Thursday, May 29, 2008

ವೈಜ್ಞಾನಿಕ ಕ್ರಾಂತಿ ಅಭಿವೃದ್ದಿಯ ಮೂಲ ಮಂತ್ರವಾಗಲಿ




ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಭಾರತದಲ್ಲಿ ಉನ್ನತ ಸಂಶೋಧನೆಗಳು ಹಾಗೂ ಪ್ರಯೋಗಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಹಾಗೂ ಸ್ವಾಗತಾರ್ಹ. ಈಚೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ಮಿತ ಧ್ರುವಗಾಮಿ ಕ್ಷಿಪಣಿ ( ಪಿಎಸ್ ಎಲ್ ವಿ-ಸಿ೯) ಏಕಕಾಲದಲ್ಲಿ ಹತ್ತು ಉಪಗ್ರಹಗಳನ್ನು ಯಶಸ್ವಿಯಾಗಿ ಉಡ್ಡಾಯನ ಮಾಡಿ ಅವುಗಳನ್ನು ಕಕ್ಷೆಗೆ ಸೇರಿಸುವ ಮೂಲಕ ವಿಶ್ವದ ಗಮನ ಸೆಳೆದಿದೆ. ಈ ಮೂಲಕ ಭಾರತದಲ್ಲಿ ಬಾಹ್ಯಾಕಾಶ ಸಂಶೋಧನೆ ಲವಲವಿಕೆಯಿಂದ ಕೂಡಿದ್ದು ಮುಂದುವರೆದ ದೇಶಗಳ ಸಂಶೋಧನೆ ಹಾಗೂ ಸಾಧನೆಯ ಮಟ್ಟದಲ್ಲಿಯೇ ಮುಂದುವರೆಯುತ್ತಿದೆ ಎಂಬುದನ್ನು ವಿಶ್ವಕ್ಕೆ ತೋರಿಸಿದಂತಾಗಿದೆ. ಈ ಎಲ್ಲಾ ಯಶಸ್ಸಿನ ಗುಟ್ಟು, ಈ ಹಿಂದೆ ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನೆಗೆ ನಮ್ಮ ಸರ್ಕಾರಗಳು ಹಾಗೂ ಈ ದೇಶದ ಧುರೀಣರು ನೀಡಿದ ಪ್ರಾಧ್ಯಾನ್ಯತೆಯನ್ನು ಸ್ಮರಿಸುವ ಕಾಲ ಇದಾಗಿದೆ.

ಏಪ್ರಿಲ್ ೨೮ ರಂದು ಬಾಹ್ಯಾಕಾಶ ಕಕ್ಷೆಗೆ ಸೇರಿಸಲಾದ ಕಾರ್ಟೋಸ್ಯಾಟ್-2ಎ ಉಪಗ್ರಹ ಭೂಮಿಯ ಮೇಲ್ಮೈ ವಿಸ್ತೀರ್ಣ ಹಾಗೂ ಭೂಮಿಯ ಮೇಲಿನ ವಿವಿಧ ಚಟುವಟಿಕೆಗಳನ್ನು ತಿಳಿಯಲು ಉಪಯುಕ್ತವಾಗಿದೆ ಎಂದು ತಿಳಿದುಬಂದಿದೆ. ಈ ವರೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಯೋಗಳನ್ನು ನಡೆಸಿ, ಈ ಸಂಬಂಧಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಪರಿಣಾಮ ಯಾವುದೇ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿಯೂ ಆಗದಂತಹ ಉನ್ನತ ಮಟ್ಟದ ದೂರಸಂಪರ್ಕ ಕ್ರಾಂತಿ ಭಾರತದಲ್ಲಿ ಆಗುತ್ತಿರುವುದು ಗಮನಾರ್ಹ.

ದೇಶದ ಭೌಗೋಳಿಕ ಸ್ಥಿತಿ, ಪ್ರಾಕೃತಿಕ ಸ್ಥಿತಿ ಹಾಗೂ ಹವಾಮಾನ ಕುರಿತಂತೆ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಈವರೆಗೆ ಅನೇಕ ಉಪಗ್ರಹಗಳನ್ನು ಹಾರಿಸಲಾಗಿದ್ದು ಮೊನ್ನೆ ಕಕ್ಷೆಗೆ ಸೇರಿಸಲಾದ ಉಪಗ್ರಹದಿಂದ ಇನ್ನು ಉನ್ನತವಾದ ಮಾಹಿತಿ ಪಡೆಯಬಹುದಾಗಿದೆ ಎಂಬುದು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ವಿಷಯವಾಗಿದೆ. ಅದರಲ್ಲಿಯೂ ಈ ಉಪಗ್ರಹದ ನೆರವಿನಿಂದ ಭಾರತದಲ್ಲಿನ ನದಿಗಳ ಬಗ್ಗೆ ಅವುಗಳ ಸ್ಥಿತಿಬಗ್ಗೆ ತಿಳಿಯಲು ಸಹಾಯಕವಾಗಿರುವುದು ಅತ್ಯುಪಯುಕ್ತವಾಗಿದೆ. ಆಧುನೀಕರಣದ ಭರಾಟೆಯಲ್ಲಿ, ಕೈಗಾರೀಕರಣದ ಕ್ರಾಂತಿಯ ನಡುವೆ, ಈಗಾಗಲೇ ದೇಶದಲ್ಲಿ ಅನೇಕ ನದಿಗಳು ಬತ್ತಿದ್ದು ಇದು ಮುಂದುವರೆಯುತ್ತಿರುವ ಭಾರತ ದೇಶಕ್ಕೆ ಸವಾಲಿನ ವಿಷಯವಾಗಿದೆ. ಈ ನಡುವೆ ಅಳಿವಿನ ಅಂಚಿನಲ್ಲಿರುವ ನದಿಗಳ ಬಗ್ಗೆಯೂ ಪ್ರಸ್ತುತ ಉಪಗ್ರಹದಿಂದ ಮಾಹಿತಿ ಪಡೆಯಬಗುದಾಗಿದ್ದು ಈ ಮೂಲಕ ಮುಂದಿನ ಪೀಳಿಗೆಗೆ ನಾವು ಅತ್ಯುಪಯುಕ್ತವಾದ ಕೊಡುಗೆ ನೀಡಬಹುದಾಗಿದೆ. ಆದರೆ ಪರಿಸರಿಕವಾಗಿ, ಭೌಗೋಳಿಕವಾಗಿ, ವಾತಾವರಣಕ್ಕೆ ಸಂಬಂಧಿಸಿದಂತೆ ಅತ್ಯದ್ಬುತವಾದ ಮಾಹಿತಿ ಪಡೆಯುತ್ತಿರುವ ಈ ದೇಶದಲ್ಲಿ ಮಾಹಿತಿ ಎಷ್ಟರಮಟ್ಟಿಗೆ ಈ ದೇಶದ ಜನರಿಗೆ ಹಾಗೂ ವ್ಯವಸ್ಥೆಯ ಅಭಿವೃದ್ದಿಗೆ ಸದ್ಬಳಕೆಯಾಗುತ್ತಿದೆ ಎಂಬುದು ಪ್ರಶ್ನಾರ್ಹವಾದ ವಿಷಯವಾಗಿದೆ.

ಭೌಗೋಳಿಕ ಮಾಹಿತಿ ನೀಡುವ ಸಲುವಾಗಿ ಈಗಾಗಲೇ ಅನೇಕ ಉಪಗ್ರಹಗಳನ್ನು ಉಡಾಯಿಸಲಾಗಿದ್ದು, ಅವು ಸಮರ್ಪಕವಾಗಿ ಕೆಲಸ ಮಾಡುತ್ತಿವೆ. ಅಂತರಿಕ್ಷದಿಂದ ನೇರವಾಗಿ ನಿಯಂತ್ರಣ ಕೇಂದ್ರಗಳಿಗೆ ರವಾನೆಯಾಗುತ್ತಿರುವ ವಿವಿಧ ಮಾಹಿತಿಗಳು, ಅನಾಹುತಗಳನ್ನು ತಡೆಯುವಲ್ಲಿ ಯಶಸ್ವಿಯಾಗದೇ ಇರುವುದಕ್ಕೆ, ಪರಿಣಾಮಕಾರಿಯಾದ ಮಾಹಿತಿಯ ಹರಿವು ಹಾಗೂ ದಕ್ಷ ಆಡಳಿತ ಜಾರಿ ಆಗದೇ ಇರುವುದೇ ಕಾರಣವಾಗಿದೆ. ಒಂದು ಚಿಕ್ಕ ಉದಾಹರಣೆಯ ಮೂಲಕ ವಿವರಿಸುವುದಾದರೆ, ಇಂದಿಗೂ ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಇಲ್ಲಿನ ರೈತರು ಮಳೆಯೊಂದಿಗೆ ಜೂಜಾಡುತ್ತಿದ್ದು, ಮುಂಗಾರು ಹಾಗೂ ಹಿಂಗಾರು ಮಳೆ ಕುರಿತಂತೆ ಉಪಗ್ರಹ ಸಮಗ್ರವಾದ ಮಾಹಿತಿ ನೀಡುತ್ತಿದ್ದು ಮಾಹಿತಿಗನುಗುಣವಾಗಿ ಕೃಷಿ ಪದ್ದತಿ ಯೋಜಿಸುವಲ್ಲಿ ನಮ್ಮ ವ್ಯವಸ್ಥೆ ಹಾಗೂ ಅಧಿಕಾರಿಗಳು ಸಂಪೂರ್ಣವಾಗಿ ಸೋತಿದ್ದಾರೆ. ಹೊಡೆ ಅಥವಾ ಹೂವ್ವಿನ ಕಾಲದಲ್ಲಿ ಇಡೀ ದೇಶದ ಕೃಷಿ ಸ್ಥಿತಿಯನ್ನು ಗಮನಿಸಿ, ಪ್ರಸಕ್ತ ವರ್ಷದ ಇಳುವರಿ ಅಂದಾಜು ಮಾಡುವ ತಂತ್ರಜ್ಞಾನವನ್ನು ಭಾರತ ಹೊಂದಿದೆ. ಈ ಕುರಿತಾದ ವಾರ್ಷಿಕ ವರದಿಯನ್ನು ಕಾಲಕಾಲಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಬಿಡುಗಡೆ ಮಾಡುತ್ತಲೂ ಬಂದಿದೆ. ಆದರೆ ಅದನ್ನು ವಿಶ್ಲೇಷಿಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ನಮ್ಮ ಸರ್ಕಾರ ಉತ್ತಮ ಕ್ರಮ ಕೈಗೊಂಡಿದುದೇ ಆದಲ್ಲಿ ಈಗ ಉದ್ಬವಿಸಿರುವ ಹಣದುಬ್ಬರ ಪರಿಸ್ಥಿತಿಯ ಒಂದಂಶವನ್ನಾದರೂ ನಿಯಂತ್ರಿಸಬಹುದಾಗಿತ್ತು. ಅಷ್ಟೇ ಅಲ್ಲದೇ ಯಾವುದೇ ಕೃಷಿ ಉತ್ಟನ್ನದ ಕೊರತೆ ಹಾಗೂ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಧುರೀಣರು ಅಪಹಾಸ್ಯಕ್ಕೀಡಾಗುವಂತಹ ಹೇಳಿಕೆ ನೀಡುವುದೂ ತಪ್ಪುತ್ತದೆ.

ವಾಸ್ತವವಾಗಿ ಕಳೆದ ಸಾಲಿನಲ್ಲಿ ಗೋಧಿ ಉತ್ಪಾದನೆ ಕುಂಠಿತಕ್ಕೆ ಸಂಬಂಧಿಸಿದಂಗತೆ ಭಾರತೀಯ ಕೃಷಿ ಸಚಿವಾಲಯಕ್ಕೆ ನಿಖರವಾದ ಮಾಹಿತಿ ರವಾನೆಯಾಗಿತ್ತು ಈ ಸಾಲಿನ ಗೋಧಿ ಉತ್ಪಾದನೆ ಹವಾಮಾನದ ಏರು ಪೇರಿನ ಪರಿಣಾಮದಿಂದ ಗಣನೀಯವಾಗಿ ಕುಗ್ಗಲಿದೆ ಎಂಬ ವಿಚಾರ ಸ್ಪಷ್ಟವಾಗಿ ತಿಳಿದಿದ್ದರೂ, ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುದ ಕೃಷಿ ಸಚಿವರು ಸಮಸ್ಯೆ ತಲೆದೂರಿದ ಮೇಲೆ, ಅದನ್ನು ಪರರ ಮೇಲೆ ಹೊರಿಸಲು ಮುಂದಾದುದು ಅಕ್ಷಮ್ಯ. "ದಕ್ಷಿಣ ಭಾರತೀಯರು ಗೋಧಿಯನ್ನು ಹೆಚ್ಚು ಸೇವನೆ ಮಾಡುತ್ತಿರುವುದೇ ಗೋಧಿ ಬೆಲೆ ಏರಿಕೆಗೆ ಪ್ರಮುಖ ಕಾರಣ ಈ ಮೂಲಕ ಗೋಧಿ ದಾಸ್ತಾನು ದೇಶದಲ್ಲಿ ಕಡಿಮೆಯಾಗಿದೆ". ಎಂಬ ಹಾಸ್ಯಾಸ್ಪದ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಬೆಂಬಲ ಬೆಲೆಗಿಂತಲೂ ಅಧಿಕ ಬೆಲೆ ನೀಡಿ ವಿದೇಶಗಳಿಂದ ಗೋಧಿ ಆಮದು ಮಾಡಿಕೊಂಡಿದ್ದರಿಂದ ಆರ್ಥಿಕವಾಗಿಯೂ ದೇಶಕ್ಕೆ ಬಾರಿ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.

ಭಾರತೀಯ ಬಡ ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಲು ಮೀನಾ ಮೇಷಾ ಇಣಿಸಿ, ಹತ್ತಾರು ದಿವಸ ಮುಷ್ಕರ ಹಾಗೂ ವಿವಿಧ ಪ್ರತಿಭಟನೆಗಳ ಬಿಸಿ ಮುಟ್ಟಿದ ಬಳಿಕ ಒಂದು ಗಂಭೀರ ಸಮಸ್ಯೆಗೆ ಸ್ಪಂದಿಸಲು ಮುಂದಾಗುವ ಸರ್ಕಾರ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪದಾರ್ಥಗಳಿಗೆ ದುಬಾರಿ ಬೆಲೆ ನೀಡಲು ಏಕಾ ಏಕಿ ಮುಂದಾಗುವುದು ಸರ್ಕಾರದ ಬದ್ದತೆಯ ಪ್ರಶ್ನೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ, ಆಗ್ಗಿಂದಾಗ್ಗೆ ಪರಿಸ್ಥಿತಿ ಬಗೆಗಿನ ಮುನ್ಸೂಚನೆ ನೀಡುವ ಪುಟಗಟ್ಟಲೆ ವರದಿಗಳನ್ನು ವಾರ್ತಾ ಇಲಾಖೆಗೆ ಹಾಗೂ ಈ ಮೂಲಕ ಇತರೆ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸುತ್ತಲೇ ಇರುತ್ತದೆ. ಆದರೆ ಅದರ ಹರಿವು ಹಾಗೂ ಅದರಿಂದ ಉಂಟಾಗಬಹುದಾದ ಪರಿಣಾಮ ಸೂಕ್ತವಾಗಿ ನೆರವೇರುತ್ತಿಲ್ಲ. ಮಾಹಿತಿ ತಂತ್ರಜ್ಞಾನ ಇಂದು ಮನರಂಜನೆಗೆ ಬಳಕೆಯಾದಷ್ಟು ಪ್ರಮಾಣದಲ್ಲಿ ಇತರೆ ಅಭಿವೃದ್ದಿ ಕಾರ್ಯಗಳಿಗೆ ಬಳಕೆಯಾಗದೇ ಇರುವುದು ಆತಂಕಕ್ಕೆ ಈಡುಮಾಡಿದೆ. ಭಾರತದಲ್ಲಿ ಉಂಟಾಗಿರುವ ಸಂವಹನ ಹಾಗೂ ಸಂಪರ್ಕ ಕ್ರಾಂತಿ ಈ ದೇಶದ ಬಡತನ, ಗಂಡಾಂತರ, ಸಾಮಾಜಿಕ ಸಮಸ್ಯೆಗಳನ್ನು ನೀಗುವತ್ತ ಬಳಕೆಯಾದರೆ ಮಾತ್ರ ನಮ್ಮ ಕ್ರಾಂತಿಗೆ ಅರ್ಥ ಲಭಿಸೀತು. ಕ್ರಾಂತಿ ಅಭಿವೃದ್ದಿಗೆ ಬಳಕೆಯಾಗದೆ ಕೇವಲ ಇತರೆ ರಾಷ್ಟ್ರಗಳ ನಡುವೆ ನಮ್ಮ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳಲು ಮಾತ್ರ ಸೀಮಿತವಾಗದಿರಲಿ.

ಲಭ್ಯ ಮಾಹಿತಿಯನ್ನು ಸರಿಯಾಗಿ ವಿಶ್ಲೇಷಿಸದೆ, ಪರಿಸ್ಥಿತಿಗೆ ತಕ್ಕಂತೆ ಸೂಕ್ತ ಕ್ರಮ ಕೈಗೊಳ್ಳದೆ ದೇಶಕ್ಕೆ ಸಾಕಷ್ಟು ಹಾನಿ ಸಂಭವಿಸುತ್ತಿರುವುದು ಮುಂದುವರೆಯುತ್ತಿರುವ ಭಾರತಕ್ಕೆ ಕಂಟಕವಾಗಿ ಪರಿಣಮಿಸಿದೆ. ಪ್ರಯೋಗ, ಸಂಶೋಧನೆ, ಉಪಗ್ರಹಗಳ ಉಡಾವಣೆ ಹಾಗೂ ಮಾಹಿತಿ ರವಾನೆಗೆ ಸಂಬಂಧಿಸಿದಂತೆ ಲಕ್ಷಾಂತರ ಕೋಟಿ ರೂಪಾಯಿ ಸಾರ್ವಜನಿಕ ಹಣ ವಿನಿಯೋಗವಾಗುತ್ತಿದೆ. ಸಮಸ್ಯೆ ಬಗೆಹರಿಯುವ ನಿಟ್ಟಿನಲ್ಲಿ ಮಾಹಿತಿ ಬಳಕೆಯಾಗಬೇಕು, ಇಲ್ಲವಾದರೆ ನಮ್ಮ ಹಣ, ಸಂಶೋಧನೆ ಹಾಗೂ ಶ್ರಮಕ್ಕೆ ಬೆಲೆ ಇಲ್ಲದಂತಾಗುತ್ತದೆ. ಇನ್ನು ಮುಂದಾದರೂ ಮಾಹಿತಿ ಆಧರಿಸಿ ಸೂಕ್ತ ಹಾಗೂ ಉಪಯುಕ್ತ ಕ್ರಮಗಳನ್ನು ಕೈಗೊಳ್ಳುವತ್ತ ನಮ್ಮ ಸರ್ಕಾರ ಜಾಗೃತವಾಗಬೇಕು.

ಮಧುಸೂದನ್.ವಿ

2 comments:

mandarin said...

Thumba Chenagide! keep it up!

Arkalgud Madhusudhan said...

ಧನ್ಯವಾದಗಳು..,

ವಿಶ್ವಾಸ ಪೂರ್ವಕವಾಗಿ
ಮಧುಸೂದನ್.ವಿ