Friday, May 30, 2008

ಪ್ರಜಾ ಪ್ರಭುತ್ವದ ಆಶಯ ಎತ್ತಿಹಿಡಿದ ಚುನಾವಣಾ ಆಯೋಗ


ರಾಜಕೀಯವೆಂದರೆ ವಾಕರಿಕೆ ಬರುವಂತಹ ಮಟ್ಟದಲ್ಲಿದ್ದ ರಾಜ್ಯದ ರಾಜಕೀಯ, ಚುನಾವಣಾ ಆಯೋಗ ಕೈಗೊಂಡ ಕೆಲವು ಕಟ್ಟು ನಿಟ್ಟಿನ ಕ್ರಮದಿಂದಾಗಿ ರಾಜ್ಯದ ಜನತೆಯಲ್ಲಿ ಒಂದಷ್ಟು ಸಮಾಧಾನ ಮೂಡಿಸಿದೆ. ಚುನಾವಣಾ ಆಯೋಗ ಈ ಮಟ್ಟದ ಕ್ರಮ ಕೈಗೊಳ್ಳುತ್ತದೆ ಎಂಬ ಸುಳಿವು ಈ ಮೊದಲೇ ಜನಸಾಮಾನ್ಯರಿಗೆ ದೊರೆತಿದ್ದರೆ ಪ್ರಜಾಪ್ರಭುತ್ವದ ಆಶಯಕ್ಕೆ ಮತ್ತಷ್ಟು ಮನ್ನಣೆ ಬರುವಂತೆ ಹೆಚ್ಚು ಹೆಚ್ಚು ಜನರಿಗೆ ಚುನಾವಣೆಗ ಸ್ಪರ್ಧಿಸುವಂತಹ ಅವಕಾಶ ದೊರೆಯುತ್ತಿತ್ತೇನೋ?

ಈ ಹಿಂದೆ ಸುಮಾರು ಇಪ್ಪತ್ತು ವರ್ಷಗಳಿಂದ ಈಚೆಗೆ, ಲೋಕಸಭೆ ಹಾಗೂ ವಿಧಾನ ಸಭೆಗಳಿಗೆ ನಡೆದ ಚುನಾವಣೆಗಳು, ಜನ ಸಾಮಾನ್ಯರಲ್ಲಿ ಅಸಮದಾನ ಉಂಟುಮಾಡಿದ್ದವು. ಚುನಾವಣೆ ಸಮಯದಲ್ಲಿ ನಡೆಯುತ್ತಿದ್ದ ಅಬ್ಬರದ ಪ್ರಚಾರ , ಹರಿಯುತ್ತಿದ್ದ ಹಣ ಹಾಗೂ ಹೆಂಡದ ಹೊಳೆ, ಸಮಾಜದಲ್ಲಿ ಪ್ರಜಾಪ್ರಭುತ್ವದ ಬಗ್ಗೆಯೇ ಅಸಹ್ಯ ಉಂಟು ಮಾಡುತ್ತಿತ್ತು. ಯಾವುದೇ ವ್ಯವಸ್ಥೆಗಿಂತಲೂ ಸರ್ವಶ್ರೇಷ್ಟ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಪ್ರಜಾ ಪ್ರಭುತ್ವದಂತಹ ಶ್ರೇಷ್ಟ ವ್ಯವಸ್ಥೆಯನ್ನು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶದ ಜನರು ಅಣಕಿಸುವ ಮುನ್ನ, ಪ್ರಜಾತಂತ್ರ ವ್ಯವಸ್ಥೆಯನ್ನು ಅನುಷ್ಟಾನಗೊಳಿಸಲು ಸಂವಿಧಾನಿಕವಾಗಿ ಅಸ್ಥಿತ್ವಕ್ಕೆ ಬಂದಿರುವ ಚುನಾವಣಾ ಆಯೋಗ ಎಚ್ಚೆತ್ತು ಕೊಂಡಿದ್ದು ಮೆಚ್ಚತ್ತಕ್ಕಂಹ ವಿಚಾರವಾಗಿದೆ.

ಭಾರತೀಯ ಸಂವಿಧಾನದ ಭಾಗ 15ರಲ್ಲಿ ಚುನಾವಣಾ ಆಯೋಗದ ಕರ್ತವ್ಯ ಹಾಗೂ ಅಧಿಕಾರಗಳ ಬಗ್ಗೆ ೩೨೪ ರಿಂದ 329ನೇ ವಿಧಿಯವರೆಗೂ ವಿವರಿಸಲಾಗಿದೆ. ನಮ್ಮ ದೇಶದ ಸಂಸತ್ತಿನ ಹಾಗೂ, ಯಾವುದೇ ರಾಜ್ಯಗಳ ವಿಧಾನ ಮಂಡಲ ಮತ್ತು ರಾಷ್ಟ್ರಪತಿಯ ಚುನಾವಣೆಗಳಿಗೆ ಸಂಬಂಧಿಸಿದಂತೆ ಚುನಾವನಾ ಆಯೋಗ ಜವಾಬ್ದಾರಿಯುತವಾದಂತಹ ಕೆಲಸ ನಿರ್ವಹಿಸಬಹುದಾಗಿದ್ದು, ಮತದಾರರ ಪಟ್ಟಿ ತಯಾರಿಕೆಯಿಂದ ಹಿಡಿದು ಚುನಾವಣೆಯ ನಿರ್ವಹಣೆ, ನಿರ್ದೇಶನ ಮತ್ತು ನಿಯಂತ್ರಣಗಳನ್ನು ಚುನಾವಣಾ ಆಯೋಗ ಮಾಡಬಹುದಾಗಿದೆ. ಆದರೆ ಕಳೆದ ವರ್ಷ ಮೈಸೂರಿನ ಚಾಮುಂಡಿ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆ ಪ್ರಜಾತಂತ್ರ ವ್ಯವಸ್ಥೆಯನ್ನು ಅಣಕಿಸುವ ಪರಿಯಲ್ಲಿದ್ದುದೇ ಚುನಾವಣಾ ಆಯೋಗ ಈ ಬಾರಿ ಈ ಮಟ್ಟದ ವಿಧಿವಿದಾನಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಕಾರಣವಾಗಿರಬಹುದು. ಈ ಎಲ್ಲಾ ಬೆಳವಣಿಗೆ ಚುನಾವಣಾ ಆಯೋಗಕ್ಕೆ ಶಿಸ್ತು ರೂಪಿಸಲು ಸಹಾಯಕವಾಗಿದೆ ಎಂಬುದು ಒಳ್ಳೆಯ ಬೆಳವಣಿಗೆಯೇ ಆಗಿದ್ದರೂ ಅದಕ್ಕೆ ಕರ್ನಾಟಕ ಕಾರಣವಾಯಿತಲ್ಲ ಎಂಬುದನ್ನು ಕನ್ನಡಿಗರು ಆಲೋಚಿಸುವಂಸುವಂತಾಗಿದೆ.

ಈ ಹಿಂದಿನ ಚುನಾವಣೆಗಳಲ್ಲಿ ನಡೆಯುತ್ತಿದ್ದ ಅಬ್ಬರದ ಪ್ರಚಾರ ಹರಿಯುತ್ತಿದ್ದ ಹಣದ ಹೊಳೆ ಇವೆಲ್ಲವೂ ಸಜ್ಜನರನ್ನು ಚಿಂತೆಗೆ ದೂಡಿದ್ದವು, ಸಾಮಾನ್ಯರು ಚುನಾವಣೆ ಎಂದರೆ ಅದು ಧಣಿಗಳಿಗೆ, ಹಣ ಉಳ್ಳವರಿಗೆ ಹಾಗೂ ಎಷ್ಟಾದರೂ ಸಹ ಖರ್ಚು ಮಾಡಲು ತಯಾರಿರುವವರಿಗೆ ಎಂಬ ರೀತಿ ಬಾಸವಾಗುತ್ತಿದ್ದವು. ಈ ಕಾರಣದಿಂದಲೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿಕೊಂಡು, ಚುನಾವಣೆಗಳಲ್ಲಿ ಆಸಕ್ತಿ ಇರುವವರೂ ಸಹ ಚುನಾವಣೆಗಳಿಂದ ದೂರವೇ ಉಳಿದಿದ್ದು ತಮ್ಮ ಅಸಹಾಯಕತೆ ಪ್ರದರ್ಶಿಸುತ್ತಿದ್ದರು ಆದರೆ ಚುನಾವಣಾ ಆಯೋಗ ಪ್ರಸ್ತುತ ಚುನಾವಣೆಯಲ್ಲಿ ಕೈಗೊಂಡ ಕ್ರಮಗಳು ಜನಸಾಮಾನ್ಯರಲ್ಲಿ ಚುನಾವಣೆ ಹಾಗೂ ಪ್ರಜಾಪ್ರಭುತ್ವ ಮತ್ತು ರಾಜಕಾರಣದ ಬಗ್ಗೆ ಆಶಾ ಕಿರಣ ಮೂಡಿಸಿವೆ.

ಚುನಾವಣಾ ಅಧಿಕಾರಿಗಳಿಗೆ ಯಾವ ವಿಧಧ ಅಧಿಕಾರವಿರುತ್ತದೆ ಹಾಗೂ ಅದನ್ನು ಸಮರ್ಥವಾಗಿ ಹೇಗೆ ಬಳಸಬಹುದು ಎಂಬುದನ್ನು ರೇಮಂಡ್ ಪೀಟರ್ ಅಂತಹ ದಕ್ಷ ಅಧಿಕಾರಿಗಳು ತೋರಿಸಿಕೊಟ್ಟಿರುವಂತದ್ದು ಸಹ ಕರ್ನಾಟಕದ ಚುನಾವಣೆಯಲ್ಲಿ ವ್ಯಕ್ತವಾಗಿದೆ. ದಕ್ಷ ಅಧಿಕಾರಿಗಳ ಪ್ರಾಮಾಣಿಕ ಕರ್ತವ್ಯ ನಿರ್ವಹಣೆಯಿಂದಾಗಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಹರಿದು ಬಂದಿದೆ. ಚುನಾವಣಾ ಸಮಯಗಳಲ್ಲಿ ಅಧಿಕಾರಿಗಳಿಗೆ ಎಂತಹ ಅಧಿಕಾರವಿರುತ್ತದೆ ಎಂಬುದರ ಅರಿವು ಮಾಡಿಕೊಟ್ಟು ಅದನ್ನು ಸಮರ್ಥವಾಗಿ ಬಳಸಲು ಅವಕಾಶ ಕೊಟ್ಟ ಚುನಾವಣಾ ಆಯೋಗದ ಕ್ರಮ ಪ್ರಶಂಸನಾರ್ಹವಾಗಿದೆ. ಆದರೆ ಇದೇ ಅಧಿಕಾರಿಗಳು ಬೆಂಗಳೂರು ಹಾಗೂ ಕೋಲಾರದಲ್ಲಿ ನೂರೈವತ್ತಕ್ಕೂ ಅಧಿಕ ಜನರ ಅಮೂಲ್ಯ ಪ್ರಾಣ ಬಲಿತೆಗೆದುಕೊಂಡ ಕಳ್ಳಭಟ್ಟಿ ನಿಯಂತ್ರಿಸುವಲ್ಲಿ ವಿಫಲರಾಗಿರುವುದು ಶೋಚನೀಯ ಸಂಗತಿಯಾಗಿದೆ.

ಇಷ್ಟೆಲ್ಲಾ ಸೂಕ್ತ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗ, ಕೇವಲ ಚುನಾವಣೆಗಳು ಬಂದಾಗ ಮಾತ್ರ ಹೆಚ್ಚು ಜಾಗೃತರಾಗದೆ, ವರ್ಷದ ಎಲ್ಲಾ ಕಾಲದಲ್ಲಿಯೂ ಜಾಗೃತವಾಗಿದ್ದು ಅಪಾರ ದೋಷಗಳಿಂದ ಕೂಡಿರುವ ಮತದಾರರ ಪಟ್ಟಿಯನ್ನು ಕಡಾ ಕಂಡಿತವಾಗಿ ಸಿದ್ದಪಡಿಸುವತ್ತ ಜಾಗೃತವಾಗಬೇಕಿದೆ ಹಾಗೂ ಬಹಳಾ ಕಾಲದಿಂದಲೂ ಸಮಸ್ಯೆಯಾಗಿಯೇ ಉಳಿದು ಬಂದಿರುವ ಕಡಿಮೆ ಪ್ರಮಾಣದ ಮತದಾನ ಸಮಸ್ಯೆಯನ್ನು ಬಗೆಹರಿಸುವತ್ತಲೂ ಆಲೋಚಿಸಬೇಕಾಗಿದೆ. ಪ್ರತೀ ಚುನಾವಣೆಯಲ್ಲು ಒಟ್ಟಾರೆ ಶೇಕಡ 50ಕ್ಕಿಂತಲೂ ಕಡಿಮೆ ಪ್ರಮಾಣದ ಮತದಾನವಾಗುತ್ತಿದ್ದು ಈ ಪ್ರಮಾಣದ ಮತದಾನದಿಂದ ಆಯ್ಕೆಯಾಗುವಂತಹ ಸದಸ್ಯರನ್ನು ಹಾಗೂ ಸರ್ಕಾರಗಳನ್ನು ಸರ್ವಸಮ್ಮತವಾಗಿ ಒಪ್ಪಕೊಳ್ಳುವುದು ಕಠಿಣ ಸಂಗತಿಯಾಗಿರುತ್ತದೆ.

ಒಟ್ಟಾರೆ ಕರ್ನಾಟಕದಲ್ಲಿ ಈಗ ನಡೆದ ಚುನಾವಣೆಯ ವಿಧಿ ಹಾಗೂ ವಿಧಾನಗಳು ನಮ್ಮ ರಾಜ್ಯದ ಹಾಗೂ ದೇಶದ ಜನರಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಹೊಸದಾದ ಆಶಾಕಿರಣ ಮೂಡಿಸುವಲ್ಲಿ ಯಶಸ್ವಿಯಾಗಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಪ್ರಜಾಪ್ರತಿಧಿಗಳು ಹಾಗೂ ಈಗ ಅಸ್ಥಿತ್ವಕ್ಕೆ ಬಂದಿರುವ ಸರ್ಕಾರವನ್ನು ಅವಲಂಭಿಸಿದೆ.

ನಮ್ಮ ರಾಜಕಾರಣಿಗಳಿಗೆ ಕ್ಷಮೆ ಇದೆಯೇ?



ರಕ್ಷಣೆ ಇಲ್ಲದ ರಾಜ್ಯದ ಮೇಲೆ ಎಂತೆಂತಹ ದಾಳಿಗಳನ್ನು ಮಾಡಬಹುದು ಎಂಬುದಕ್ಕೆ ಕರ್ನಾಟಕ ಉದಾಹರಣೆಯಾಗಬೇಕೇ? ಕರ್ನಾಟಕದ ಮೇಲೆ ನೆರೆ ರಾಜ್ಯಗಳ ಸವಾರಿ ಇಂದು ಹೊಸತೇನು ಅಲ್ಲ. ಇದು ಪಾರಂಪರಿಕವಾಗಿ ನಡೆದುಕೊಂಡು ಬಂದಿರುವುದು ನಮ್ಮ ಇತಿಹಾಸದಿಂದ ವೇದ್ಯವಾಗುತ್ತದೆ. ಇಂತಹ ಸನ್ನಿವೇಶ ಪ್ರಾಚೀನ ಕಾಲದಿಂದ ಅಸ್ಥಿತ್ವದಲ್ಲಿದ್ದರೂ ಸಹ ಇದಾವುದನ್ನು ಲೆಕ್ಕಿಸದೆ ಸ್ವಾರ್ಥ ವನ್ನೇ ಪ್ರಧಾನವಾಗಿರಿಸಿಕೊಂಡು ಒಂದು ಆಡಳಿತಾತ್ಮಕ ವ್ಯವಸ್ಥೆಯನ್ನು ಗಾಳಿಗೆ ತೂರಿದ ನಮ್ಮ ರಾಜಕಾರಣಿಗಳಿಗೆ ಕ್ಷಮೆ ಇದೆಯೇ?

2004ರ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭೆಗೆ ಯಾವುದೇ ಪಕ್ಷಕ್ಕೂ ಬಹುಮತ ಸಿಗಲಿಲ್ಲ. ಆ ಸಂದರ್ಭದಲ್ಲಿ ಅಸ್ಥಿತ್ವಕ್ಕೆ ಬಂದಿದ್ದು ಸಮ್ಮಿಶ್ರ ಸರ್ಕಾರ, ಮೊದಲು ಕಾಂಗ್ರೇಸ್ನೊಂದಿಗೆ ಆನಂತರ ಬಿ.ಜೆ.ಪಿ ಯೊಂದಿಗೆ ಸರ್ಕಾರ ರಚನೆ ಮಾಡಿ ಸರಿ ಸುಮಾರು 20-20 ತಿಂಗಳುಗಳ ಕಾಲ ಆಡಳಿತ ನಡೆಸಿದ ಜಾತ್ಯಾತೀತ ಜನತಾದಳ ಸ್ವಾರ್ಥವನ್ನು ಮೈಗೂಡಿಸಿಕೊಂಡು ಎರಡೂ ಪಕ್ಷಗಳೊಂದಿಗೆ ಸಂಬಂಧ ಕಡಿದು ಸರ್ಕಾರಗಳನ್ನು ಉರುಳಿಸಿದ ಕಥೆ ಜನ ಸಾಮಾನ್ಯರೆಲ್ಲರಿಗೂ ಗೊತ್ತು.

ಹೀಗೆ 2004ರ ನಂತರ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲು ಕೈ ಜೋಡಿಸಿದ ಯಾವುದೇ ಪಕ್ಷದವರೂ ನಾಡು ನುಡಿ ಹಾಗೂ ಇಲ್ಲಿನ ಜನರ ಕುರಿತಾಗಿ ಕಿಂಚಿತ್ತಾದರೂ ಆಲೋಚಿಸಿದ್ದರೇ ಎಂಬುದು ಪ್ರಶ್ನಾರ್ಹ. ಒಂದು ಸರ್ಕಾರದ ಅಸ್ಥಿತ್ವವಾಗಲಿ ಅಥವಾ ಅವನತಿಯಾಗಲಿ ಒಂದು ರಾಜ್ಯದ ಮೇಲೆ ಸೂಕ್ಷ್ಮವಾಗಿ ಹಾಗೂ ಸಮಗ್ರವಾಗಿ ಎಂಥೆಂತಹ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದನ್ನು ಯೋಚಿಸದೇ ನಿರ್ಧಾರ ಕೈಗೊಳ್ಳುವ ಮುಖಂಡರು ನಮ್ಮ ಮೇಲೆ ಹತ್ತಾರು ವರ್ಷಗಳಿಂದ ಆಡಳಿತ ನಡೆಸುತ್ತಿದ್ದಾರೆ ಹಾಗೂ ಅವರನ್ನೇ ನಾವು ಪುನ: ಪುನ: ಆಯ್ಕೆ ಮಾಡುತ್ತಿದ್ದೇವೆ ಎಂಬುದು ಮತದಾರರು ತಲೆ ತಗ್ಗಿಸುವಂತಹ ವಿಷಯವಾಗಿದೆ.

ಪ್ರಸ್ತುತ ಕರ್ನಾಟಕದ ವಿಚಾರವನ್ನು ಗಮನಿಸುವುದಾದರೆ ಒಂದೆಡೆ ತಮಿಳುನಾಡಿನ ಕಿರುಕುಳ, ಮತ್ತೊಂದೆಡೆ ಎಂದಿಗೂ ಯಾವುದಕ್ಕೂ ಈ ಪರಿಯಲ್ಲಿ ತಂಟೆ ಮಾಡದ ಕೇರಳ ಇಂದು ಅಪಸ್ವರ ಎಳೆದು ಕುಳಿತಿದೆ. ಇನ್ನು ಮಹಾರಾಷ್ಟ್ರದ ರಗಳೆ ಹಿಂದಿನಿಂದಲೂ ಇದ್ದದ್ದೇ, ಆಂಧ್ರದ ಹಿಂಸೆ ಸದ್ಯಕ್ಕೆ ಇಲ್ಲವಾದರೂ ಅದರ ರಗಳೆಯನ್ನು ತಳ್ಳಿ ಹಾಕುವಂತಿಲ್ಲ. ಹೊಗೇನಕಲ್ ದ್ವೀಪದಲ್ಲಿ ನಡೆಯುತ್ತಿರುವ ಕಾಮಗಾರಿ ಅಧಿಕೃತವೋ, ಅನಧೀಕೃತವೋ ಎಂಬ ವಿಚಾರ ಇನ್ನು ಮುಂದೆ ನಿರ್ಧಾರವಾಗಬೇಕಾಗಿದೆ. ಆದರೆ ಒಂದು ರಾಜ್ಯದಲ್ಲಿ ಜನಪ್ರಿಯ ಸರ್ಕಾರ ಇಲ್ಲದ ಸಂಧರ್ಭದಲ್ಲಿ ಅವರು ಅದನ್ನು ಕೈಗೆತ್ತಿಕೊಂಡಿದ್ದು, ಅವರ ಸಮಯಸಾಧಕತನ ಹಾಗೂ ನಮ್ಮ ಜನಪ್ರತಿನಿಧಿಗಳ ಮೂರ್ಖತನ ಎಂಬುದರಲ್ಲಿ ಎರಡನೇ ಮಾತಿಲ್ಲ. ತಮಿಳುನಾಡು ಜಲ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮೇಲೆ ಆಗ್ಗಾಗ್ಗೆ ಸವಾರಿ ಮಾಡುತ್ತಲೇ ಬಂದಿದ್ದು ಅದನ್ನು ಸಮರ್ಥವಾಗಿ ಎದುರಿಸಲಾಗದ ನಮ್ಮ ಮುಂಖಂಡರೆನಿಸಿಕೊಂಡವರು ತಮಿಳುನಾಡು ರಾಜಕೀಯ ಕಾರಣಕ್ಕಾಗಿ ಈ ವಿಚಾರವನ್ನು ಆಗ್ಗಾಗ್ಗೆ ಪ್ರಸ್ಥಾಪಿಸುತ್ತಿದ್ದು ಸದಾ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿವೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ಈ ಸಂಗತಿಯೂ ಸಹ ನಮ್ಮ ಮುರ್ಖ ರಾಜಕಾರಣಿಗಳ ಹೊಣೆಗೇಡಿ ಹೇಳಿಕೆಗಳು, ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸ್ವಾಭಿಮಾನ ಸಂಬಂಧಿ ವಿಚಾರಗಳಿಗೆ ನೇರವಾಗಿ ಸಂಬಂಧಿಸಿದುದು ಎಂಬ ಅರಿವಿದ್ದಿದ್ದರೆ ಈ ಹೇಳಿಕೆಗಳನ್ನು ಯಾವುದೇ ಜವಾಬ್ದಾರಿಯುತವಾದ ವ್ಯಕ್ತಿ ನೀಡುತ್ತಿರಲಿಲ್ಲ.

ಅನೇಕ ಸಮಸ್ಯೆಗಳಿದ್ದರೂ ಸಹ ಇದುವರೆಗೆ ಸೌಹಾರ್ಧಯುತವಾಗಿ ನಡೆದುಕೊಂಡು ಬಂದಿದ್ದ ಕೇರಳ ದಕ್ಷಣ ಕನ್ನಡ ಜಿಲ್ಲೆಯ ಸೂಳ್ಯ ತಾಲ್ಲೂಕಿನ ಗಡಿ ಭಾಗದ ನೂರಾರು ಎಕರೆ ಜಾಗ ತನಗೆ ಸೇರಬೇಕು ಎಂದು ಅಲ್ಲಿ ವನಸಂವರ್ಧನೆಗೆ ಮುಂದಾಗಿರುವುದು ದುರಂತದ ಸಂಗತಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯವೂ ಸಹ ಕರ್ನಾಟಕದಲ್ಲಿ ಜನಪ್ರಿಯ ಸರ್ಕಾರ ಅಸ್ಥಿತ್ವದಲ್ಲಿ ಇಲ್ಲದೇ ಇರದ ಕಾಲದಲ್ಲಿ ಮುಂದಾಗಿರುವುದು ಪರಸ್ಪರ ರಾಜ್ಯಗಳ ದೌರ್ಭಲ್ಯವೇ ಆಗಿದೆ.

ಮಹಾರಾಷ್ಟ್ರ ರಾಜ್ಯವಂತೂ ಅಲ್ಲಿಯ ರಾಜ್ಯ ಸರ್ಕಾರವೂ ಸೇರಿದಂತೆ ವಿವಿಧ ಸಂಘಟನೆಗಳು ಎಗ್ಗು ಸಿಗ್ಗಿಲ್ಲದೆ ಕರ್ನಾಟಕದ ಮೇಲೆ ವಿಪರೀತ ಹೇಳಿಕೆಗಳನ್ನು ನೀಡುತ್ತಾ ಗಡಿ ಸಮಸ್ಯೆ ಬಿಗಡಾಯಿಸುವಂತೆ ಮಾಡುತ್ತಿರುವುದು ಅವಕಾಶವಾದವಲ್ಲದೆ ಮತ್ತೇನೂ ಅಲ್ಲ. ಸದ್ಯದ ಸ್ಥಿತಿಯಲ್ಲಿ ಆಂಧ್ರ ಯಾವುದೇ ಸಮಸ್ಯೆಗಳನ್ನು ಉಂಟು ಮಾಡದೇ ಇದ್ದಾಗ್ಯೂ ಕರ್ನಾಟಕದಲ್ಲಿ ಒಂದು ಜನಪ್ರಿಯ ಸರ್ಕಾರ ಹಾಗೂ ದಕ್ಷ ಆಡಳಿತ ಅಸ್ಥಿತ್ವದಲ್ಲಿ ಇದ್ದ ಸಂದರ್ಭದಲ್ಲಿಯೇ ನಮ್ಮ ಜಿಲ್ಲಾಧಿಕಾರಿ ಹಾಗೂ ತಾಲ್ಲೂಕು ದಂಡಾಧಿಕಾರಿಗಳಿಗೆ ಗೊತ್ತಿಲ್ಲದಂತೆ ರಾಜ್ಯದ ಒಳಗೂ ಕಾಮಗಾರಿ ಮಾಡಿದ ಅವಿವೇಕಿಗಳು. ಈ ಕಾರಣದಿಂದ ಅವರನ್ನು ನಾವು ಯಾವಾಗಲೂ ಕಡೆಗಣಿಸಲಾಗದು.

ಒಂದು ರಾಜ್ಯದಲ್ಲಿ ದಕ್ಷ ಆಡಳಿತ ಹಾಗೂ ಸರ್ಕಾರ ಇಲ್ಲದಾಗ ಏನೆಲ್ಲಾ ಅವಘಡಗಳು ಸಂಭವಿಸುತ್ತವೆ ಎಂಬ ಪಾಠವನ್ನು ಈ ಸಂಧರ್ಭದಲ್ಲಿ ಕಲಿಯುವ ಅವಕಾಶವನ್ನೂ ಈ ಹಿಂದೆ ೨೦-೨೦ ತಿಂಗಳು ನಮ್ಮನ್ನು ಆಳಿದ ಸಮ್ಮಿಶ್ರ ಸರ್ಕಾರಗಳು ಕಲಿಸಿ ಹೋಗಿವಿ ಹಾಗೂ ರಾಜಕಾರಣಿಗಳನ್ನು ಸಹ ಸ್ವಯಂ ಬೋಧನೆಗೆ ಒಳಗಾಗಿರಬಹುದು, ಇಂತಹಜ ಸ್ಥಿತಿ ಮುಂದೆ ಕನ್ನಡಿಗರಿಗೆ ಬಾರದಂತೆ ತಡೆಯುವ ಶಕ್ತಿ ಇರುವುದು ಕನ್ನಡಿಗರಿಗೆ ಮಾತ್ರ.

Thursday, May 29, 2008

ವೈಜ್ಞಾನಿಕ ಕ್ರಾಂತಿ ಅಭಿವೃದ್ದಿಯ ಮೂಲ ಮಂತ್ರವಾಗಲಿ




ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಭಾರತದಲ್ಲಿ ಉನ್ನತ ಸಂಶೋಧನೆಗಳು ಹಾಗೂ ಪ್ರಯೋಗಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಹಾಗೂ ಸ್ವಾಗತಾರ್ಹ. ಈಚೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ಮಿತ ಧ್ರುವಗಾಮಿ ಕ್ಷಿಪಣಿ ( ಪಿಎಸ್ ಎಲ್ ವಿ-ಸಿ೯) ಏಕಕಾಲದಲ್ಲಿ ಹತ್ತು ಉಪಗ್ರಹಗಳನ್ನು ಯಶಸ್ವಿಯಾಗಿ ಉಡ್ಡಾಯನ ಮಾಡಿ ಅವುಗಳನ್ನು ಕಕ್ಷೆಗೆ ಸೇರಿಸುವ ಮೂಲಕ ವಿಶ್ವದ ಗಮನ ಸೆಳೆದಿದೆ. ಈ ಮೂಲಕ ಭಾರತದಲ್ಲಿ ಬಾಹ್ಯಾಕಾಶ ಸಂಶೋಧನೆ ಲವಲವಿಕೆಯಿಂದ ಕೂಡಿದ್ದು ಮುಂದುವರೆದ ದೇಶಗಳ ಸಂಶೋಧನೆ ಹಾಗೂ ಸಾಧನೆಯ ಮಟ್ಟದಲ್ಲಿಯೇ ಮುಂದುವರೆಯುತ್ತಿದೆ ಎಂಬುದನ್ನು ವಿಶ್ವಕ್ಕೆ ತೋರಿಸಿದಂತಾಗಿದೆ. ಈ ಎಲ್ಲಾ ಯಶಸ್ಸಿನ ಗುಟ್ಟು, ಈ ಹಿಂದೆ ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನೆಗೆ ನಮ್ಮ ಸರ್ಕಾರಗಳು ಹಾಗೂ ಈ ದೇಶದ ಧುರೀಣರು ನೀಡಿದ ಪ್ರಾಧ್ಯಾನ್ಯತೆಯನ್ನು ಸ್ಮರಿಸುವ ಕಾಲ ಇದಾಗಿದೆ.

ಏಪ್ರಿಲ್ ೨೮ ರಂದು ಬಾಹ್ಯಾಕಾಶ ಕಕ್ಷೆಗೆ ಸೇರಿಸಲಾದ ಕಾರ್ಟೋಸ್ಯಾಟ್-2ಎ ಉಪಗ್ರಹ ಭೂಮಿಯ ಮೇಲ್ಮೈ ವಿಸ್ತೀರ್ಣ ಹಾಗೂ ಭೂಮಿಯ ಮೇಲಿನ ವಿವಿಧ ಚಟುವಟಿಕೆಗಳನ್ನು ತಿಳಿಯಲು ಉಪಯುಕ್ತವಾಗಿದೆ ಎಂದು ತಿಳಿದುಬಂದಿದೆ. ಈ ವರೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಯೋಗಳನ್ನು ನಡೆಸಿ, ಈ ಸಂಬಂಧಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಪರಿಣಾಮ ಯಾವುದೇ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿಯೂ ಆಗದಂತಹ ಉನ್ನತ ಮಟ್ಟದ ದೂರಸಂಪರ್ಕ ಕ್ರಾಂತಿ ಭಾರತದಲ್ಲಿ ಆಗುತ್ತಿರುವುದು ಗಮನಾರ್ಹ.

ದೇಶದ ಭೌಗೋಳಿಕ ಸ್ಥಿತಿ, ಪ್ರಾಕೃತಿಕ ಸ್ಥಿತಿ ಹಾಗೂ ಹವಾಮಾನ ಕುರಿತಂತೆ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಈವರೆಗೆ ಅನೇಕ ಉಪಗ್ರಹಗಳನ್ನು ಹಾರಿಸಲಾಗಿದ್ದು ಮೊನ್ನೆ ಕಕ್ಷೆಗೆ ಸೇರಿಸಲಾದ ಉಪಗ್ರಹದಿಂದ ಇನ್ನು ಉನ್ನತವಾದ ಮಾಹಿತಿ ಪಡೆಯಬಹುದಾಗಿದೆ ಎಂಬುದು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ವಿಷಯವಾಗಿದೆ. ಅದರಲ್ಲಿಯೂ ಈ ಉಪಗ್ರಹದ ನೆರವಿನಿಂದ ಭಾರತದಲ್ಲಿನ ನದಿಗಳ ಬಗ್ಗೆ ಅವುಗಳ ಸ್ಥಿತಿಬಗ್ಗೆ ತಿಳಿಯಲು ಸಹಾಯಕವಾಗಿರುವುದು ಅತ್ಯುಪಯುಕ್ತವಾಗಿದೆ. ಆಧುನೀಕರಣದ ಭರಾಟೆಯಲ್ಲಿ, ಕೈಗಾರೀಕರಣದ ಕ್ರಾಂತಿಯ ನಡುವೆ, ಈಗಾಗಲೇ ದೇಶದಲ್ಲಿ ಅನೇಕ ನದಿಗಳು ಬತ್ತಿದ್ದು ಇದು ಮುಂದುವರೆಯುತ್ತಿರುವ ಭಾರತ ದೇಶಕ್ಕೆ ಸವಾಲಿನ ವಿಷಯವಾಗಿದೆ. ಈ ನಡುವೆ ಅಳಿವಿನ ಅಂಚಿನಲ್ಲಿರುವ ನದಿಗಳ ಬಗ್ಗೆಯೂ ಪ್ರಸ್ತುತ ಉಪಗ್ರಹದಿಂದ ಮಾಹಿತಿ ಪಡೆಯಬಗುದಾಗಿದ್ದು ಈ ಮೂಲಕ ಮುಂದಿನ ಪೀಳಿಗೆಗೆ ನಾವು ಅತ್ಯುಪಯುಕ್ತವಾದ ಕೊಡುಗೆ ನೀಡಬಹುದಾಗಿದೆ. ಆದರೆ ಪರಿಸರಿಕವಾಗಿ, ಭೌಗೋಳಿಕವಾಗಿ, ವಾತಾವರಣಕ್ಕೆ ಸಂಬಂಧಿಸಿದಂತೆ ಅತ್ಯದ್ಬುತವಾದ ಮಾಹಿತಿ ಪಡೆಯುತ್ತಿರುವ ಈ ದೇಶದಲ್ಲಿ ಮಾಹಿತಿ ಎಷ್ಟರಮಟ್ಟಿಗೆ ಈ ದೇಶದ ಜನರಿಗೆ ಹಾಗೂ ವ್ಯವಸ್ಥೆಯ ಅಭಿವೃದ್ದಿಗೆ ಸದ್ಬಳಕೆಯಾಗುತ್ತಿದೆ ಎಂಬುದು ಪ್ರಶ್ನಾರ್ಹವಾದ ವಿಷಯವಾಗಿದೆ.

ಭೌಗೋಳಿಕ ಮಾಹಿತಿ ನೀಡುವ ಸಲುವಾಗಿ ಈಗಾಗಲೇ ಅನೇಕ ಉಪಗ್ರಹಗಳನ್ನು ಉಡಾಯಿಸಲಾಗಿದ್ದು, ಅವು ಸಮರ್ಪಕವಾಗಿ ಕೆಲಸ ಮಾಡುತ್ತಿವೆ. ಅಂತರಿಕ್ಷದಿಂದ ನೇರವಾಗಿ ನಿಯಂತ್ರಣ ಕೇಂದ್ರಗಳಿಗೆ ರವಾನೆಯಾಗುತ್ತಿರುವ ವಿವಿಧ ಮಾಹಿತಿಗಳು, ಅನಾಹುತಗಳನ್ನು ತಡೆಯುವಲ್ಲಿ ಯಶಸ್ವಿಯಾಗದೇ ಇರುವುದಕ್ಕೆ, ಪರಿಣಾಮಕಾರಿಯಾದ ಮಾಹಿತಿಯ ಹರಿವು ಹಾಗೂ ದಕ್ಷ ಆಡಳಿತ ಜಾರಿ ಆಗದೇ ಇರುವುದೇ ಕಾರಣವಾಗಿದೆ. ಒಂದು ಚಿಕ್ಕ ಉದಾಹರಣೆಯ ಮೂಲಕ ವಿವರಿಸುವುದಾದರೆ, ಇಂದಿಗೂ ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಇಲ್ಲಿನ ರೈತರು ಮಳೆಯೊಂದಿಗೆ ಜೂಜಾಡುತ್ತಿದ್ದು, ಮುಂಗಾರು ಹಾಗೂ ಹಿಂಗಾರು ಮಳೆ ಕುರಿತಂತೆ ಉಪಗ್ರಹ ಸಮಗ್ರವಾದ ಮಾಹಿತಿ ನೀಡುತ್ತಿದ್ದು ಮಾಹಿತಿಗನುಗುಣವಾಗಿ ಕೃಷಿ ಪದ್ದತಿ ಯೋಜಿಸುವಲ್ಲಿ ನಮ್ಮ ವ್ಯವಸ್ಥೆ ಹಾಗೂ ಅಧಿಕಾರಿಗಳು ಸಂಪೂರ್ಣವಾಗಿ ಸೋತಿದ್ದಾರೆ. ಹೊಡೆ ಅಥವಾ ಹೂವ್ವಿನ ಕಾಲದಲ್ಲಿ ಇಡೀ ದೇಶದ ಕೃಷಿ ಸ್ಥಿತಿಯನ್ನು ಗಮನಿಸಿ, ಪ್ರಸಕ್ತ ವರ್ಷದ ಇಳುವರಿ ಅಂದಾಜು ಮಾಡುವ ತಂತ್ರಜ್ಞಾನವನ್ನು ಭಾರತ ಹೊಂದಿದೆ. ಈ ಕುರಿತಾದ ವಾರ್ಷಿಕ ವರದಿಯನ್ನು ಕಾಲಕಾಲಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಬಿಡುಗಡೆ ಮಾಡುತ್ತಲೂ ಬಂದಿದೆ. ಆದರೆ ಅದನ್ನು ವಿಶ್ಲೇಷಿಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ನಮ್ಮ ಸರ್ಕಾರ ಉತ್ತಮ ಕ್ರಮ ಕೈಗೊಂಡಿದುದೇ ಆದಲ್ಲಿ ಈಗ ಉದ್ಬವಿಸಿರುವ ಹಣದುಬ್ಬರ ಪರಿಸ್ಥಿತಿಯ ಒಂದಂಶವನ್ನಾದರೂ ನಿಯಂತ್ರಿಸಬಹುದಾಗಿತ್ತು. ಅಷ್ಟೇ ಅಲ್ಲದೇ ಯಾವುದೇ ಕೃಷಿ ಉತ್ಟನ್ನದ ಕೊರತೆ ಹಾಗೂ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಧುರೀಣರು ಅಪಹಾಸ್ಯಕ್ಕೀಡಾಗುವಂತಹ ಹೇಳಿಕೆ ನೀಡುವುದೂ ತಪ್ಪುತ್ತದೆ.

ವಾಸ್ತವವಾಗಿ ಕಳೆದ ಸಾಲಿನಲ್ಲಿ ಗೋಧಿ ಉತ್ಪಾದನೆ ಕುಂಠಿತಕ್ಕೆ ಸಂಬಂಧಿಸಿದಂಗತೆ ಭಾರತೀಯ ಕೃಷಿ ಸಚಿವಾಲಯಕ್ಕೆ ನಿಖರವಾದ ಮಾಹಿತಿ ರವಾನೆಯಾಗಿತ್ತು ಈ ಸಾಲಿನ ಗೋಧಿ ಉತ್ಪಾದನೆ ಹವಾಮಾನದ ಏರು ಪೇರಿನ ಪರಿಣಾಮದಿಂದ ಗಣನೀಯವಾಗಿ ಕುಗ್ಗಲಿದೆ ಎಂಬ ವಿಚಾರ ಸ್ಪಷ್ಟವಾಗಿ ತಿಳಿದಿದ್ದರೂ, ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುದ ಕೃಷಿ ಸಚಿವರು ಸಮಸ್ಯೆ ತಲೆದೂರಿದ ಮೇಲೆ, ಅದನ್ನು ಪರರ ಮೇಲೆ ಹೊರಿಸಲು ಮುಂದಾದುದು ಅಕ್ಷಮ್ಯ. "ದಕ್ಷಿಣ ಭಾರತೀಯರು ಗೋಧಿಯನ್ನು ಹೆಚ್ಚು ಸೇವನೆ ಮಾಡುತ್ತಿರುವುದೇ ಗೋಧಿ ಬೆಲೆ ಏರಿಕೆಗೆ ಪ್ರಮುಖ ಕಾರಣ ಈ ಮೂಲಕ ಗೋಧಿ ದಾಸ್ತಾನು ದೇಶದಲ್ಲಿ ಕಡಿಮೆಯಾಗಿದೆ". ಎಂಬ ಹಾಸ್ಯಾಸ್ಪದ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಬೆಂಬಲ ಬೆಲೆಗಿಂತಲೂ ಅಧಿಕ ಬೆಲೆ ನೀಡಿ ವಿದೇಶಗಳಿಂದ ಗೋಧಿ ಆಮದು ಮಾಡಿಕೊಂಡಿದ್ದರಿಂದ ಆರ್ಥಿಕವಾಗಿಯೂ ದೇಶಕ್ಕೆ ಬಾರಿ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.

ಭಾರತೀಯ ಬಡ ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಲು ಮೀನಾ ಮೇಷಾ ಇಣಿಸಿ, ಹತ್ತಾರು ದಿವಸ ಮುಷ್ಕರ ಹಾಗೂ ವಿವಿಧ ಪ್ರತಿಭಟನೆಗಳ ಬಿಸಿ ಮುಟ್ಟಿದ ಬಳಿಕ ಒಂದು ಗಂಭೀರ ಸಮಸ್ಯೆಗೆ ಸ್ಪಂದಿಸಲು ಮುಂದಾಗುವ ಸರ್ಕಾರ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪದಾರ್ಥಗಳಿಗೆ ದುಬಾರಿ ಬೆಲೆ ನೀಡಲು ಏಕಾ ಏಕಿ ಮುಂದಾಗುವುದು ಸರ್ಕಾರದ ಬದ್ದತೆಯ ಪ್ರಶ್ನೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ, ಆಗ್ಗಿಂದಾಗ್ಗೆ ಪರಿಸ್ಥಿತಿ ಬಗೆಗಿನ ಮುನ್ಸೂಚನೆ ನೀಡುವ ಪುಟಗಟ್ಟಲೆ ವರದಿಗಳನ್ನು ವಾರ್ತಾ ಇಲಾಖೆಗೆ ಹಾಗೂ ಈ ಮೂಲಕ ಇತರೆ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸುತ್ತಲೇ ಇರುತ್ತದೆ. ಆದರೆ ಅದರ ಹರಿವು ಹಾಗೂ ಅದರಿಂದ ಉಂಟಾಗಬಹುದಾದ ಪರಿಣಾಮ ಸೂಕ್ತವಾಗಿ ನೆರವೇರುತ್ತಿಲ್ಲ. ಮಾಹಿತಿ ತಂತ್ರಜ್ಞಾನ ಇಂದು ಮನರಂಜನೆಗೆ ಬಳಕೆಯಾದಷ್ಟು ಪ್ರಮಾಣದಲ್ಲಿ ಇತರೆ ಅಭಿವೃದ್ದಿ ಕಾರ್ಯಗಳಿಗೆ ಬಳಕೆಯಾಗದೇ ಇರುವುದು ಆತಂಕಕ್ಕೆ ಈಡುಮಾಡಿದೆ. ಭಾರತದಲ್ಲಿ ಉಂಟಾಗಿರುವ ಸಂವಹನ ಹಾಗೂ ಸಂಪರ್ಕ ಕ್ರಾಂತಿ ಈ ದೇಶದ ಬಡತನ, ಗಂಡಾಂತರ, ಸಾಮಾಜಿಕ ಸಮಸ್ಯೆಗಳನ್ನು ನೀಗುವತ್ತ ಬಳಕೆಯಾದರೆ ಮಾತ್ರ ನಮ್ಮ ಕ್ರಾಂತಿಗೆ ಅರ್ಥ ಲಭಿಸೀತು. ಕ್ರಾಂತಿ ಅಭಿವೃದ್ದಿಗೆ ಬಳಕೆಯಾಗದೆ ಕೇವಲ ಇತರೆ ರಾಷ್ಟ್ರಗಳ ನಡುವೆ ನಮ್ಮ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳಲು ಮಾತ್ರ ಸೀಮಿತವಾಗದಿರಲಿ.

ಲಭ್ಯ ಮಾಹಿತಿಯನ್ನು ಸರಿಯಾಗಿ ವಿಶ್ಲೇಷಿಸದೆ, ಪರಿಸ್ಥಿತಿಗೆ ತಕ್ಕಂತೆ ಸೂಕ್ತ ಕ್ರಮ ಕೈಗೊಳ್ಳದೆ ದೇಶಕ್ಕೆ ಸಾಕಷ್ಟು ಹಾನಿ ಸಂಭವಿಸುತ್ತಿರುವುದು ಮುಂದುವರೆಯುತ್ತಿರುವ ಭಾರತಕ್ಕೆ ಕಂಟಕವಾಗಿ ಪರಿಣಮಿಸಿದೆ. ಪ್ರಯೋಗ, ಸಂಶೋಧನೆ, ಉಪಗ್ರಹಗಳ ಉಡಾವಣೆ ಹಾಗೂ ಮಾಹಿತಿ ರವಾನೆಗೆ ಸಂಬಂಧಿಸಿದಂತೆ ಲಕ್ಷಾಂತರ ಕೋಟಿ ರೂಪಾಯಿ ಸಾರ್ವಜನಿಕ ಹಣ ವಿನಿಯೋಗವಾಗುತ್ತಿದೆ. ಸಮಸ್ಯೆ ಬಗೆಹರಿಯುವ ನಿಟ್ಟಿನಲ್ಲಿ ಮಾಹಿತಿ ಬಳಕೆಯಾಗಬೇಕು, ಇಲ್ಲವಾದರೆ ನಮ್ಮ ಹಣ, ಸಂಶೋಧನೆ ಹಾಗೂ ಶ್ರಮಕ್ಕೆ ಬೆಲೆ ಇಲ್ಲದಂತಾಗುತ್ತದೆ. ಇನ್ನು ಮುಂದಾದರೂ ಮಾಹಿತಿ ಆಧರಿಸಿ ಸೂಕ್ತ ಹಾಗೂ ಉಪಯುಕ್ತ ಕ್ರಮಗಳನ್ನು ಕೈಗೊಳ್ಳುವತ್ತ ನಮ್ಮ ಸರ್ಕಾರ ಜಾಗೃತವಾಗಬೇಕು.

ಮಧುಸೂದನ್.ವಿ