Friday, June 20, 2008

ಕಾವೇರಿ ತೀರ್ಪು ಕನ್ನಡಿಗರಿಗೆ ಉರುಳಾದದ್ದು ಯಾಕೆ?



ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹಾಸನ, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹುಟ್ಟಿ ಕೇರಳ, ತಮಿಳುನಾಡು ಹಾಗೂ ಪಾಂಡಿಚೇರಿ ರಾಜ್ಯಗಳ ಮೂಲಕ ಹಾದು ಹಿಂದು ಮಹಾಸಾಗರವನ್ನು ಸೇರಿಕೊಳ್ಳುವ ಕಾವೇರಿ ನದಿ ಇಂದು ರಾಜ್ಯದಾದ್ಯಂತ ಮನೆ ಮಾತಾಗಿದೆ. ತನ್ನ ವಿವಾದದಿಂದಲೇ ಈ ಪರಿಯಲ್ಲಿ ಹಾಗೂ ಇಷ್ಟು ಧೀರ್ಘಕಾಲ ಚರ್ಚೆಗೆ ಗ್ರಾಸವಾಗಿರುವ ನದಿ ಬಹುಷ ಇದೊಂದೇ ಇರಬೇಕು. ವಿವಾದ ಬಗೆಹರಿಸುವ ಸಲುವಾಗಿ ನ್ಯಾಯಾಧೀಕರಣವೇನೋ ತನ್ನ ಅಂತಿಮ ವರದಿಯನ್ನು ಪ್ರಕಟಿಸಿದೆ ಆದರೆ ವಿವಾದ ಮಾತ್ರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
ನಾಡಿನ ಜೀವನದಿಯಾದ ಕಾವೇರಿ ಹಾಸನ ಜಿಲ್ಲೆಯಲ್ಲಿಯೂ ಸಹ ಸುಮಾರು ಸಹ ಸುಮಾರು ೨೦ ಕಿಲೋ ಮೀಟರ್ ಗಳಷ್ಟು ಹರಿಯುತ್ತದೆ. ಕೊಡಗಿನ ಕುಶಾಲನಗರ, ಕೂಡಿಗೆಯ ಮೂಲಕ ಹರಿಯುವ ನದಿ ಶಿರಂಗಾಲದವರೆಗೆ ಪ್ರವಹಿಸಿ ನಂತರ ಅರಕಲಗೂಡು ತಾಲ್ಲೋಕಿನ ಗಡಿ ಗ್ರಾಮವಾದ ಕಡವಿನ ಹೊಸಹಳ್ಳಿಯ ಮುಖಾಂತರ ಹಾಸನ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಕೊಣನೂರು, ರಾಮನಾಥಪುರ ಹಾಗೂ ಕಟ್ಟೇಪುರಗಳಲ್ಲಿ ಹರಿಯುವ ಕಾವೇರಿ ಕೇರಳಾಪುರದ ಮೂಲಕ ಮೈಸೂರು ಜಿಲ್ಲೆ ಪ್ರವೇಶಿಸುತ್ತದೆ. ವಿಶೇಷವೆಂದರೆ ಕಾವೇರಿ ಕಟ್ಟೆಗೆ ಸಂಬಂಧಿಸಿದಂತೆ ವಿವಾದಕ್ಕೆ ಒಳಗಾಗಿದ್ದು ಕಾವೇರಿಗೆ ಮೊದಲ ಕಟ್ಟೆಯನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೋಕಿನ ಕಟ್ಟೆಪುರ ಗ್ರಾಮದ ಬಳಿ ನಿರ್ಮಾಣ ಮಾಡಲಾಗಿದೆ.
ಕಾವೇರಿಯ ಮೊದಲ ಒಪ್ಪಂದ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡುಗಳ ನಡುವಿನ ವೈಮನಸ್ಯ ಇಂದು ನಿನ್ನೆಯದಲ್ಲ ಅದರ ಮುಲ ಹುಡುಕಿದರೆ ಚೋಳರ ಕಾಲದವರೆವಿಗೂ ಹೋಗುತ್ತದೆ. ಆದರೆ ಇದು ಹೆಚ್ಚು ಪ್ರಾಶಸ್ತ್ಯ ಪಡೆದುಕೊಂಡಿದ್ದು ೧೭-೧೮ ನೇ ಶತಮಾನದಲ್ಲಿ. ೧೮೭೬-೭೮ ರಲ್ಲಿ ಉಂಟಾದ ಭೀಕರ ಕ್ಷಾಮದ ಹಿನ್ನೆಲೆಯಲ್ಲಿ ವೇದಾವತಿ ನದಿಗೆ ವಾಣಿವಿಲಾಸ ಸಾಗರ ಅಣೆ ಕಟ್ಟಲು ದಿವಾನ್ ಶೇಷಾದ್ರಿ ಅಯ್ಯರ್ ಕ್ರಮ ಕೈಗೊಂಡಾಗ ಸದರಿ ಯೋಜನೆಯನ್ನು ವಿರೋಧಿಸಿ ಮದ್ರಾಸ ಪ್ರಾಂತ 1890ರಲ್ಲಿ ಇದನ್ನು ತೀವ್ರವಾಗಿ ಆಕ್ಷೇಪಿಸಿತು. ಆದರೆ ತನ್ನ ನೆಲದಲ್ಲಿ ಹರಿಯುವ ನೀರಿನ ಹಕ್ಕಿನ ಬಗ್ಗೆ ಕನ್ನಡಿಗರು ವಾದ ಮಾಡಿದ ಪರಿಣಾಮವಾಗಿ 1892ರಲ್ಲಿ ಮೊದಲ ಒಪ್ಪಂದವೊಂದು ಏರ್ಪಟ್ಟಿತು ಇದರ ಪ್ರಕಾರ ಕಾವೇರಿ ಕೊಳ್ಳದ ಯಾವುದೇ ಯೋಜನೆಗಳಿಗೆ ಮದ್ರಾಸ್ ಪ್ರಾಂತ್ಯದ ಅನುಮತಿ ಪಡೆಯಬೇಕಿತ್ತು.
ಎಲ್ಲಿಯ ವೇದಾವತಿ ಅದೆಲ್ಲಿಯ ಕಾವೇರಿ: ವೇದಾವತಿಗೆ ಅಣೆಕಟ್ಟಿದರೆ ತಮಿಳುನಾಡಿನವರಿಗೇನು? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಏಕೆಂದರೆ ಕಾವೇರಿಗೂ ವೇದಾವತಿಗೂ ಯಾವುದೇ ತರಹದ ಸಂಬಂಧವಿಲ್ಲ. ಕಾವೇರಿ ತನ್ನದೇ ಆದ ಕೊಳ್ಳ ನಿರ್ಮಿಸಿಕೊಂಡಿದ್ದು, ವೇದಾವತಿ ಕೃಷ್ಣಾ ನದಿಯ ಕೊಳ್ಳಕ್ಕೆ ಸೇರ್ಪಡೆಗೊಳ್ಳುತ್ತದೆ. ಹಾಗಿದ್ದಾಗ್ಯೂ ತಮಿಳುನಾಡು ತಗದೆ ತೆಗೆದ ಕಾರಣವೆಂದರೆ, ಬ್ರಿಟೀಷರ ಅಧೀನಕ್ಕೊಳಗಾಗಿದ್ದ ಮೈಸೂರು ಸಂಸ್ಥಾನ ಯಾವುದೇ ಯೋಜನೆಗಳನ್ನು ಕೈಗೊಳ್ಳಬೇಕೆಂದರೆ ಅದು ಮದ್ರಾಸ್ ಪ್ರಾಂತ್ಯದ ಒಪ್ಪಿಗೆ ಪಡೆಯಬೇಕು ಎಂಬ ಕಾರಣ ಮುಂದಿರಿಸಿಕೊಂಡು ತಮಿಳುನಾಡು, ವಾಣಿವಿಲಾಸ ಯೋಜನೆಗೆ ಅಡ್ಡಿ ಮಾಡಿತ್ತು.
1924ರ ಒಪ್ಪಂದ: 1911ರ ವೇಳೆಗೆ ಕನ್ನಂಬಾಡಿ ಕಟ್ಟೆಯ ಮೊದಲ ಹಂತ ಪೂರ್ಣಗೊಂಡು ಎರಡನೇ ಹಂತದ ಕಾರ್ಯಾಚರಣೆ ಪ್ರಾರಂಭಿಸಿದಾಗ ಮದ್ರಾಸ್ ಪ್ರಾಂತ್ಯ ಮತ್ತೆ ಆಕ್ಷೇಪ ಎತ್ತಿತು. ಈ ಆಕ್ಷೇಪವನ್ನು ಕಡೆಗಣಿಸಿ ಕೆಲಸ ಮುಂದುವರೆಯಿತಾದರೂ ಸಹ 1892ರ ಒಪ್ಪಂದದಂತೆ ಕೇಂದ್ರದ ಮಧ್ಯಸ್ಥಿಕೆಗೆ ಮನವಿ ಮಾಡಲಾಗಿ ಕೇಂದ್ರ ಸರ್ಕಾರವು ಹೆಚ್.ಡಿ. ಗ್ರಿಷಿತ್ ಎಂಬುವವರ ಮಧ್ಯಸ್ಥಿಕೆಯಲ್ಲಿ ಕನ್ನಂಬಾಡಿ ಕಟ್ಟೆಯ ಕೆಲಸ ಪೂರ್ಣಗೊಂಡಿತು. ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಮದ್ರಾಸ್ ರಾಜ್ಯ ಲಂಡನ್ ನಲ್ಲಿರುವ ಸೆಕ್ರೆಟರಿ ಆಫ್ ಸ್ಟೇಟ್ ಗೆ ಈ ಬಗ್ಗೆ ಮೇಲ್ಮನವಿ ಮಾಡಿತು ವಾಸ್ತವವಾಗಿ ಇಂತಹ ಮೇಲ್ಮನವಿಗೆ 1892ರ ಒಪ್ಪಂದದಲ್ಲಿ ಅವಕಾಶ ಇರಲಿಲ್ಲ ಆದರೂ ಮದ್ರಾಸ್ ಮತ್ತು ಕೇಂದ್ರ ಸರ್ಕಾರಗಳ ಒತ್ತಡಕ್ಕೆ ಒಳಪಟ್ಟ ಮೈಸೂರು ಸಂಸ್ಥಾನವು 1924ರಲ್ಲಿ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿತು ಈ ಒಪ್ಪಂದದ ಅವಧಿ 50ವರ್ಷಗಳಲ್ಲಿ ತಮಿಳುನಾಡು ತನ್ನ ಕರಾರನ್ನು ಮೀರಿ 18ಲಕ್ಷ ಎಕರೆಯಲ್ಲಿ ನೀರಾವರಿ ಮಾಡಿತು. ಈ ಸಲುವಾಗಿ ತಮಿಳುನಾಡು 1924ರ ಒಪ್ಪಂದ ಭಂಗಿಸಿ ಕುಟ್ಟತ್ತಿ ಮತ್ತು ಪುಲಂಬಾಡಿ ಕಾಮಗಾರಿ ಕೈಗೊಂಡಿತು ಆದರೆ ಕರ್ನಾಟಕ ಹೇಮಾವತಿ, ಹಾರಂಗಿ ಮತ್ತು ಕಬಿನಿ ಕಾಮಗಾರಿಯನ್ನು ಕೈಗೆತ್ತಿಕೊಂಡಾಗ ವಿರೋಧಿಸಿತು ಹಾಗೂ ನ್ಯಾಯಕ್ಕಾಗಿ 1968ರಲ್ಲಿ ಮದ್ರಾಸ್ ರಾಜ್ಯದ ಶ್ರೇಷ್ಟತ್ತಮ ನ್ಯಾಯಾಲಯಕ್ಕೆ ಹೋಯಿತು, ಆದರೆ 3ರಾಜ್ಯಗಳ ಒಪ್ಪಂದವಾಗಿ 1972ರಲ್ಲಿ ಖಟ್ಲೆಯನ್ನು ಹಿಂಪಡೆಯಲಾಯಿತು.
ಸರ್ವೋಚ್ಚ ನ್ಯಾಯಾಲಯದತ್ತ ಕಾವೇರಿ: 1972ರಲ್ಲಿ ನೇಮಿಸಿದ್ದ ಸತ್ಯಶೋಧಕ ಸಮಿತಿ 1974ರಲ್ಲಿ ವರದಿ ಸಲ್ಲಿಸಿ ಒಟ್ಟು 740ಟಿಎಂಸಿ ನೀರಿನಲ್ಲಿ ತಮಿಳುನಾಡು ೪೮೯, ಕರ್ನಾಟಕ ೧೭೭ ಹಾಗೂ ಕೇರಳ 05ಟಿಎಂಸಿ ನೀರನ್ನು ಬಳಸುತ್ತಿದ್ದು ಇದರಲ್ಲಿ 100ಟಿಎಂಸಿ ನೀರನ್ನು ತಮಿಳುನಾಡು ಉಳಿಸಬೇಕು ಎಂದಿತು. ಈ ವೇಳೆಗಾಗಲೇ 1924ರ ಒಪ್ಪಂದ 1974ರ ವೇಳೆಗಾಗಲೇ ಮುಗಿಯುತ್ತ ಬಂದಿತ್ತು ಈ ವಿವಾದದ ಬಗ್ಗೆ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಮುಖ್ಯಮಂತ್ರಿಗಳು ಹಲವು ಸುತ್ತಿನ ಮಾತುಕತೆ ನಡೆಸಿದರೂ ವಿವಾದ ಬಗೆಹರಿಯಲಿಲ್ಲ ತಮಿಳುನಾಡು ರೈತರು ಈ ಬಗ್ಗೆ ಶ್ರೇಷ್ಟತ್ತಮ ನ್ಯಾಯಾಲಯಕ್ಕೆ ಮನವಿ ಮಾಡಿದಾಗ ದೆಹಲಿಯ ಈ ಪೀಠವು ವಿಷಯವನ್ನು ತ್ರಿಸದಸ್ಯ ಟ್ರಿಬ್ಯುನಲ್ ಗೆ ಒಪ್ಪಿಸಲು 1990ರಲ್ಲಿ ತೀರ್ಪು ನೀಡಿದ್ದು, ಕೇಂದ್ರ ಸರ್ಕಾರ ತ್ರಿಸದಸ್ಯ ಆಯೋಗವನ್ನು 1990ರ ಜೂನ್ 2ರಂದು ರಚನೆ ಮಾಡಿತು. 1991ರಲ್ಲಿ ಮಧ್ಯಂತರ ತೀರ್ಪು ನೀಡಿದ ಆಯೋಗ ತಮಿಳುನಾಡಿಗೆ ವಾರ್ಷಿಕ 205ಟಿಎಂಸಿ ನೀರು ಹರಿಸುವಂತೆ ಆದೇಶ ನೀಡಿತು.
ಈಗ ಸುಮಾರು 17ವರ್ಷಗಳ ಧೀರ್ಘ ಅವಧಿಯ ನಂತರ ಕಾವೇರಿ ನ್ಯಾಯಾಧೀಕರಣ ತೀರ್ಪು ನೀಡಿದೆ. ಕಾವೇರಿ ಪಾತ್ರದ ಒಟ್ಟು ನೀರಿನ ಪ್ರಮಾಣ 740ಟಿಎಂಸಿ ಎಂದು ಗುರುತಿಸಿರುವ ನ್ಯಾಯಾಧೀಕರಣ ತಮಿಳುನಾಡಿಗೆ 419ಟಿಎಂಸಿ, ಕರ್ನಾಟಕಕ್ಕೆ270ಟಿಎಂಸಿ ಹಾಗೂ ಕೇರಳಕ್ಕೆ 30ಟಿಎಂಸಿ ಮತ್ತು ಪುದುಚೇರಿಗೆ 07ಟಿಎಂಸಿ ನೀರನ್ನು ಹಂಚಿದೆ. 10ಟಿಎಂಸಿ ನೀರನ್ನು ಪರಿಸರದ ದೃಷ್ಟಿಯಿಂದ ಉಳಿಸಿರುವ ನ್ಯಾಯಾಧೀಕರಣ 04ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಯುವ ಸೋರಿಕೆ ಎಂದು ಗುರುತಿಸಿದೆ. ತಮಿಳುನಾಡಿಗೆ ನಿಗಧಿ ಮಾಡಿರುವ 419ಟಿಎಂಸಿ ನೀರನ್ನು ಅದು ಬಳಸಬೇಕೆಂದರೆ ಕರ್ನಾಟಕ ಪ್ರತಿವರ್ಷ 192ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ.
ಕಾವೇರಿ ಕೊಳ್ಳದಲ್ಲಿ ಲಭ್ಯವಾಗುತ್ತಿರುವ ಒಟ್ಟು ನೀರಿನ ಪ್ರಮಾಣಕ್ಕೆ ವಿವಿಧ ರಾಜ್ಯಗಳ ಕೊಡುಗೆ ಹೀಗಿದೆ, ಕರ್ನಾಟಕದ ಕೊಡುಗೆ 425ಟಿಎಂಸಿ ಆದರೆ ತಮಿಳುನಾಡಿನ ಕೊಡುಗೆ 212ಟಿಎಂಸಿ ಮತ್ತು ಕೇರಳದ ಕೊಡುಗೆ 113ಟಿಎಂಸಿ ಅಂದರೆ ಈ ಪ್ರಮಾಣದ ನೀರು ಆಯಾ ರಾಜ್ಯದ ಜಲಾನಯನ ಪ್ರದೇಶದಲ್ಲಿ ಸಂಗ್ರಹವಾಗುತ್ತಿದೆ ಇದನ್ನು ಶೇಖಡಾವಾರು ಪ್ರಮಾಣದಲ್ಲಿ ಹೇಳುವುದಾದರೆ ಕರ್ನಾಟಕ ಶೇ೫೩.೮% ರಷ್ಟು ನೀರನ್ನು, ತಮಿಳುನಾಡು ಶೇ ೩೧.9ರಷ್ಟು ನೀರನ್ನು ಹಾಗೂ ಕೇರಳ ಶೇ ೧೪.3ರಷ್ಟು ನೀರನ್ನು ಕೊಡುಗೆ ನೀಡುತ್ತಿವೆ. ಕಾವೇರಿಗೆ ತಮಿಳುನಾಡಿನ ಕೊಡುಗೆ ಕರ್ನಾಟಕಕ್ಕಿಂತಲೂ ಕಡಿಮೆ ಇದ್ದರೂ ಸಹ ಅದು ಬಳಕೆ ಮಾಡುತ್ತಿರುವ ಪ್ರಮಾಣ ಅಗಾದವಾದುದು. ಕರ್ನಾಟಕದಲ್ಲಿ ಕಾವೇರಿಯ ಅಚ್ಚುಕಟ್ಟು ಪ್ರದೇಶ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಗರಿಷ್ಟ ಪ್ರಮಾಣದಲ್ಲಿದೆ ಉಳಿದ ಮೈಸೂರು ಹಾಗೂ ಚಾಮರಾಜನಗರದ ಅಚ್ಚುಕಟ್ಟು ಪ್ರದೇಶ ಬಹಳ ಕಡಿಮೆ ಆದರೆ ತಮಿಳುನಾಡಿನ ಕೊಯಮತ್ತೂರು, ತಿರುಚನಾಪಳ್ಳಿ ಹಾಗೂ ತಂಜಾವೂರು ಜಿಲ್ಲೆಗಳು ಸಂಪೂರ್ಣ ನದಿ ಕಾವೇರಿ ನೀರಾವರಿಗೆ ಒಳಪಟ್ಟಿವೆ.
ಕಾವೇರಿ ಕೊಳ್ಳದ ನಗರ ಪ್ರದೇಶ: ಕಾವೇರಿ ನ್ಯಾಯಾಧೀಕರಣದ ತೀರ್ಪು ಹೊರಬಂದ ನಂತರ ಮಂಡ್ಯ ನಗರದಲ್ಲಿ ನಡೆದಷ್ಟು ಪ್ರತಿಭಟನೆಗಳು ಬೇರೆ ಜಿಲ್ಲೆಗಳಲ್ಲಿ ನಡೆಯಲಿಲ್ಲ ಆದರೆ ಒಂದಂಶವನ್ನು ನಾವು ಪರಿಗಣಿಸಬೇಕು ಕಾವೇರಿ ತೀರ್ಪು ಕೇವಲ ಕಾವೇರಿ ನದಿಗಷ್ಟೇ ಸಂಬಂಧಿಸಿದುದಲ್ಲ. ಕಾವೇರಿಗೆ ಕರ್ನಾಟಕದಲ್ಲಿಯೇ ಸುಮಾರು 20ಉಪನದಿಗಳಿವೆ. ಇದರ ಮೊದಲ ಉಪನದಿ 'ಕನ್ನಿಕೆ' ಭಾಗಮಂಡಲದ ಬಳಿ ಕಾವೇರಿಯೊಂದಿಗೆ ಸಂಗಮವಾಗುತ್ತದೆ. ಅನಂತರದಲ್ಲಿ ನಿಡುಹೊಳೆ, ಹಾರಂಗಿ, ಹೇಮಾವತಿ, ಲಕ್ಷ್ಮಣತೀರ್ಥ, ಕಪಿಲಾ, ಅರ್ಕಾವತಿ ಇವೇ ಮೊದಲಾದ ನದಿಗಳು ಕಾವೇರಿಯನ್ನು ಸಂಧಿಸುತ್ತವೆ. ಈ ಎಲ್ಲಾ ನದಿಗಳ ಸಂಗಮದಿಂದಾಗಿಯೇ ಕಾವೇರಿ ನದಿಯ ಒಟ್ಟು ನೀರನ ಪ್ರಮಾಣ 740ಟಿಎಂಸಿ ಎಂದು ನ್ಯಾಯಾಧೀಕರಣ ಗುರುತಿಸಿರುವುದು. ಈ ಹಿನ್ನೆಲೆಯಲ್ಲಿ ಹೇಮಾವತಿಯ ುಪನದಿಯಾದ ಯಗಚಿಯ ನೀರಿನ ಪ್ರಮಾಣವನ್ನು ಸಹ ಗುರುತಿಸಲಾಗಿದೆ. ಆದ್ದರಿಂದ ಕಾವೇರಿ ಕೊಳ್ಳ ಎಂದಾಕ್ಷಣ ಹೇಮಾವತಿ, ಯಗಚಿ ನದಿಗಳ ಯೋಜನೆಯ ಮೇಲೂ ಸಹ ನ್ಯಾಯಾಧೀಕರಣದ ತೀರ್ಪು ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಹೇಮಾವತಿ ಹಾಗೂ ಯಗಚಿ ನದಿಯ ಅಚ್ಚುಕಟ್ಟುದಾರರೂ ಸಹ ಜಾಗೃತರಾಗಬೇಕು. ಅಂತೆಯೇ ಈ ನದಿ, ಉಪನದಿಗಳಿಂದ ಬೆಂಗಳೂರು ಸೇರಿದಂತೆ ನೂರಾರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು ನಗರ ವಾಸಿಗಳು ಇದನ್ನು ಮರೆತಹಾಗಿದೆ. ಕಾವೇರಿ ಸಮಸ್ಯೆ ಕೇವಲ ರೈತರಿಗೆ ಮಾತ್ರ ಸಂಬಂಧಿಸಿದುದು ಎಂದು ನಗರವಾಸಿಗಳು ಕೈತೊಳೆದುಕೊಂಡರೆ ಅದು ನಮ್ಮ ಮೂರ್ಖತನವಾದೀತು, ಅಥವಾ ರೈತರ ಹೋರಾಟದ ಫಲ ನಮಗೂ ದಕ್ಕುತ್ತದೆ ಎಂದುಕೊಂಡರೆ ನೀತಿವಂತರು ಸಾಲ ಮಾಡಿ ಹಬ್ಬ ಮಾಡಿದರೆ ಸೋಮಾರಿಗಳು ಉಂಡುಂಡು ತಿರುಗುತ್ತಿದ್ದರು ಎನ್ನುವಂತಹ ಪರಿಸ್ಥಿತಿಯಾಗುತ್ತದೆ.
ರಾಜಕಾರಣಿಗಳೇಕೆ ಮೌನಿಯಾಗುತ್ತಾರೆ?: ನ್ಯಾಯಾಧೀಕರಣದ ತೀರ್ಪು ಹೊರಬಿದ್ದಾಗ ಅದಕ್ಕೆ ಮೊದಲು ಸ್ಪಂಧಿಸಬೇಕಾದುದು ನಮ್ಮ ಸರ್ಕಾರ ಆದರೆ ಒಬ್ಬ ಸಾಮಾನ್ಯ ರೈತ ಪ್ರತಿಭಟಿಸಿದಷ್ಟು ಸಹ ನಮ್ಮ ರಾಜಕಾರಣಿಗಳು ಪ್ರತಿಕ್ರಿಯಿಸಲಿಲ್ಲ ಹಿರಿಯ ರಾಜಕಾರಣಿಗಳಾದ ಹೆಚ್.ಎನ್. ನಂಜೇಗೌಡ, ಮಂಡ್ಯದ ಜಿ.ಮಾದೇಗೌಡರಂತಹವರನ್ನು ಹೊರತುಪಡಿಸಿ ಉಳಿದವರಾರೂ ತುಟಿ ಬಿಚ್ಚಲಿಲ್ಲ. ರಾಜ್ಯ ಸರ್ಕಾರವಂತೂ ತನ್ನ ನಿಲುವು ಏನು? ಎಂಬುದನ್ನು ತಕ್ಷಣ ಸ್ಪಷ್ಟಪಡಿಸುವುದಿಲ್ಲ ಇನ್ನು ಸಂಸದರಂತೂ ರಾಜ್ಯದಲ್ಲಿ ಇದ್ದಾರೆಯೋ ಇಲ್ಲವೋ ಎಂಬಂತಹ ಸ್ಥಿತಿ ನಿರ್ಮಾಣವಾಗಿರುತ್ತದೆ. ಕಳೆದ ಸಾರಿ ತೀರ್ಪು ಪ್ರಕಟಗೊಂಡ ಸಂಧರ್ಭ 'ನಮ್ಮ ಸಂಸದರು ಕಾಣೆಯಾಗಿದ್ದಾರೆ' ಎಂದು ಪೋಲೀಸರಿಗೆ ಸಾರ್ವಜನಿಕರು ದೂರು ನೀಡುವವರೆಗೂ ಕಾವೇರಿ ಕೊಳ್ಳದ ಸಂಸದರೂ ಸಹ ಮಾತನಾಡಿರಲಿಲ್ಲ ಇದರ ಅರ್ಥ ನಾವು ಕಾವೇರಿ ನ್ಯಾಯಾಧೀಕರಣದ ತೀರ್ಪು ಒಪ್ಪಿದ್ದೇವೆ ಎಂತಲೋ? ಅಥವಾ ಸ್ವಯಂಕೃತಾಪರಾದದ ಸಂಕೇತ ಎಂತಲೋ? ಎಂಬುದನ್ನು ಮೌನವಾಗಿದ್ದವರೇ ಸ್ಪಷ್ಟಪಡಿಸಬೇಕು.
ತಮಿಳುನಾಡಿನಲ್ಲಿ ನೀರಾವರಿಯಾಗಿರುವ ಭೂಮಿಯ ಪ್ರಮಾಣ 27ಲಕ್ಷ ಎಕರೆ ಆದರೆ ಕರ್ನಾಟಕ ಈ ಕ್ಷೇತ್ರದಲ್ಲಿ ಈವರೆಗೆ ಸಾಧನೆ ಮಾಡಿದ್ದು 18ಲಕ್ಷ ಎಕರೆ ಮಾತ್ರ ಆಗಿರುವುದರಿಂದ ಈ ಪ್ರಮಾಣದ ನೀರು ಹಂಚಿಕೆ ಸೂಕ್ತ ಎಂಬ ಸ್ಪಷ್ಟನೆಯನ್ನು ನ್ಯಾಯಾಧೀಕರಣ ನೀಡಿದೆ. ಕರ್ನಾಟಕದ ಹೆಚ್ಚಿನ ಸಾಧನೆಗೆ 1924ರ ಒಪ್ಪಂದ ಅಡ್ಡಿಯಾಗಿತ್ತು ಎಂದು ರಾಜಕಾರಣಿಗಳು ನೆಪಹೇಳಬಹುದಾದರೂ ಇಂತದ್ದೇ ಮಿತಿ ತಮಿಳುನಾಡಿಗೂ ಇತ್ತು ಎಂಬುದು ಸತ್ಯವಲ್ಲವೇ? ಆದರೆ ತಮಿಳುನಾಡಿಗೆ ಸಾಧ್ಯವಾದ ಈ ಸಾಧನೆ ಕರ್ನಾಟಕಕ್ಕೆ ಏಕೆ ಸಾಧ್ಯವಾಗಲಿಲ್ಲ? ತಮಿಳುನಾಡಿನ ಅಚ್ಚುಕಟ್ಟು ಪ್ರದೇಶ 27ಲಕ್ಷ ಎಕರೆ ಎಂಬ ಕಾರಣಕ್ಕಾಗಿಯೇ ನ್ಯಾಯಾಧೀಕರಣ ಆ ರಾಜ್ಯಕ್ಕೆ ಹೆಚ್ಚು ನೀರು ಹಂಚಿದೆಯಾದ್ದರಿಂದ, ತಮಿಳುನಾಡು ಒಪ್ಪಂದ ಬಾಹಿರವಾಗಿ ನೀರಾವರಿ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಾಡಳಿತ ಏನು ಮಾಡುತ್ತಿತ್ತು? ನೀರಾವರಿ ವಿಸ್ತರಿಸಲೇನೋ ಶಕ್ತಿ ಇರಲಿಲ್ಲ ಎಂದರೆ ಆಕ್ಷೇಪಿಸಲೂ ಶಕ್ತಿ ಇರಲಿಲ್ಲವೇ? ನಮ್ಮ ಸರ್ಕಾರಗಳು ನಮ್ಮ ರಾಜಕಾರಣಿಗಳು ಅಂದು ಮೈಮರೆತ ತಪ್ಪಿಗೆ ಇಂದು ಕನ್ನಡ ನಾಡು ಬೆಲೆ ತೆರಬೇಕಾಗಿ ಬಂದಿದೆ.
ಕರ್ನಾಟಕ ಸ್ವಾತಂತ್ರ್ಯ ನಂತರ ಕೈಗೆತ್ತಿಕೊಂಡ ಯಾವುದೇ ಯೋಜನೆಯನ್ನು ಸಹ ನಿಯಮಿತ ಅವಧಿಯಲ್ಲಿ ಪೂರೈಸಲಿಲ್ಲ. ಕಟ್ಟೆಗಳನ್ನು ನಿರ್ಮಾಣಮಾಡಿ ಸಾವಿರಾರು ಎಕರೆ ಬಡ ಜನರ ಕೃಷಿ ಭೂಮಿ ಮುಳುಗಿಸಲಾಗಿದೆಯೇ ಹೊರತು, ಕೃಷಿ ಭೂಮಿಗೆ ನೀರು ಹರಿಸಲು ಅಗತ್ಯವಿದ್ದ ಕಾಲುವೆಗಳನ್ನು ಸೂಕ್ತವಾಗಿ ನಿರ್ಮಿಸಲಿಲ್ಲ ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಆಲಮಟ್ಟಿ, ಇದರ ಪರಿಣಾಮ ನೆರೆರಾಜ್ಯಗಳು ಕೇಳಿ ಕೇಳಿದಾಗೆಲ್ಲ ನೀರು ಹರಿಸಲು ಸರ್ಕಾರಕ್ಕೆ ಅನುಕೂಲವಾಯ್ತು ಈ ಪರಿಪಾಠದಿಂದ ರಾಜ್ಯ ಸರ್ಕಾರ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬ ಸ್ಥಿತಿ ತಲುಪಬೇಕಾಗಿ ಬಂತು.
ನದಿ ಪ್ರಾಕೃತಿಕ ಅಗತ್ಯವೇ?: ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಯೂ ಸಹ ವಾತಾವರಣದಲ್ಲಿ ಬದುಕಲು ಅನುಕೂಲವಾದಂತಹ ಸ್ಥಿತಿಯನ್ನು ಪ್ರಕೃತಿ ಸೃಷ್ಟಿಸಿದೆ. ಆದ್ದರಿಂದಲೇ ನೀರಿನ ಮೂಲ ಮಳೆಯೇ ಆಗಿದ್ದರೂ ಅದರ ಬಳಕೆ ಮಾತ್ರ ಕೆರೆ, ಕಟ್ಟೆ, ನದಿ, ಅಂತರ್ಜಲ ಮತ್ತು ತೊರೆ, ಹಳ್ಳಗಳ ಮುಖಾಂತರ ನೆರವೇರುವಂತಹ ಅನುಕೂಲವನ್ನು ನಿಸರ್ಗ ನಿರ್ಮಿಸಿದೆ. ಈ ನಿಟ್ಟಿನಲ್ಲಿ ಯೋಚಿಸಿದರೆ ನಮಗೆ ಕಾವೇರಿಯಂತಹ ಹಾಗೂ ಅದರ ಉಪನದಿಗಳಂತಹ ನೀರಿನ ಮೂಲಗಳ ಅಗತ್ಯ ಈ ಭೌಗೋಳಿಕ ಸನ್ನಿವೇಷಕ್ಕೆ ಇದೆ. ಆದ್ದರಿಂದಲೇ ಕರುನಾಡ ಪ್ರಕೃತಿಯ ಒಡಲಲ್ಲಿ ಕಾವೇರಿ ಜನ್ಮಿಸಿರುವುದು. ತಮಿಳುನಾಡಿನಂತಹ ಪ್ರದೇಶಕ್ಕೂ ಅದರ ಅಗತ್ಯವಿರುವುದರಿಂದಲೇ ಅದು ಅಲ್ಲಿಗೂ ಹರಿದಿರಬಹುದು ಆದರೆ ತಮಿಳುನಾಡಿನ ನೆಲದಲ್ಲಿ 129ಟಿಎಂಸಿ ಯಷ್ಟು ಅಗಾಧವಾದ ಅಂತರ್ಜಲದಂತಹ ಕೊಡುಗೆಯನ್ನು ನೀಡಿದೆ ಎಂಬ ಸತ್ಯವನ್ನು ವಿಶ್ವಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮದ ವರದಿ ಬಹಿರಂಗಪಡಿಸಿದೆ ಆದರೆ ಈ ವಾಸ್ತವವನ್ನು ಕಾವೇರಿ ನ್ಯಾಯಾಧೀಕರಣ ಪರಿಗಣಿಸದೇ ಇರುವುದು ಕನ್ನಡಿಗರ ದುರಂತವೇ ಸರಿ.

No comments: