Wednesday, August 20, 2008

ತುಂಗಾ ತೀರದಲ್ಲೊಂದು ದಿನ




ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ ತುಂಗಾ ನದಿಯ ಬಗ್ಗೆ ಚಿಕ್ಕಂದಿನಿಂದಲೂ ಬಹಳವಾಗಿಯೇ ಕೇಳಿದ್ದೆ ಹಾಗೂ ಓದಿದ್ದೆ. ಆದರೆ ಅದನ್ನು ಕಣ್ಣಾರೆ ಕಾಣುವ ಭಾಗ್ಯ ಸಿಕ್ಕಿದ್ದು ಚಿಕ್ಕಮಗಳೂರಿನ ಮಹೇಶಣ್ಣ ನವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ. ಏಪ್ರಿಲ್ ಒಂಬತ್ತು ಶ್ರೀ ಹಾಗೂ ಶ್ರೀಮತಿ ರೂಪಾ ಮಹೇಶ್ ಅವರ ಏಕೈಕ ಮಗಳು ಸನ್ಮಿತಾಳ ಹುಟ್ಟಿದ ದಿನ. ಅಂದು ನನ್ನ ಹುಟ್ಟಿದ ದಿನವೂ ಸಹ ಹೌದು. ಇದೇ ಮೊದಲ ಬಾರಿಗೆ ನನ್ನ ಹುಟ್ಟು ಹಬ್ಬದ ದಿನ ನಾನು ನನ್ನ ಆತ್ಮೀಯರೊಂದಿಗೆ ಕಾಲ ಕಳೆಯುವ ಅವಕಾಶ ಸಿಕ್ಕಿದ್ದು ಬಹಳ ಸಂತೋಷ ಉಂಟುಮಾಡಿತ್ತು. ಬಹಳ ದಿವಸಗಳ ನಂತರ ಎಲ್ಲರೂ ಒಂದೆಡೆ ಅದರಲ್ಲಿಯೂ ಬೆರಣಗೋಡಿನ ಮನೆಯಲ್ಲಿ ಸೇರುವ ಅವಕಾಶ ಯೋಗವೇ ಸರಿ. ಸನ್ಮಿತಾಳಿಗೆ ಇದು ಮೊದಲ ಹುಟ್ಟು ಹಬ್ಬವಾದ್ದರಿಂದ ಕಾರ್ಯಕ್ರಮ ಅದ್ದೂರಿಯಾಗಿಯೇ ಇತ್ತು. ಯಾವುದೇ ಕಾರ್ಯಕ್ರಮಗಳು ಒಂದೇ ದಿವಸ ಆದರೂ ಸಹ ಬೆರಣಗೋಡಿಗೆ ಬಂದವರಾರೂ ಒಂದೇ ದಿನದಲ್ಲಿ ಅಲ್ಲಿಂದ ಹೋಗುವುದಿಲ್ಲ. ಅಂತಹ ವಾತಾವರಣ, ಪ್ರಕೃತಿ ಸೌಂದರ್ಯ ಹಾಗೂ ಹೊಂದಿಕೊಂಡು ಮನಸ್ಸಂತೋಷ ಉಂಟುಮಾಡುವಂತಹ ಮನಸ್ಸುಗಳು ಅಲ್ಲಿವೆ.


ಮಾರನೆಯ ದಿವಸ ಬೆಳ್ಳಗ್ಗಿನಿಂದ ಸಂಜೆಯ ವರೆಗೂ ಹೇಗೆ ಕಾಲ ಕಳೆದೆವು ಎಂಬ ವಿಚಾರ ಯಾರೊಬ್ಬರಿಗೂ ಅರಿವಾಗಲೇ ಇಲ್ಲ. ಸಮಯದ ಅರಿವಾಗುವ ಹೊತ್ತಿಗೆ ಸಂಜೆ ನಾಲ್ಕು ಘಂಟೆಯಾಗಿತ್ತು. ಎಲ್ಲಾದರೊಂದೆಡೆಗೆ ಹೋಗಬೇಕು ಅಂದುಕೊಂಡ ಮನಸ್ಸುಗಳಿಗೆ ಮಹೇಶಣ್ಣ ನೀಡಿದ ಸಲಹೆ "ಕುದುರೆ ಅಬ್ಬಿ" ಇದು ತುಂಗಾ ನದಿಯ ತೀರದಲ್ಲಿರುವ ಒಂದು ಅಜ್ಞಾತ ಸ್ಥಳ, ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರೇಕ್ಷಣಾ ಅಥವಾ ಪ್ರವಾಸಿ ಸ್ಥಳ ಎಂದು ಗುರುತಿಸದೇ ಇದ್ದರೂ ಸಹ ಪ್ರಾಕೃತಿಕವಾಗಿ ತನ್ನದೇ ಆದಂತಹ ವೈವಿಧ್ಯತೆ ಹಾಗೂ ಆಕರ್ಷಣೆ ಹೊಂದಿರುವ ಸ್ಥಳ ಇದು.
ಬೆರಣಗೋಡಿನಿಂದ ಸುಮಾರು ಒಂದು ತಾಸು ಪ್ರಯಾಣವಾಗುತ್ತದೆ. ನಾವು ಅಲ್ಲಿಗೆ ತಲುಪುವ ವೇಳೆಗಾಗಲೇ ಸಂಜೆ ಐದು ಘಂಟೆಯಾಗಿತ್ತು. ಅಲ್ಲಿಗೆ ಹೋದ ಮೇಲೆಯೇ ಅಲ್ಲಿನ ವೈವಿದ್ಯತೆ ಹಾಗೂ ಆಕರ್ಷಣೆ ಏನು ಎಂಬುದು ಗೊತ್ತಾಗಿದ್ದು, ತುಂಗಾ ನದಿಯ ಆ ಸ್ಥಳದಲ್ಲಿ ದೊಡ್ಡ ದೊಡ್ಡ ಬಂಡೆಗಳಿವೆ ಅದೆಂತದೋ ವಿಶೇಷವಾದ ಕಲ್ಲಿನ ಜಾತಿ ಎಂದು ನನಗನಿಸಿತು. ನದಿಯ ಎರಡೂ ತೀರದಲ್ಲಿಯೂ ಸಹ ಮರಳುಗಾಡನ್ನು ನೆನಪಿಸುವಂತಹ ಮರಳಿನ ರಾಶಿ ಇದೆ. ಮರಳು ಕೋರರ ಕಣ್ಣಿಗೆ ಈ ಮರಳು ಕಂಡಿಲ್ಲವೇನೋ ಎಂದೆನಿಸಿತು. ಆ ಮರಳಿನ ರಾಶಿಯನ್ನು ಕಂಡೊಡನೆ ಬಾಲ್ಯದ ದಿವಸಗಳು ನೆನಪಾದವು.
ಈ ಸ್ಥಳದಲ್ಲಿರುವ ಬಂಡೆಗಳು ಅದೆಷ್ಟು ಸಾವಿರ ವರ್ಷಗಳಿಂದ ತುಂಗಾನದಿಯ ನೀರಿಗೆ ಬೆನ್ನು ಕೊಟ್ಟು ನಿಂತಿವೆಯೋ ಗೊತ್ತಿಲ್ಲ, ಆ ನೀರೂ ಸಹ ಅದೆಷ್ಟು ವರ್ಷಗಳಿಂದ ಈ ಬಂಡೆಗಳಿಗೆ ಮುತ್ತಿಟ್ಟು ಸಾಗುತ್ತಿವೆಯೋ ಅದನ್ನು ಸಹ ಸಂಶೋಧನೆಯ ಮೂಲಕವೇ ಖಾತ್ರಿ ಪಡಿಸಿಕೊಳ್ಳಬೇಕು.

ಸಾವಿರಾರು ವರ್ಷಗಳಿಂದ ನೀರಿನ ರಭಸಕ್ಕೆ ಮೈಯೊಡ್ಡಿರುವ ಈ ಬಂಡೆಗಳಿಗೆ ನೀರು ಒಂದು ರೂಪವನ್ನೇ ನೀಡಿದೆ. ಕ್ಷಮಿಸಿ ಅದು ಒಂದು ರೂಪವಲ್ಲ ನೂರಾರು, ಸಾವಿರಾರು ಎಂದರೆ ತಪ್ಪಾಗಲಾರದು. ಹರಿವ ನೀರಿಗೆ ಮೈಚೆಲ್ಲಿ ಕುಳಿತ ಬಂಡೆಗಳು ವರ್ಣಿಸಲಸಾದ್ಯವಾದ ರೀತಿಯ ರೂಪಗಳನ್ನು ಪಡೆದುಕೊಂಡಿವೆ. ಚಿತ್ರಕಲಾವಿದರು ರಚಿಸುವ ಚಿತ್ರಗಳಿಗೆ ಈ ಪ್ರಾಕೃತಿಕ ಶಿಲ್ಪಕಲೆಗಳೇ ಸ್ಪೂರ್ತಿದಾಯಕವೇನೋ ಎಂದೆನಿಸುತ್ತದೆ. ಒಂದೊಂದೆಡೆ ಬಂಡೆ ಕಲ್ಲುಗಳೇ ಕೊಳವೆಯ ರೂಪದಲ್ಲಿ ಕೊರೆದು ಹೋಗಿದ್ದು ಆ ನವಿರತೆ ಹಾಗೂ ಅಚ್ಚುಕಟ್ಟು ಎಂತಹ ಕಲಾವಿದನನ್ನು ನಾಚಿಸುವಂತಿದೆ. ಇನ್ನು ಕೆಲವು ಬಂಡೆಗಳ ತುದಿಯಲ್ಲಿ ಹಳ್ಳ ಉಂಟಾಗಿದ್ದು ತೊಟ್ಟಿಯಂತಹ ರೂಪ ಪಡೆದುಕೊಂಡಿವೆ. ಅಂತಹ ಬಂಡೆಗಳೇ ಆ ತುಂಗೆಗೆ ಮನಸೋತು ತನ್ನ ತನ್ನವನ್ನು ಕಳೆದುಕೊಂಡಿರುವಾಗ ಇನ್ನು ಸಣ್ಣ ಪುಟ್ಟ ಕಲ್ಲುಗಳ ಕಥೆಯೇನಾಗಿರಬೇಕು? ಆ ಕಥೆಯ ಸಾರಾಂಶವನ್ನು ಹೇಳದೇ ಇದ್ದರೆ ಈ ಬರಹ ಪೂರ್ಣವಾಗುವುದಿಲ್ಲ. ಏಕೆಂದರೆ ಆ ಸಣ್ಣ ಸಣ್ಣ ಶಿಲಾ ರೂಪಗಳ ಪರಿಶೀಲನೆ , ಅವುಗಳ ಅಂದ ಸ್ವಾದನೆ ಹಾಗೂ ಅವುಗಳ ರೂಪ ನಿರ್ಧಾರ ಮಾಡುವುದರಲ್ಲಿಯೇ ನಮ್ಮ ಹಲವು ಹೊತ್ತು ವ್ಯಯವಾಗಿದ್ದು. ಗುಂಡುಕಲ್ಲು, ಶಿವಲಿಂಗ, ಬೀಸು ಕಲ್ಲು, ಚಕ್ರಾಕಾರ, ಚಪ್ಪಟೆ ಆಕಾರ, ಇಲಿ ರೂಪ, ಎಲೆ ರೂಪ ಹೀಗೆ ಈ ಪ್ರಕೃತಿಯಲ್ಲಿರುವ ಹಲವು ವಸ್ತುಗಳ ಪ್ರಾಣಿಗಳ ವಿವಿಧ ರೂಪಗಳನ್ನು ಪಡೆದುಕೊಂಡಿರುವ ಶಿಲ್ಪಗಳು ಎಂತಹವರನ್ನು ಆಕರ್ಷಿಸುತ್ತವೆ. ಬರಿಗೈನಲ್ಲಿ ಅಲ್ಲಿಗೆ ಹೋದ ನಾವು ನಮ್ಮ ಬ್ಯಾಗುಗಳು, ಜೇಬುಗಳು ಹಾಗೂ ಜೇಬಿಲ್ಲದವರು ಪಂಚೆ, ವೇಲ್ ಗಳಲ್ಲಿಯೂ ಸಹ ಕಲ್ಲು, ಕಲ್ಲುಗಳನ್ನೇ ತುಂಬಿಕೊಂಡು ಬಂದೆವು. ವಿವಿಧ ರೂಪದ ವಿಭಿನ್ನ ಕಲ್ಲುಗಳಿಗಾಗಿ ಕಿತ್ತಾಟವೂ ನಡೆಯಿತು ಮನೆ ತಲುಪಿದಾಗ ಕಲ್ಲುಗಳನ್ನು ಯಾರಿಗೂ ಕಾಣದ ಗೌಪ್ಯ ಸ್ಥಳಗಳಲ್ಲಿ ಇಡಲು ಪ್ರಯತ್ನಿಸಿದ ಪ್ರಸಂಗವೂ ನಡೆಯಿತು ಎಂದರೆ ಅವುಗಳು ಎಷ್ಟು ಮುದ್ದಾಗಿರಬಹುದು ಎಂಬುದನ್ನು ಯಾರಾದರೂ ಊಹಿಸಿಕೊಳ್ಳಬಹುದು.

ಅನೇಕ ದಿವಸಗಳಿಂದ "ಎಲ್ಲಿಹೋದವು ಆ ನನ್ನ ದಿನಗಳು ಬಾಲ್ಯದಲ್ಲಿ ಕಳೆದ ಬಂಗಾರದ ಕ್ಷಣಗಳು " ಎಂಬ ಪ್ರಶ್ನೆ ನನ್ನನ್ನು ಬಹಳ ದಿವಸಗಳಿಂದ ಕಾಡುತ್ತಲೇ ಇತ್ತು. ಅದನ್ನು ಮರೆಸುವಂತಹ ಒಂದು ಅಚ್ಚರಿ ಮೂಡಿಸಿದವರು ಮಹೇಶಣ್ಣ, ಹೇಗೂ ಅಪರೂಪದ ಮರಳ ರಾಶಿ ದೊರೆತಿದೆ ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳಲು ಸೂಕ್ತವಾದ ಅಂಗಳ ಇದು ಎಂದ ಅವರು ಮಾತು ಮಾತನಾಡುತ್ತಲೇ ಜೋಟ್ ಹೇಳಿ ಮರಳಿಗಿಳಿದೇ ಬಿಟ್ಟರು ಅದನ್ನೇ ಕಾಯುತ್ತಿದ್ದ ವನಶ್ರೀ ಹಾಗೂ ಇತರರು ಅಂಗಳಕ್ಕಿಳಿದರು. ವಯಸ್ಸಿನ್ನ ಭೇದ ಮರೆತ ಎಲ್ಲರೂ ಮರಳಿಗಿಳಿದರು ಜೂಟಾಟ, ಕಳ್ಳ ಪೋಲಿಸ್, ಕೆರೆ ದಡ, ಕಲ್ಲು ಮಣ್ಣು, ಚೈನಾಟ ಹೀಗೆ ಬಾಲ್ಯದಲ್ಲಿ ಆಡುತ್ತಿದ್ದ ಯಾವ ಯಾವ ಆಟಗಳು ನೆನಪಾಗುತ್ತವೆಯೋ ಅವೆಲ್ಲವನ್ನು ಆಡಿದೆವು ಆದರೆ ಧಣಿವಾಗಲೇ ಇಲ್ಲ, ದಿನವಿಡೀ ಉರಿದು ಧಣಿದ ಸೂರ್ಯ ಮೋಡದಿಂದ ಜಾರುವವರೆಗೂ ನಮ್ಮ ಮನಸು ಮೈಗಳಿಗೆ ಧಣಿವಾಗಲೇ ಇಲ್ಲ. ನಮ್ಮೊಂದಿಗೆ ಬಂದಿದ್ದ ಪುಟಾಣಿಗಳು ಮೀನುಗಳನ್ನು ಹಿಡಿದರು ನೀರು ಕೊಂಡೊಯ್ದಿದ್ದ ಬಾಟಲಿಗಳಲ್ಲಿ ಸ್ವತಂತ್ರವಾಗಿದ್ದ ಮೀನಿನ ಮರಿಗಳನ್ನು ಬಂಧಿಸಲಾಗಿತ್ತು. ಅಷ್ಟು ಹೊತ್ತಿಗಾಗಲೇ ನನಗೆ ನೀರಡಿಕೆ ಯಾಯ್ತು ವನಶ್ರೀಗೂ ನೀರಾಡಿಕೆಯಾಗಿರಬೇಕು ನೀರಿಗಾಗಿ ಹೋಗುತ್ತಿದ್ದ ಆಕೆಯನ್ನು ಕಂಡೊಡನೆ ನನ್ನ ಪಾಲಿಗೆ ನೀರು ದಕ್ಕುತ್ತದೆಯೋ ಇಲ್ಲವೋ ಎಂದು ಲೆಕ್ಕಾಚಾರ ಹಾಕಿದ ನಾನು ಓಡಿಹೋಗಿ ಬಾಟಲಿಯಲ್ಲಿದ್ದ ನೀರು ಕುಡಿದೆ ನಾನು ಕುಡಿದ ರಭಸ ಹೇಗಿತ್ತೆಂದರೆ ಬಾಟಲಿಯಲ್ಲಿ ಬಂಧಿಯಾಗಿದ್ದ ಮೂರ್ನಾಲ್ಕು ಜೀವಂತ ಮೀನಿನ ಮರಿಗಳು ನಿರಾಯಾಸವಾಗಿ ನನ್ನ ಹೊಟ್ಟೆ ಸೇರಿದವು. ಅದರ ಪರಿಣಾಮ ಏನಾಗಬಹುದೋ ಎಂಬುದನ್ನು ಲೆಕ್ಕಿಸದ ನಾನು ಮತ್ತೆ ಮರಳಿನಾಟದಲ್ಲಿ ಮಗ್ನನಾದೆ. ಮರಳಿನಲ್ಲಿ ಬಿದ್ದೆವು ಅಲ್ಲಿಯೇ ಎದ್ದೆವು, ಬಿದ್ದು ಒದ್ದಾಡಿದೆವು, ಉರುಳಿ ಆನಂದಿಸಿದೆವು, ಆದರೂ ಧಣಿವಾಗಲೇ ಇಲ್ಲ ಒಂದೊಂದು ಕ್ಷಣವೂ ಬಾಲ್ಯದ ನೆನಪಾಯ್ತು ಕುದುರೆ ಅಬ್ಬಿಯನ್ನು ಬಿಟ್ಟು ಬರುವಾಗ ಮನಸು ಭಾರವಾಗಿತ್ತು. ತುಂಗಾ ತೀರದಲ್ಲೊಂದು ದಿವಸ ಬಾಲ್ಯದ ನೆನಪುಗಳನ್ನು ಹಸಿರಾಗಿಸುವಂತೆ ಮಾಡಿದ ಬೆರಣಗೋಡಿನ ಮಹೇಶಣ್ಣ ಹಾಗೂ ರೂಪಕ್ಕನವರಿಗೆ ಎಲ್ಲಕ್ಕಿಂತಲೂ ಹೆಚ್ಚಾಗಿ ಈ ಸಂತೋಷ ಕೂಟಕ್ಕೆ ನೆಪವಾದ ಸನ್ಮಿತಳಿಗೆ ಹಾಗೂ ಅವಳ ಹುಟ್ಟು ಹಬ್ಬಕ್ಕೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಎಂಬುದು ಇನ್ನು ಅರಿವಾಗಿಲ್ಲ.

1 comment:

Anonymous said...

ಒಂದು ಉತ್ತಮ ಬರಹವನ್ನು ನಮಗೆ ಅರ್ಪಿಸಿದ ನಿಮಗೆ ಧನ್ಯವಾದಗಳು. ನಮ್ಮ ನೆನಪು ಹಾಗೂ ಆಸೆಗಳು ಮತ್ತೆ ಗರಿಗೆದರಿವೆ. ನಾವೂ ಮಲೆನಾಡಿನೆಡೆಗೆ ಪಯಣಿಸುವಂತೆ ಬಾಸವಾಗುತ್ತಿದೆ.

ಥ್ಯಾಂಕ್ಸ್....,