ಗದ್ದದ ಮೇಲೆ ಕೈಹೊತ್ತು ಕುಳಿತಿರುವ ಹಾಸನ ಜಿಲ್ಲೆಯ ರೈತರನ್ನು ರಾಜ್ಯ ಸರ್ಕಾರ ಹೀಗೆ ಕಡೆಗಣಿಸುವುದು ಮತ್ತು ಸಂಕಷ್ಟದಲ್ಲಿರುವ ರೈತರ ಸಹನೆ ಪರೀಕ್ಷೆ ಮಾಡುವುದು ಯಾರಿಗೂ ಸಾಧುವಲ್ಲ.

Wednesday, August 20, 2008

ತುಂಗಾ ತೀರದಲ್ಲೊಂದು ದಿನ




ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ ತುಂಗಾ ನದಿಯ ಬಗ್ಗೆ ಚಿಕ್ಕಂದಿನಿಂದಲೂ ಬಹಳವಾಗಿಯೇ ಕೇಳಿದ್ದೆ ಹಾಗೂ ಓದಿದ್ದೆ. ಆದರೆ ಅದನ್ನು ಕಣ್ಣಾರೆ ಕಾಣುವ ಭಾಗ್ಯ ಸಿಕ್ಕಿದ್ದು ಚಿಕ್ಕಮಗಳೂರಿನ ಮಹೇಶಣ್ಣ ನವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ. ಏಪ್ರಿಲ್ ಒಂಬತ್ತು ಶ್ರೀ ಹಾಗೂ ಶ್ರೀಮತಿ ರೂಪಾ ಮಹೇಶ್ ಅವರ ಏಕೈಕ ಮಗಳು ಸನ್ಮಿತಾಳ ಹುಟ್ಟಿದ ದಿನ. ಅಂದು ನನ್ನ ಹುಟ್ಟಿದ ದಿನವೂ ಸಹ ಹೌದು. ಇದೇ ಮೊದಲ ಬಾರಿಗೆ ನನ್ನ ಹುಟ್ಟು ಹಬ್ಬದ ದಿನ ನಾನು ನನ್ನ ಆತ್ಮೀಯರೊಂದಿಗೆ ಕಾಲ ಕಳೆಯುವ ಅವಕಾಶ ಸಿಕ್ಕಿದ್ದು ಬಹಳ ಸಂತೋಷ ಉಂಟುಮಾಡಿತ್ತು. ಬಹಳ ದಿವಸಗಳ ನಂತರ ಎಲ್ಲರೂ ಒಂದೆಡೆ ಅದರಲ್ಲಿಯೂ ಬೆರಣಗೋಡಿನ ಮನೆಯಲ್ಲಿ ಸೇರುವ ಅವಕಾಶ ಯೋಗವೇ ಸರಿ. ಸನ್ಮಿತಾಳಿಗೆ ಇದು ಮೊದಲ ಹುಟ್ಟು ಹಬ್ಬವಾದ್ದರಿಂದ ಕಾರ್ಯಕ್ರಮ ಅದ್ದೂರಿಯಾಗಿಯೇ ಇತ್ತು. ಯಾವುದೇ ಕಾರ್ಯಕ್ರಮಗಳು ಒಂದೇ ದಿವಸ ಆದರೂ ಸಹ ಬೆರಣಗೋಡಿಗೆ ಬಂದವರಾರೂ ಒಂದೇ ದಿನದಲ್ಲಿ ಅಲ್ಲಿಂದ ಹೋಗುವುದಿಲ್ಲ. ಅಂತಹ ವಾತಾವರಣ, ಪ್ರಕೃತಿ ಸೌಂದರ್ಯ ಹಾಗೂ ಹೊಂದಿಕೊಂಡು ಮನಸ್ಸಂತೋಷ ಉಂಟುಮಾಡುವಂತಹ ಮನಸ್ಸುಗಳು ಅಲ್ಲಿವೆ.


ಮಾರನೆಯ ದಿವಸ ಬೆಳ್ಳಗ್ಗಿನಿಂದ ಸಂಜೆಯ ವರೆಗೂ ಹೇಗೆ ಕಾಲ ಕಳೆದೆವು ಎಂಬ ವಿಚಾರ ಯಾರೊಬ್ಬರಿಗೂ ಅರಿವಾಗಲೇ ಇಲ್ಲ. ಸಮಯದ ಅರಿವಾಗುವ ಹೊತ್ತಿಗೆ ಸಂಜೆ ನಾಲ್ಕು ಘಂಟೆಯಾಗಿತ್ತು. ಎಲ್ಲಾದರೊಂದೆಡೆಗೆ ಹೋಗಬೇಕು ಅಂದುಕೊಂಡ ಮನಸ್ಸುಗಳಿಗೆ ಮಹೇಶಣ್ಣ ನೀಡಿದ ಸಲಹೆ "ಕುದುರೆ ಅಬ್ಬಿ" ಇದು ತುಂಗಾ ನದಿಯ ತೀರದಲ್ಲಿರುವ ಒಂದು ಅಜ್ಞಾತ ಸ್ಥಳ, ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರೇಕ್ಷಣಾ ಅಥವಾ ಪ್ರವಾಸಿ ಸ್ಥಳ ಎಂದು ಗುರುತಿಸದೇ ಇದ್ದರೂ ಸಹ ಪ್ರಾಕೃತಿಕವಾಗಿ ತನ್ನದೇ ಆದಂತಹ ವೈವಿಧ್ಯತೆ ಹಾಗೂ ಆಕರ್ಷಣೆ ಹೊಂದಿರುವ ಸ್ಥಳ ಇದು.
ಬೆರಣಗೋಡಿನಿಂದ ಸುಮಾರು ಒಂದು ತಾಸು ಪ್ರಯಾಣವಾಗುತ್ತದೆ. ನಾವು ಅಲ್ಲಿಗೆ ತಲುಪುವ ವೇಳೆಗಾಗಲೇ ಸಂಜೆ ಐದು ಘಂಟೆಯಾಗಿತ್ತು. ಅಲ್ಲಿಗೆ ಹೋದ ಮೇಲೆಯೇ ಅಲ್ಲಿನ ವೈವಿದ್ಯತೆ ಹಾಗೂ ಆಕರ್ಷಣೆ ಏನು ಎಂಬುದು ಗೊತ್ತಾಗಿದ್ದು, ತುಂಗಾ ನದಿಯ ಆ ಸ್ಥಳದಲ್ಲಿ ದೊಡ್ಡ ದೊಡ್ಡ ಬಂಡೆಗಳಿವೆ ಅದೆಂತದೋ ವಿಶೇಷವಾದ ಕಲ್ಲಿನ ಜಾತಿ ಎಂದು ನನಗನಿಸಿತು. ನದಿಯ ಎರಡೂ ತೀರದಲ್ಲಿಯೂ ಸಹ ಮರಳುಗಾಡನ್ನು ನೆನಪಿಸುವಂತಹ ಮರಳಿನ ರಾಶಿ ಇದೆ. ಮರಳು ಕೋರರ ಕಣ್ಣಿಗೆ ಈ ಮರಳು ಕಂಡಿಲ್ಲವೇನೋ ಎಂದೆನಿಸಿತು. ಆ ಮರಳಿನ ರಾಶಿಯನ್ನು ಕಂಡೊಡನೆ ಬಾಲ್ಯದ ದಿವಸಗಳು ನೆನಪಾದವು.
ಈ ಸ್ಥಳದಲ್ಲಿರುವ ಬಂಡೆಗಳು ಅದೆಷ್ಟು ಸಾವಿರ ವರ್ಷಗಳಿಂದ ತುಂಗಾನದಿಯ ನೀರಿಗೆ ಬೆನ್ನು ಕೊಟ್ಟು ನಿಂತಿವೆಯೋ ಗೊತ್ತಿಲ್ಲ, ಆ ನೀರೂ ಸಹ ಅದೆಷ್ಟು ವರ್ಷಗಳಿಂದ ಈ ಬಂಡೆಗಳಿಗೆ ಮುತ್ತಿಟ್ಟು ಸಾಗುತ್ತಿವೆಯೋ ಅದನ್ನು ಸಹ ಸಂಶೋಧನೆಯ ಮೂಲಕವೇ ಖಾತ್ರಿ ಪಡಿಸಿಕೊಳ್ಳಬೇಕು.

ಸಾವಿರಾರು ವರ್ಷಗಳಿಂದ ನೀರಿನ ರಭಸಕ್ಕೆ ಮೈಯೊಡ್ಡಿರುವ ಈ ಬಂಡೆಗಳಿಗೆ ನೀರು ಒಂದು ರೂಪವನ್ನೇ ನೀಡಿದೆ. ಕ್ಷಮಿಸಿ ಅದು ಒಂದು ರೂಪವಲ್ಲ ನೂರಾರು, ಸಾವಿರಾರು ಎಂದರೆ ತಪ್ಪಾಗಲಾರದು. ಹರಿವ ನೀರಿಗೆ ಮೈಚೆಲ್ಲಿ ಕುಳಿತ ಬಂಡೆಗಳು ವರ್ಣಿಸಲಸಾದ್ಯವಾದ ರೀತಿಯ ರೂಪಗಳನ್ನು ಪಡೆದುಕೊಂಡಿವೆ. ಚಿತ್ರಕಲಾವಿದರು ರಚಿಸುವ ಚಿತ್ರಗಳಿಗೆ ಈ ಪ್ರಾಕೃತಿಕ ಶಿಲ್ಪಕಲೆಗಳೇ ಸ್ಪೂರ್ತಿದಾಯಕವೇನೋ ಎಂದೆನಿಸುತ್ತದೆ. ಒಂದೊಂದೆಡೆ ಬಂಡೆ ಕಲ್ಲುಗಳೇ ಕೊಳವೆಯ ರೂಪದಲ್ಲಿ ಕೊರೆದು ಹೋಗಿದ್ದು ಆ ನವಿರತೆ ಹಾಗೂ ಅಚ್ಚುಕಟ್ಟು ಎಂತಹ ಕಲಾವಿದನನ್ನು ನಾಚಿಸುವಂತಿದೆ. ಇನ್ನು ಕೆಲವು ಬಂಡೆಗಳ ತುದಿಯಲ್ಲಿ ಹಳ್ಳ ಉಂಟಾಗಿದ್ದು ತೊಟ್ಟಿಯಂತಹ ರೂಪ ಪಡೆದುಕೊಂಡಿವೆ. ಅಂತಹ ಬಂಡೆಗಳೇ ಆ ತುಂಗೆಗೆ ಮನಸೋತು ತನ್ನ ತನ್ನವನ್ನು ಕಳೆದುಕೊಂಡಿರುವಾಗ ಇನ್ನು ಸಣ್ಣ ಪುಟ್ಟ ಕಲ್ಲುಗಳ ಕಥೆಯೇನಾಗಿರಬೇಕು? ಆ ಕಥೆಯ ಸಾರಾಂಶವನ್ನು ಹೇಳದೇ ಇದ್ದರೆ ಈ ಬರಹ ಪೂರ್ಣವಾಗುವುದಿಲ್ಲ. ಏಕೆಂದರೆ ಆ ಸಣ್ಣ ಸಣ್ಣ ಶಿಲಾ ರೂಪಗಳ ಪರಿಶೀಲನೆ , ಅವುಗಳ ಅಂದ ಸ್ವಾದನೆ ಹಾಗೂ ಅವುಗಳ ರೂಪ ನಿರ್ಧಾರ ಮಾಡುವುದರಲ್ಲಿಯೇ ನಮ್ಮ ಹಲವು ಹೊತ್ತು ವ್ಯಯವಾಗಿದ್ದು. ಗುಂಡುಕಲ್ಲು, ಶಿವಲಿಂಗ, ಬೀಸು ಕಲ್ಲು, ಚಕ್ರಾಕಾರ, ಚಪ್ಪಟೆ ಆಕಾರ, ಇಲಿ ರೂಪ, ಎಲೆ ರೂಪ ಹೀಗೆ ಈ ಪ್ರಕೃತಿಯಲ್ಲಿರುವ ಹಲವು ವಸ್ತುಗಳ ಪ್ರಾಣಿಗಳ ವಿವಿಧ ರೂಪಗಳನ್ನು ಪಡೆದುಕೊಂಡಿರುವ ಶಿಲ್ಪಗಳು ಎಂತಹವರನ್ನು ಆಕರ್ಷಿಸುತ್ತವೆ. ಬರಿಗೈನಲ್ಲಿ ಅಲ್ಲಿಗೆ ಹೋದ ನಾವು ನಮ್ಮ ಬ್ಯಾಗುಗಳು, ಜೇಬುಗಳು ಹಾಗೂ ಜೇಬಿಲ್ಲದವರು ಪಂಚೆ, ವೇಲ್ ಗಳಲ್ಲಿಯೂ ಸಹ ಕಲ್ಲು, ಕಲ್ಲುಗಳನ್ನೇ ತುಂಬಿಕೊಂಡು ಬಂದೆವು. ವಿವಿಧ ರೂಪದ ವಿಭಿನ್ನ ಕಲ್ಲುಗಳಿಗಾಗಿ ಕಿತ್ತಾಟವೂ ನಡೆಯಿತು ಮನೆ ತಲುಪಿದಾಗ ಕಲ್ಲುಗಳನ್ನು ಯಾರಿಗೂ ಕಾಣದ ಗೌಪ್ಯ ಸ್ಥಳಗಳಲ್ಲಿ ಇಡಲು ಪ್ರಯತ್ನಿಸಿದ ಪ್ರಸಂಗವೂ ನಡೆಯಿತು ಎಂದರೆ ಅವುಗಳು ಎಷ್ಟು ಮುದ್ದಾಗಿರಬಹುದು ಎಂಬುದನ್ನು ಯಾರಾದರೂ ಊಹಿಸಿಕೊಳ್ಳಬಹುದು.

ಅನೇಕ ದಿವಸಗಳಿಂದ "ಎಲ್ಲಿಹೋದವು ಆ ನನ್ನ ದಿನಗಳು ಬಾಲ್ಯದಲ್ಲಿ ಕಳೆದ ಬಂಗಾರದ ಕ್ಷಣಗಳು " ಎಂಬ ಪ್ರಶ್ನೆ ನನ್ನನ್ನು ಬಹಳ ದಿವಸಗಳಿಂದ ಕಾಡುತ್ತಲೇ ಇತ್ತು. ಅದನ್ನು ಮರೆಸುವಂತಹ ಒಂದು ಅಚ್ಚರಿ ಮೂಡಿಸಿದವರು ಮಹೇಶಣ್ಣ, ಹೇಗೂ ಅಪರೂಪದ ಮರಳ ರಾಶಿ ದೊರೆತಿದೆ ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳಲು ಸೂಕ್ತವಾದ ಅಂಗಳ ಇದು ಎಂದ ಅವರು ಮಾತು ಮಾತನಾಡುತ್ತಲೇ ಜೋಟ್ ಹೇಳಿ ಮರಳಿಗಿಳಿದೇ ಬಿಟ್ಟರು ಅದನ್ನೇ ಕಾಯುತ್ತಿದ್ದ ವನಶ್ರೀ ಹಾಗೂ ಇತರರು ಅಂಗಳಕ್ಕಿಳಿದರು. ವಯಸ್ಸಿನ್ನ ಭೇದ ಮರೆತ ಎಲ್ಲರೂ ಮರಳಿಗಿಳಿದರು ಜೂಟಾಟ, ಕಳ್ಳ ಪೋಲಿಸ್, ಕೆರೆ ದಡ, ಕಲ್ಲು ಮಣ್ಣು, ಚೈನಾಟ ಹೀಗೆ ಬಾಲ್ಯದಲ್ಲಿ ಆಡುತ್ತಿದ್ದ ಯಾವ ಯಾವ ಆಟಗಳು ನೆನಪಾಗುತ್ತವೆಯೋ ಅವೆಲ್ಲವನ್ನು ಆಡಿದೆವು ಆದರೆ ಧಣಿವಾಗಲೇ ಇಲ್ಲ, ದಿನವಿಡೀ ಉರಿದು ಧಣಿದ ಸೂರ್ಯ ಮೋಡದಿಂದ ಜಾರುವವರೆಗೂ ನಮ್ಮ ಮನಸು ಮೈಗಳಿಗೆ ಧಣಿವಾಗಲೇ ಇಲ್ಲ. ನಮ್ಮೊಂದಿಗೆ ಬಂದಿದ್ದ ಪುಟಾಣಿಗಳು ಮೀನುಗಳನ್ನು ಹಿಡಿದರು ನೀರು ಕೊಂಡೊಯ್ದಿದ್ದ ಬಾಟಲಿಗಳಲ್ಲಿ ಸ್ವತಂತ್ರವಾಗಿದ್ದ ಮೀನಿನ ಮರಿಗಳನ್ನು ಬಂಧಿಸಲಾಗಿತ್ತು. ಅಷ್ಟು ಹೊತ್ತಿಗಾಗಲೇ ನನಗೆ ನೀರಡಿಕೆ ಯಾಯ್ತು ವನಶ್ರೀಗೂ ನೀರಾಡಿಕೆಯಾಗಿರಬೇಕು ನೀರಿಗಾಗಿ ಹೋಗುತ್ತಿದ್ದ ಆಕೆಯನ್ನು ಕಂಡೊಡನೆ ನನ್ನ ಪಾಲಿಗೆ ನೀರು ದಕ್ಕುತ್ತದೆಯೋ ಇಲ್ಲವೋ ಎಂದು ಲೆಕ್ಕಾಚಾರ ಹಾಕಿದ ನಾನು ಓಡಿಹೋಗಿ ಬಾಟಲಿಯಲ್ಲಿದ್ದ ನೀರು ಕುಡಿದೆ ನಾನು ಕುಡಿದ ರಭಸ ಹೇಗಿತ್ತೆಂದರೆ ಬಾಟಲಿಯಲ್ಲಿ ಬಂಧಿಯಾಗಿದ್ದ ಮೂರ್ನಾಲ್ಕು ಜೀವಂತ ಮೀನಿನ ಮರಿಗಳು ನಿರಾಯಾಸವಾಗಿ ನನ್ನ ಹೊಟ್ಟೆ ಸೇರಿದವು. ಅದರ ಪರಿಣಾಮ ಏನಾಗಬಹುದೋ ಎಂಬುದನ್ನು ಲೆಕ್ಕಿಸದ ನಾನು ಮತ್ತೆ ಮರಳಿನಾಟದಲ್ಲಿ ಮಗ್ನನಾದೆ. ಮರಳಿನಲ್ಲಿ ಬಿದ್ದೆವು ಅಲ್ಲಿಯೇ ಎದ್ದೆವು, ಬಿದ್ದು ಒದ್ದಾಡಿದೆವು, ಉರುಳಿ ಆನಂದಿಸಿದೆವು, ಆದರೂ ಧಣಿವಾಗಲೇ ಇಲ್ಲ ಒಂದೊಂದು ಕ್ಷಣವೂ ಬಾಲ್ಯದ ನೆನಪಾಯ್ತು ಕುದುರೆ ಅಬ್ಬಿಯನ್ನು ಬಿಟ್ಟು ಬರುವಾಗ ಮನಸು ಭಾರವಾಗಿತ್ತು. ತುಂಗಾ ತೀರದಲ್ಲೊಂದು ದಿವಸ ಬಾಲ್ಯದ ನೆನಪುಗಳನ್ನು ಹಸಿರಾಗಿಸುವಂತೆ ಮಾಡಿದ ಬೆರಣಗೋಡಿನ ಮಹೇಶಣ್ಣ ಹಾಗೂ ರೂಪಕ್ಕನವರಿಗೆ ಎಲ್ಲಕ್ಕಿಂತಲೂ ಹೆಚ್ಚಾಗಿ ಈ ಸಂತೋಷ ಕೂಟಕ್ಕೆ ನೆಪವಾದ ಸನ್ಮಿತಳಿಗೆ ಹಾಗೂ ಅವಳ ಹುಟ್ಟು ಹಬ್ಬಕ್ಕೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಎಂಬುದು ಇನ್ನು ಅರಿವಾಗಿಲ್ಲ.

Sunday, June 22, 2008

"ಪುಣ್ಯಭೂಮಿ"

'ಪುಣ್ಯಭೂಮಿ' ಹಾಸನ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಂದು ಸ್ವಯಂಸೇವಾ ಸಂಸ್ಥೆ, ಕೃಷಿಕರಿಗೆ ನೆರವಾಗುತ್ತಿರುವ "ಪುಣ್ಯಭೂಮಿ" ಕುರಿತಾದ ಕಿರು ಸಾಕ್ಷ್ಯಚಿತ್ರ.
ಬರಹ-ನಿರ್ದೇಶನ: ವಿ.ಮಧುಸೂದನ್
ಕೃಪೆ: ಝೀ ಕನ್ನಡ.