
ಈ ಹಿಂದೆ ಸುಮಾರು ಇಪ್ಪತ್ತು ವರ್ಷಗಳಿಂದ ಈಚೆಗೆ, ಲೋಕಸಭೆ ಹಾಗೂ ವಿಧಾನ ಸಭೆಗಳಿಗೆ ನಡೆದ ಚುನಾವಣೆಗಳು, ಜನ ಸಾಮಾನ್ಯರಲ್ಲಿ ಅಸಮದಾನ ಉಂಟುಮಾಡಿದ್ದವು. ಚುನಾವಣೆ ಸಮಯದಲ್ಲಿ ನಡೆಯುತ್ತಿದ್ದ ಅಬ್ಬರದ ಪ್ರಚಾರ , ಹರಿಯುತ್ತಿದ್ದ ಹಣ ಹಾಗೂ ಹೆಂಡದ ಹೊಳೆ, ಸಮಾಜದಲ್ಲಿ ಪ್ರಜಾಪ್ರಭುತ್ವದ ಬಗ್ಗೆಯೇ ಅಸಹ್ಯ ಉಂಟು ಮಾಡುತ್ತಿತ್ತು. ಯಾವುದೇ ವ್ಯವಸ್ಥೆಗಿಂತಲೂ ಸರ್ವಶ್ರೇಷ್ಟ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಪ್ರಜಾ ಪ್ರಭುತ್ವದಂತಹ ಶ್ರೇಷ್ಟ ವ್ಯವಸ್ಥೆಯನ್ನು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶದ ಜನರು ಅಣಕಿಸುವ ಮುನ್ನ, ಪ್ರಜಾತಂತ್ರ ವ್ಯವಸ್ಥೆಯನ್ನು ಅನುಷ್ಟಾನಗೊಳಿಸಲು ಸಂವಿಧಾನಿಕವಾಗಿ ಅಸ್ಥಿತ್ವಕ್ಕೆ ಬಂದಿರುವ ಚುನಾವಣಾ ಆಯೋಗ ಎಚ್ಚೆತ್ತು ಕೊಂಡಿದ್ದು ಮೆಚ್ಚತ್ತಕ್ಕಂಹ ವಿಚಾರವಾಗಿದೆ.
ಭಾರತೀಯ ಸಂವಿಧಾನದ ಭಾಗ 15ರಲ್ಲಿ ಚುನಾವಣಾ ಆಯೋಗದ ಕರ್ತವ್ಯ ಹಾಗೂ ಅಧಿಕಾರಗಳ ಬಗ್ಗೆ ೩೨೪ ರಿಂದ 329ನೇ ವಿಧಿಯವರೆಗೂ ವಿವರಿಸಲಾಗಿದೆ. ನಮ್ಮ ದೇಶದ ಸಂಸತ್ತಿನ ಹಾಗೂ, ಯಾವುದೇ ರಾಜ್ಯಗಳ ವಿಧಾನ ಮಂಡಲ ಮತ್ತು ರಾಷ್ಟ್ರಪತಿಯ ಚುನಾವಣೆಗಳಿಗೆ ಸಂಬಂಧಿಸಿದಂತೆ ಚುನಾವನಾ ಆಯೋಗ ಜವಾಬ್ದಾರಿಯುತವಾದಂತಹ ಕೆಲಸ ನಿರ್ವಹಿಸಬಹುದಾಗಿದ್ದು, ಮತದಾರರ ಪಟ್ಟಿ ತಯಾರಿಕೆಯಿಂದ ಹಿಡಿದು ಚುನಾವಣೆಯ ನಿರ್ವಹಣೆ, ನಿರ್ದೇಶನ ಮತ್ತು ನಿಯಂತ್ರಣಗಳನ್ನು ಚುನಾವಣಾ ಆಯೋಗ ಮಾಡಬಹುದಾಗಿದೆ. ಆದರೆ ಕಳೆದ ವರ್ಷ ಮೈಸೂರಿನ ಚಾಮುಂಡಿ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆ ಪ್ರಜಾತಂತ್ರ ವ್ಯವಸ್ಥೆಯನ್ನು ಅಣಕಿಸುವ ಪರಿಯಲ್ಲಿದ್ದುದೇ ಚುನಾವಣಾ ಆಯೋಗ ಈ ಬಾರಿ ಈ ಮಟ್ಟದ ವಿಧಿವಿದಾನಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಕಾರಣವಾಗಿರಬಹುದು. ಈ ಎಲ್ಲಾ ಬೆಳವಣಿಗೆ ಚುನಾವಣಾ ಆಯೋಗಕ್ಕೆ ಶಿಸ್ತು ರೂಪಿಸಲು ಸಹಾಯಕವಾಗಿದೆ ಎಂಬುದು ಒಳ್ಳೆಯ ಬೆಳವಣಿಗೆಯೇ ಆಗಿದ್ದರೂ ಅದಕ್ಕೆ ಕರ್ನಾಟಕ ಕಾರಣವಾಯಿತಲ್ಲ ಎಂಬುದನ್ನು ಕನ್ನಡಿಗರು ಆಲೋಚಿಸುವಂಸುವಂತಾಗಿದೆ.
ಈ ಹಿಂದಿನ ಚುನಾವಣೆಗಳಲ್ಲಿ ನಡೆಯುತ್ತಿದ್ದ ಅಬ್ಬರದ ಪ್ರಚಾರ ಹರಿಯುತ್ತಿದ್ದ ಹಣದ ಹೊಳೆ ಇವೆಲ್ಲವೂ ಸಜ್ಜನರನ್ನು ಚಿಂತೆಗೆ ದೂಡಿದ್ದವು, ಸಾಮಾನ್ಯರು ಚುನಾವಣೆ ಎಂದರೆ ಅದು ಧಣಿಗಳಿಗೆ, ಹಣ ಉಳ್ಳವರಿಗೆ ಹಾಗೂ ಎಷ್ಟಾದರೂ ಸಹ ಖರ್ಚು ಮಾಡಲು ತಯಾರಿರುವವರಿಗೆ ಎಂಬ ರೀತಿ ಬಾಸವಾಗುತ್ತಿದ್ದವು. ಈ ಕಾರಣದಿಂದಲೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿಕೊಂಡು, ಚುನಾವಣೆಗಳಲ್ಲಿ ಆಸಕ್ತಿ ಇರುವವರೂ ಸಹ ಚುನಾವಣೆಗಳಿಂದ ದೂರವೇ ಉಳಿದಿದ್ದು ತಮ್ಮ ಅಸಹಾಯಕತೆ ಪ್ರದರ್ಶಿಸುತ್ತಿದ್ದರು ಆದರೆ ಚುನಾವಣಾ ಆಯೋಗ ಪ್ರಸ್ತುತ ಚುನಾವಣೆಯಲ್ಲಿ ಕೈಗೊಂಡ ಕ್ರಮಗಳು ಜನಸಾಮಾನ್ಯರಲ್ಲಿ ಚುನಾವಣೆ ಹಾಗೂ ಪ್ರಜಾಪ್ರಭುತ್ವ ಮತ್ತು ರಾಜಕಾರಣದ ಬಗ್ಗೆ ಆಶಾ ಕಿರಣ ಮೂಡಿಸಿವೆ.
ಚುನಾವಣಾ ಅಧಿಕಾರಿಗಳಿಗೆ ಯಾವ ವಿಧಧ ಅಧಿಕಾರವಿರುತ್ತದೆ ಹಾಗೂ ಅದನ್ನು ಸಮರ್ಥವಾಗಿ ಹೇಗೆ ಬಳಸಬಹುದು ಎಂಬುದನ್ನು ರೇಮಂಡ್ ಪೀಟರ್ ಅಂತಹ ದಕ್ಷ ಅಧಿಕಾರಿಗಳು ತೋರಿಸಿಕೊಟ್ಟಿರುವಂತದ್ದು ಸಹ ಕರ್ನಾಟಕದ ಚುನಾವಣೆಯಲ್ಲಿ ವ್ಯಕ್ತವಾಗಿದೆ. ದಕ್ಷ ಅಧಿಕಾರಿಗಳ ಪ್ರಾಮಾಣಿಕ ಕರ್ತವ್ಯ ನಿರ್ವಹಣೆಯಿಂದಾಗಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಹರಿದು ಬಂದಿದೆ. ಚುನಾವಣಾ ಸಮಯಗಳಲ್ಲಿ ಅಧಿಕಾರಿಗಳಿಗೆ ಎಂತಹ ಅಧಿಕಾರವಿರುತ್ತದೆ ಎಂಬುದರ ಅರಿವು ಮಾಡಿಕೊಟ್ಟು ಅದನ್ನು ಸಮರ್ಥವಾಗಿ ಬಳಸಲು ಅವಕಾಶ ಕೊಟ್ಟ ಚುನಾವಣಾ ಆಯೋಗದ ಕ್ರಮ ಪ್ರಶಂಸನಾರ್ಹವಾಗಿದೆ. ಆದರೆ ಇದೇ ಅಧಿಕಾರಿಗಳು ಬೆಂಗಳೂರು ಹಾಗೂ ಕೋಲಾರದಲ್ಲಿ ನೂರೈವತ್ತಕ್ಕೂ ಅಧಿಕ ಜನರ ಅಮೂಲ್ಯ ಪ್ರಾಣ ಬಲಿತೆಗೆದುಕೊಂಡ ಕಳ್ಳಭಟ್ಟಿ ನಿಯಂತ್ರಿಸುವಲ್ಲಿ ವಿಫಲರಾಗಿರುವುದು ಶೋಚನೀಯ ಸಂಗತಿಯಾಗಿದೆ.
ಇಷ್ಟೆಲ್ಲಾ ಸೂಕ್ತ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗ, ಕೇವಲ ಚುನಾವಣೆಗಳು ಬಂದಾಗ ಮಾತ್ರ ಹೆಚ್ಚು ಜಾಗೃತರಾಗದೆ, ವರ್ಷದ ಎಲ್ಲಾ ಕಾಲದಲ್ಲಿಯೂ ಜಾಗೃತವಾಗಿದ್ದು ಅಪಾರ ದೋಷಗಳಿಂದ ಕೂಡಿರುವ ಮತದಾರರ ಪಟ್ಟಿಯನ್ನು ಕಡಾ ಕಂಡಿತವಾಗಿ ಸಿದ್ದಪಡಿಸುವತ್ತ ಜಾಗೃತವಾಗಬೇಕಿದೆ ಹಾಗೂ ಬಹಳಾ ಕಾಲದಿಂದಲೂ ಸಮಸ್ಯೆಯಾಗಿಯೇ ಉಳಿದು ಬಂದಿರುವ ಕಡಿಮೆ ಪ್ರಮಾಣದ ಮತದಾನ ಸಮಸ್ಯೆಯನ್ನು ಬಗೆಹರಿಸುವತ್ತಲೂ ಆಲೋಚಿಸಬೇಕಾಗಿದೆ. ಪ್ರತೀ ಚುನಾವಣೆಯಲ್ಲು ಒಟ್ಟಾರೆ ಶೇಕಡ 50ಕ್ಕಿಂತಲೂ ಕಡಿಮೆ ಪ್ರಮಾಣದ ಮತದಾನವಾಗುತ್ತಿದ್ದು ಈ ಪ್ರಮಾಣದ ಮತದಾನದಿಂದ ಆಯ್ಕೆಯಾಗುವಂತಹ ಸದಸ್ಯರನ್ನು ಹಾಗೂ ಸರ್ಕಾರಗಳನ್ನು ಸರ್ವಸಮ್ಮತವಾಗಿ ಒಪ್ಪಕೊಳ್ಳುವುದು ಕಠಿಣ ಸಂಗತಿಯಾಗಿರುತ್ತದೆ.
ಒಟ್ಟಾರೆ ಕರ್ನಾಟಕದಲ್ಲಿ ಈಗ ನಡೆದ ಚುನಾವಣೆಯ ವಿಧಿ ಹಾಗೂ ವಿಧಾನಗಳು ನಮ್ಮ ರಾಜ್ಯದ ಹಾಗೂ ದೇಶದ ಜನರಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಹೊಸದಾದ ಆಶಾಕಿರಣ ಮೂಡಿಸುವಲ್ಲಿ ಯಶಸ್ವಿಯಾಗಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಪ್ರಜಾಪ್ರತಿಧಿಗಳು ಹಾಗೂ ಈಗ ಅಸ್ಥಿತ್ವಕ್ಕೆ ಬಂದಿರುವ ಸರ್ಕಾರವನ್ನು ಅವಲಂಭಿಸಿದೆ.