Friday, October 9, 2009

ಸಹ್ಯಾದ್ರಿಯಲ್ಲಿ ಇಬ್ಬಾಗದ ಸಂಕಟ





ಮುಖ್ಯಮಂತ್ರಿಗಳಾದವರು ತಮ್ಮ ಸ್ವಕ್ಷೇತ್ರಗಳನ್ನು ಜಿಲ್ಲೆಯನ್ನಾಗಿ ಪರಿವರ್ತಿಸಿಕೊಳ್ಳುವ ಕೆಲಸ ಇತ್ತೀಚಿನ ದಿವಸಗಳಲ್ಲಿ ಹಚ್ಚಾಗುತ್ತಿದೆ. ಆಡಳಿತದ ಹಿತದೃಷ್ಟಿಯಿಂದ ವಿಶಾಲವಾಗಿರುವ ಜಿಲ್ಲೆಗಳು ಮತ್ತಷ್ಟು ಕಿರಿದಾಗಬೇಕು ಎಂಬುದು ಎಲ್ಲರೂ ಒಪ್ಪುವಂತಹ ವಿಷಯವೇ ಆದರೆ ಅಂತಹ ಅಗತ್ಯತೆಗಳು ಎಲ್ಲೆಲ್ಲಿವೆಯೋ ಅಲ್ಲಿ ಆ ಕೆಲಸ ಈಡೇರಬೇಕೋ ಹೊರತು ಕೇವಲ ಇದು ನಾನು ಪ್ರತಿನಿಧಿಸುತ್ತಿರುವ ಜಿಲ್ಲೆ ಎಂಬ ಏಕೈಕ ಕಾರಣಕ್ಕೆ ಗಡಿಯೊಂದಿಗೆ ಭಾವನೆಗಳನ್ನೂ ಮೈಗೂಡಿಸಿಕೊಂಡಿರುವ ಪ್ರದೇಶಗಳನ್ನು ಒಡೆದು ಒಡೆದು ಹೋಳು ಮಾಡುವಂತದ್ದು ಎಷ್ಟರ ಮಟ್ಟಿಗೆ ಸರಿ?
ಈಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ತಮ್ಮ ಸ್ವಕ್ಷೇತ್ರ ಶಿಕಾರಿಪುರವನ್ನು, ಶಿವಮೊಗ್ಗದಿಂದ ಬೇರ್ಪಡಿಸಿ ಪ್ರತ್ಯೇಕ ಜಿಲ್ಲೆಯನ್ನಾಗಿಸಲು ಸಕಲ ಏರ್ಪಾಡುಗಳೆಲ್ಲವನ್ನೂ ಮಾಡಿಕೊಳ್ಳುತ್ತಿದ್ದಾರೆ ಎಂಬ ಗುಲ್ಲು ಈಗ ಸಹ್ಯಾದ್ರಿ ಸೆರಗಿನ ತುಂಬಾ ರೆಕ್ಕೆ ಪುಕ್ಕಗಳೆಲ್ಲವನ್ನೂ ಕಟ್ಟಿಕೊಂಡು ಸುತ್ತಾಡುತ್ತಿದೆ. ಒಂದೆಡೆ ಶಿಕಾರಿಪುರ ಕ್ಷೇತ್ರದ ಜನತೆಗೆ ಇದು ಸಂತೋಷವನ್ನು ನೀಡಿದರೆ ಸಹ್ಯಾದ್ರಿಯ ಮಲೆಗಳೊಂದಿಗೆ ಭಾವನಾತ್ಮಕ ಬೆಸುಗೆ ಹೊಂದಿರುವ ಅಖಂಡ ಶಿವಮೊಗ್ಗದ ಜನತೆಯ ಮನಸ್ಸಿನಲ್ಲಿ ಈ ವಿಚಾರ ತಲ್ಲಣವನ್ನುಂಟು ಮಾಡಿದೆ. ಮತದಾರರಿಗೆ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳ ರುಚಿ ತೋರಿಸಿ ಅದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಈ ಜನಪ್ರಿಯತೆಯನ್ನು ಮತಗಳನ್ನಾಗಿ ಪರಿವರ್ತಿಸಿ ಕೊಳ್ಳುವ ಹುನ್ನಾರ ಇದಾಗಿದ್ದು ಮತ್ತೇನು ಅಲ್ಲ ಎಂಬುದನ್ನು ಈ ಹಿಂದಿನ ಉದಾಹರಣೆಗಳು ನಿರೂಪಿಸಿವೆ.
ತಮ್ಮ ಸ್ವಕ್ಷೇತ್ರಗಳನ್ನು ಜಿಲ್ಲೆಯನ್ನಾಗಿ ರೂಪಿಸಿಕೊಳ್ಳುವ ಕೆಲಸ ಪ್ರಾರಂಭವಾಗಿದ್ದು ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲರ ಕಾಲದಲ್ಲಿ ೧೫.೦೮.೧೯೯೭ ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್, ದಾವಣಗೆರೆಯನ್ನು ನೂತನ ಜಿಲ್ಲೆಯನ್ನಾಗಿ ಘೋಷಿಸಿದರು. ಆದರೆ ಆಡಳಿತ ದೃಷ್ಟಿಯಿಂದ ಅದು ಅಗತ್ಯವೂ ಆಗಿತ್ತು. ಅಂದು ದಾವಣಗೆರೆಯೊಂದಿಗೆ ಇನ್ನಿತರೆ ಜಿಲ್ಲೆಗಳೂ ಸಹ ಅಸ್ಥಿತ್ವಕ್ಕೆ ಬಂದವು, ಆನಂತರ ಸರಿಯಾಗಿ ಹತ್ತು ವರ್ಷಗಳ ನಂತರ ೨೪.೦೮.೨೦೦೭ರಂದು ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಸ್ವಕ್ಷೇತ್ರ ರಾಮನಗರಕ್ಕೆ ಜಿಲ್ಲೆಯ ಸ್ಥಾನಮಾನ ದೊರಕಿಸಿಕೊಟ್ಟರು. ಈಗ ಈ ಹಿಂದಿನ ಮುಖ್ಯಮಂತ್ರಿಗಳು ಹಾಕಿಕೊಟ್ಟಿರುವ ಪರಂಪರೆಯನ್ನು ಯಡಿಯೂರಪ್ಪನವರೂ ಮುಂದುವರಿಸಲು ಮುಂದಾಗಿದ್ದು ಶಿಕಾರಿಪುರವನ್ನು ಜಿಲ್ಲೆಯನ್ನಾಗಿಸಲು ಮುಂದಾಗಿದ್ದಾರೆ. ಆದರೆ ಅಗತ್ಯ ಸಿದ್ದತೆಗಳೆಲ್ಲವೂ ತೆರೆಮರೆಯಲ್ಲಿ ನಡೆಯುತ್ರಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕನ್ನು ಸೇರಿಸಿ ಶಿಕಾರಿಪುರವನ್ನು ಜಿಲ್ಲೆಯನ್ನಾಗಿಸಬೇಕೆಂಬ ಪ್ರಯತ್ನ ಹಲವು ತಿಂಗಳುಗಳಿಂದ ನಡೆಯುತ್ತಿದ್ದು ಇದಕ್ಕೆ ಇಂಬು ನೀಡುವಂತೆ ಶಿಕಾರಿಪುರಕ್ಕೆ ೨೯೧ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಮುಖ್ಯಮಂತ್ರಿಗಳು ಈ ವಾಸ್ತವವನ್ನು ಅಲ್ಲಗಳೆಯುತ್ತಿದ್ದಾರೆ ಆದಾಗ್ಯೂ ತಾಲ್ಲೂಕು ಕೇಂದ್ರ ಶಿಕಾರಿಪುರದ ಆಸ್ಪತ್ರೆಯನ್ನು ಜಿಲ್ಲಾಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಸುತ್ತೋಲೆಯನ್ನು ಹೊರಡಿಸಲಾಗಿದೆ.
ಹಾಗೆ ನೋಡಿದರೆ ಮತ್ತೊಂದು ತಾಲ್ಲೂಕು ಹಾಗೂ ಉಪವಿಭಾಗದ ಕೇಂದ್ರ ಸ್ಥಾನವನ್ನು ಹೊಂದಿರುವ ಸಾಗರ ಆಡಳಿತಾತ್ಮಕವಾಗಿ ಜಿಲ್ಲಾ ಕೇಂದ್ರಕ್ಕೆ ಸೂಕ್ತ ಸ್ಥಳ ಎಂದು ಅಲ್ಲಿಯ ಜನತೆ ಈಗಾಗಲೇ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಆದರೆ ಸ್ವಕ್ಷೇತ್ರ ವ್ಯಾಮೋಹಉಳ್ಳವರಿಗೆ ಆ ಜನರ ಕೂಗಾದರೂ ಹೇಗೆ ಕೇಳಿಸೀತು?
ಹೆಚ್ಚು ಹೆಚ್ಚು ಜಿಲ್ಲೆಗಳಾಗಬೇಕೆಂಬುದು ಎಲ್ಲರ ಆಶಯ ಆದರೆ ಯಾವುದೇ ಒಂದು ಸ್ಥಳವನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಮೊದಲು ಆ ಬಗ್ಗೆ ಚಿಂತನೆ ಅಗತ್ಯ, ಕೇವಲ ತಮ್ಮ ತಮ್ಮ ರಾಜಕೀಯು ಹಿತಾಸಕ್ತಿಗಾಗಿ ಹಾಗೂ ರಾಜಕಾರಣಿಗಳ ಭವಿಷ್ಯದ ಅಸ್ಥಿತ್ವಕ್ಕಾಗಿ ಜಿಲ್ಲೆಗಳನ್ನಾಗಿ ಪರಿವರ್ತಿಸುತ್ತಾ ಸಾಗಿದರೆ ಅದರಿಂದ ಜನತೆಯ ಕಲ್ಯಾಣವನ್ನು ನಿರೀಕ್ಷಿಸಲಾಗುವುದಿಲ್ಲ. ಇಂತದ್ದೇ ಪರಿಪಾಟ ಹೀಗೆಯೇ ಮುಂದುವರಿದರೆ ಮುಂದೆ ಹರದನಹಳ್ಳಿ, ಪಡುವಲಹಿಪ್ಪೆಗಳೂ ಒಂದೊಂದು ಪ್ರತ್ಯೇಕ ಜಿಲ್ಲೆಗಳಾಗುವ ದಿವಸಗಳು ದೂರವಾಗುವುದಿಲ್ಲ.