Friday, June 20, 2008

ನಮಗೆಂತಹ ಸಂಸದರು ಬೇಕು?


"ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಲು ಓಡಾಡಿದರಂತೆ" ಇದು ಕನ್ನಡ ನಾಡಿನ ಜನಪ್ರಿಯ ಗಾದೆಗಳಲ್ಲಿ ಒಂದು, ನಮ್ಮ ಹಿರಿಯರು ಶತಶತಮಾನಗಳ ಹಿಂದೆಯೇ ಇಂಥದೊಂದು ಗಾದೆಯನ್ನು ನಮಗೆ ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ. ಆದರೂ ಸಹ ಕೊಳ್ಳೆಯಂತಹ ಸಂದರ್ಭಗಳಲ್ಲಿ ನಾವು ಜಾಗೃತರಾಗದೇ ಇರುವುದು ನಮಗೆ ಕೆಡುಕುಂಟು ಮಾಡುತ್ತದೆಯೋ ಹೊರತು ಇತರರಿಗಲ್ಲ. ಹಾಗೆ ನೋಡಿದರೆ ಇದೇನು ಹೊಸತಲ್ಲ ಕನ್ನಡಕ್ಕೆ, ಕನ್ನಡ ನಾಡಿಗೆ, ಕನ್ನಡಿಗನಿಗೆ ಸಂಬಂಧಿಸಿದಂತೆ ಆಗ್ಗಿಂದಾಗ್ಗೆ ಅನ್ಯಾಯ ಆಗುತ್ತಲೇ ಇರುತ್ತದೆ ಹಾಗಾದಾಗೆಲ್ಲ ಕನ್ನಡಿಗರು ಪ್ರತಿಭಟಿಸುತ್ತಾರೆ, ರಾಜಕಾರಣಿಗಳು ಹೇಳಿಕೆ ನೀಡುತ್ತಾರೆ ಈ ಕ್ರಿಯೆ ಪ್ರತಿಕ್ರಿಯೆಗಳೆಲ್ಲ ಒಂದಷ್ಟು ದಿವಸಗಳ ಮಟ್ಟಿಗೆ ನಡೆಯುತ್ತವೆ ಮತ್ತೆ ಯಥಾಸ್ಥಿತಿ, ನಾವು ಪುನಹ: ಜಾಗೃತರಾಗಬೇಕು ಎಂದರೆ ನಮಗೆ ಸಂಬಂಧಿಸಿದಂತೆ ಮತ್ತೊಂದು ಅನ್ಯಾಯ ಸಂಭವಿಸಬೇಕು ಅದರ ಹೊರತಾಗಿ ನಾವು ಜಾಗೃತರಾಗುವುದೇ ಇಲ್ಲ ಇದು ಕನ್ನಡ ನಾಡಿನ ದುರಂತವೋ ಅಥವಾ ಕನ್ನಡಿಗನಿಗೆ ಅಂಟಿದ ಶಾಪವೋ ಎಂದು ನಿರ್ಧರಿಸುವುದು ಕಠಿಣದ ಕೆಲಸ.
ಕಾವೇರಿ ನ್ಯಾಯಾಧೀಕರಣದ ತೀರ್ಪು ಪ್ರಕಟಗೊಂಡ ಸಂದರ್ಭದಲ್ಲಿ ಸರಿಸುಮಾರು ತಿಂಗಳುಗಳ ಕಾಲ ಸರ್ಕಾರ ಯಾವುದೇ ನಿರ್ಧಾರಕ್ಕೆ ಬರಲೇ ಇಲ್ಲ. ಕಾವೇರಿ ಕೊಳ್ಳ ಪ್ರದೇಶದಲ್ಲಿ ಪ್ರತಿಭಟನೆಗಳೇನೋ ನಡೆದವು ಆದರೆ ಆರಂಭ ವೇಗವನ್ನು ಕೊನೆಯವರೆಗೂ ಕಾಪಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ. ರಾಜ್ಯಕ್ಕೆ ಅನ್ಯಾಯವಾದ ಸಂದಿಗ್ದ ಸಂದರ್ಭದಲ್ಲಿ ನಮ್ಮ ಸಂಸದರೂ ಸೇರಿದಂತೆ ಯಾವುದೇ ಜನ ಪ್ರತಿನಿಧಿಗಳು ಪಕ್ಷದ ಹಿತಾಸಕ್ತಿ ಕಾಪಾಡುವ ಸಲುವಾಗಿ ವಿಧಾನ ಮಂಡಳದ ಅಧಿವೇಶನದಲ್ಲಿ ಜಗ್ಗಾಡಿದರೋ ಹೊರತು ನಾಡಿಗೊದಗಿದ ಆಪತ್ತಿನ ಕುರಿತಾಗಿ ಗಂಭೀರ ಚರ್ಚೆ ಮಾಡುವಂತಹ ಕಳಕಳಿ ತೋರಲಿಲ್ಲ, ಕರ್ನಾಟಕದ ಸಂಸದರೂ ಸಹ ಒಂದು ಆರೋಗ್ಯಕರ ಚರ್ಚೆಗೆ ನಾದಿಹಾಡುವ ಗಂಭೀರ ಪ್ರಯತ್ನ ಮಾಡಲಿಲ್ಲ. ಸರ್ಕಾರದ ಯಾವುದೇ ಹಂತದಲ್ಲಿ ಆಗ ಚರ್ಚೆ ನಡೆದರೂ ಅದು ಕೊಳ್ಳೆ ಹೊಡೆದ ಮೇಲೆ ಬಾಗಿಲು ಮುಚ್ಚುವ ಪ್ರಯತ್ನವಾಗುತ್ತಿತ್ತು ಎಂಬುದೂ ಸಹ ಸರ್ವವಿಧಿತ. ಆದರೆ ಆ ಸಂದರ್ಭಕ್ಕೆ ಕನ್ನಡಿಗರಿಗೆ ಉಳಿದದ್ದು ಅದೊಂದೇ ಮಾರ್ಗ. ಅಂತಹ ಘನಘೋರ ಅನ್ಯಾಯದ ಸಂದರ್ಭದಲ್ಲಿಯೂ ನಮ್ಮ ಜನಪ್ರತಿನಿಧಿಗಳಿಗೆ ಅವರ ಕರ್ತವ್ಯವನ್ನು ನಾವೇ ನೆನಪುಮಾಡಿ ಕೊಡಬೇಕೆಂದರೆ ನಾವು ಎಂಥಹ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದೆವೆ? ಈ ಪ್ರಶ್ನೆಯನ್ನು ಪ್ರತಿಯೋಬ್ಬ ಕನ್ನಡಿಗನೂ ಕೇಳಿಕೊಳ್ಳಲು ಸಕಾಲವಾಗಿತ್ತು.
ಕಾವೇರಿಗೆ ಸಂಬಂಧಿಸಿದಂತೆ ಕನ್ನಡಿಗರಿಗೆ ಅನ್ಯಾಯ, ತುಂಗೆಗೆ ಸಂಬಂಧಿಸಿದಂತೆ ಆಂಧ್ರದಿಂದ ಅನ್ಯಾಯ, ಕೃಷ್ಣೆಗೆ ಸಂಬಂಧಿಸಿದಂತೆ ಅದರಲ್ಲಿಯೂ ಅನ್ಯಾಯ, ಇದು ನೆರೆರಾಜ್ಯಗಳಿಂದ ಅನ್ಯಾಯವಾದರೆ, ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಮತ್ತು ರೈಲ್ವೆಗೆ ಸಂಬಂಧಿಸಿದಂತೆ ಕೇಂದ್ರದಿಂದ ಅನ್ಯಾಯ ಹೀಗೆ ಒಂದರಮೇಲೊಂದರೆಂತೆ ನಿರಂತರವಾದ ಅನ್ಯಾಯಗಳು ಆಗ್ಗಿಂದಾಗ್ಗೆ ಅದೂ ಒಂದೇ ರಾಜ್ಯದ ಮೇಲೆ ಏಕೆ ಸಂಭವಿಸುತ್ತಲೇ ಇರುತ್ತವೆ? ಇದಕ್ಕೆ ಕೊನೆ ಇಲ್ಲವೇ? ಪರಿಹಾರ ಇಲ್ಲವೇ? ನಿರಂತರ ಅನ್ಯಾಯಗಳಿಂದ ಕನ್ನಡಿಗರಿಗೆ ಕನ್ನಡ ನಾಡಿಗೆ ಮುಕ್ತಿಯೇ ಇಲ್ಲವೇ? "ಸಾಯೋ ತನಕ ಶನಿ ಕಾಟ ಆದರೆ ಬಾಳೋದು ಯಾವಾಗ?" ಎಂಬಂತೆ ಕನ್ನಡಿಗರು ಅನ್ಯಾಯ ಮುಕ್ತರಾಗಿ ನೆಮ್ಮದಿಯಿಂದ ಬಾಳುವುದು ಯಾವಾಗ? ಅನ್ಯಾಯ ಎಂದೆನಿಸಿದಾಗ ವಿವಿಧ ರೀತಿಗಳಲ್ಲಿ ಪ್ರತಿಭಟಿಸುವುದು ಅನಿವಾರ್ಯ ಆದ್ದರಿಂದ ಜನತೆಗೆ ಉಂಟಾಗುವ ಅನಾನುಕೂಲಗಳಾದರೂ ಎಷ್ಟು? ಬಂದ್ ಗಳಿಂದ ನಿಲ್ಲುವ ವಾಣಿಜ್ಯ ಚಟುವಟಿಕೆಗಳಿಂದ ಸಂಭವಿಸುವ ನಷ್ಟ ಎಷ್ಟು? ಜನರ ಜೀವಕ್ಕೆ, ಆಸ್ತಿಗೆ ಬರುವ ಸಂಚಕಾರ ಎಷ್ಟು ಪ್ರತಿಕೂಲ? ಇಂತಹ ಪ್ರತಿಕೂಲ ಪರಿಸ್ಥಿತಿಗಳು ಯಾವ ನಾಡಿಗೆ ತಾನೇ ನೆಮ್ಮದಿ ತಂದು ಕೊಡುತ್ತವೆ? ಈ ಕುರಿತು ನಮ್ಮ ಜನಪ್ರತಿನಿಧಿಗಳು ಎಂದಾದರೂ ಗಂಭೀರವಾಗಿ ಆಲೋಚಿಸಿದ್ದಾರೆಯೇ? ಒಂದು ವೇಳೆ ಆಲೋಚಿಸಿದುದೇ ಆದಲ್ಲಿ ಇಂತಹ ಘಟನೆಗಳಿಗೇಕೆ ಮತ್ತೆ ಮತ್ತೆ ಅವಕಾಶ ಮಾಡುತ್ತಾರೆ , ಈ ಪ್ರಶ್ನೆಗಳಿಗೆ ನಾವು ನಮ್ಮ ಜನಪ್ರತಿನಿಧಿಗಳಿಂದ ಉತ್ತರ ನಿರೀಕ್ಷಿಸಿದರೆ ಅದು ಬಹುಷ ತಪ್ಪಾಗಬಹುದು, ಬದಲಾಗಿ ನಾವು ಎಂಥಹವರನ್ನು ಚುನಾಯಿಸಿದ್ದೇವೆ? ಏಕೆ ಅವರನ್ನೇ ಚುನಾಯಿಸಿದ್ದೇವೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಹೆಚ್ಚು ಉಪಯುಕ್ತ ಮತ್ತು ಸಮಯೋಚಿತ.
ನಾವು ಚುನಾಯಿಸಿ ಕಳುಹಿಸಿರುವ ಪ್ರತಿನಿಧಿಗಳಲ್ಲಿ ಅನೇಕರು ಸರ್ಕಾರದ ಕಲಾಪಗಳಿಗೇ ಹೋಗುವುದಿಲ್ಲ. ಇನ್ನು ಕೆಲವರು ಹೋಗುತ್ತಾರೆ ಆದರೆ ಅಲ್ಲಿಯೇ ಕಣ್ತುಂಬ ನಿದ್ರೆ ಮಾಡಿ ಬರುತ್ತಾರೆ, ಉಳಿದವರು ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತೆ ಬಾಯಿದ್ದೂ ಮೂಖರಂತೆ ಇರುತ್ತಾರೆ ಇದರಿಂದ ನಾವು ನಿರೀಕ್ಷಿಸುವುದಾದರೂ ಏನನ್ನು? ಇವರು ಕನ್ನಡಿಗರ ಕನಸನ್ನು ಸಕಾರ ಗೊಳಿಸುತ್ತಾರೆಯೇ? ಇವರನ್ನು ನಂಬಿ ನಾವು ನೆಮ್ಮದಿಯಿಂದ ಇರಬಹುದೇ? ಇದೆಲ್ಲದರ ನಡುವೆ ಕೆಲವೇ ಕೆಲವರು .ಮಾತನಾಡುತ್ತಾರೆ ಮಾತನಾಡುವಂತಹ ವರ್ಚಸ್ಸನ್ನು, ಪ್ರಭಾವವನ್ನು ಇಟ್ಟುಕೊಂಡಿದ್ದಾರಾದರೂ "ಉಕ್ಕಿನ ಕೊಡಲಿಯೇ ಆದರೂ ಕಡಿಯಲಿಕ್ಕೆ ಕಾವು ಬೆಕಲ್ಲವೇ?" ಕಾವಿನಂತಹ ಕನಿಷ್ಟ ಬೆಂಬಲವನ್ನು ಘೋಷಿಸಿದರ ಏನಾದರೊಂದಷ್ಟು ಸಾಧನೆ ಆದೀತು ಆದರೆ ಪಕ್ಷ ರಾಜಕಾರಣ ಅದಕ್ಕೆ ಅಡ್ಡಿ ಮಾಡುತ್ತಿದೆ ಪಕ್ಷಾತೀತ ರಾಜಕಾರಣ ಮಾಡುವಷ್ಟು ನಮ್ಮ ಪ್ರತಿನಿಧಿಗಳು ಸಮರ್ಥರಲ್ಲ ಆದರೆ ಸ್ವಹಿತಾಸಕ್ತಿಗೆ ಧಕ್ಕೆ ಬಂದಾಗ ಮತ್ತು ಸ್ವಾರ್ಥ ಸಾಧನೆ ಆಗಬೇಕೆಂದಾಗ ಮಾತ್ರ ಪಕ್ಷಾಂತ ಮಾಡುತ್ತಾರೆ ಅಷ್ಟೇ. ಈಗ ಕೊಡಲಿಯೂ ಇದೆ ಕಾವೂ ಇದೆ ಅಗತ್ಯ ಸಂದರ್ಭಗಳಲ್ಲಿಯಾದರೂ ಅವೆರಡೂ ಜತೆಗೂಡಿದರೆ ಕಾರ್ಯ ಸಾಧನೆ ಕಠಿಣವಾಗಲಾರದು.
ಸಮಸ್ಯೆ ಪರಿಹಾರವಾಗುವುದು ಪರಿಶ್ರಮದಿಂದ, ಪರಿಶ್ರಮಿಸಬೇಕೆಂದರೆ ಸಮಸ್ಯೆಯ ಗಂಭೀರತೆ ಹಾಗೂ ಪರಿಣಾಮಗಳ ಆಳ ಅಧ್ಯಯನ ಅಗತ್ಯ ಜೊತೆಗೆ ಪರಿಹಾರ ಮಾರ್ಗಗಳ ಅರಿವೂ ಇರಬೇಕು ಎಲ್ಲಕಿಂತಲೂ ಮಿಗಿಲಾಗಿ ಸಮಸ್ಯೆ ಪರಿಹರಿಸಬೇಕೆಂಬ ಮನಸ್ಸಿರಬೇಕು. ಬಹುಷ: ನಮ್ಮ ಯಾವ ಪ್ರತಿನಿಧಿಗಳು ಈ ಅಂಶದ ಬಗ್ಗೆ ಆಲೋಚಿಸಿದಂತೆ ಕಾಣುತ್ತಿಲ್ಲ ರಾಜಕಾರಣ ಎಂದರೆ ಅದು ಅನುಭವಿಸಲಿಕ್ಕೆ ಮಾತ್ರ ಎಂದು ಅವರು ಭಾವಿಸಿರುವಂತಿದೆ. "ಅರಿಯದ ಹುಡುಗ ಆರಂಭ ಮಾಡಿ ಹೊಡೆ ಹೊಲ ಕೊಯ್ದು ಮೆದೆ ಹಾಕಿದ" ಎಂಬಂತಹ ಲಕ್ಷಣಗಳು ನಮ್ಮ ಪ್ರತಿನಿಧಿಗಳಲ್ಲಿ ಕಾಣುತ್ತಿದೆ.
ಚಲನಚಿತ್ರ ತಾರೆಯರಿಗೆ ಜನಸಾಮಾನ್ಯರ ಸಮಸ್ಯೆಯ ಅರಿವಿರುವುದಿಲ್ಲ ಎಂಬ ಪ್ರತೀತಿ ಇದೆ. ಆದರೆ ನೆರೆ ರಾಜ್ಯಗಳಾದ ಆಂಧ್ರ ಹಾಗೂ ತಮಿಳು ನಾಡುಗಳಲ್ಲಿ ಚಿತ್ರತಾರೆಯರೇ ಹೆಚ್ಚಾಗಿ ಜನಪ್ರತಿನಿಧಿಗಳಾಗಿ ಆರಿಸಿ ಬರುತ್ತಾರೆ. ಅವರಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅಂಥಹವರ ಪ್ರಮಾಣ ಕಡಿಮೆ ಆದರೂ ಸಾಮಾನ್ಯರ ಸಮಸ್ಯೆಗಳು ಏಕೆ ಇವರಿಗೆ ಅರ್ಥವಾಗುತ್ತಿಲ್ಲ ಎಂಬುದ ಸೋಜಿಗದ ಸಂಗತಿಯಾಗಿದೆ. ನೆರೆ ರಾಜ್ಯದ ಪ್ರತಿನಿಧಿಗಳು ಚಿತ್ರತಾರೆಯರಾಗಿರಲಿ, ಭಾಷಾಂಧರಾಗಿರಲಿ, ಭಾಷಾ ಹೀನರಾಗಿರಲಿ ಅವರಿಗೆ ವಾಸ್ತವತೆಯ ಅರಿವಿದೆ " ಹದ ನೋಡಿ ಹರಗುವಂತಹ, ಬೆದ ನೋಡಿ ಭಿತ್ತುವಂತಹ" ಪರಿಜ್ಞಾನ ಅವರಲ್ಲಿದೆ. ಕನಿಷ್ಠ ಅಂತಹ ಪ್ರಜ್ಞಾವಂತರನ್ನಾದರೂ ಆರಿಸುವ ಪರಿಪಾಠ ಇನ್ನು ಮುಂದೆ ನಮ್ಮದಾಗಬೇಕು ಇದು ಕೇವಲ ಕರ್ನಾಟಕದ ಮತದಾರರ ಕರ್ತವ್ಯ ಮಾತ್ರವಲ್ಲ ಜೊತೆಗೆ ಈ ನಾಡಿನಲ್ಲಿ ಹುಟ್ಟಿದ, ಈ ನಾಡಿನಲ್ಲಿ ಬೆಳೆದ, ಈ ನಾಡನ್ನು ಆಳಿದ ರಾಜಕೀಯ ಪಕ್ಷಗಳ ಕರ್ತವ್ಯವೂ ಸಹ ಆಗಬೇಕು ಕೇವಲ ಜಾತಿ ರಾಜಕೀಯ, ಹಣದ ರಾಜಕೀಯ ಮತ್ತು ಹೆಂಡದ ರಾಜಕೀಯ ಮಾಡುವುದನ್ನು ಬಿಟ್ಟು ನಮ್ಮ ರಾಜ್ಯ ಪ್ರತಿನಿಧಿಸಲು ನಮ್ಮ ಪಕ್ಷದಲ್ಲಿ ಯಾರು ಸಮರ್ಥರು, ಏಕೆ ಸಮರ್ಥರು, ಹೇಗೆ ಸಮರ್ಥರು ಎಂಬ ಮಾನದಂಡಗಳನ್ನು ಮುಂದಿಟ್ಟುಕೊಂಡು ಪಕ್ಷದ ಟಿಕೆಟ್ ನೀಡುವುದು ಒಳಿತು. ಹೆಣಕ್ಕೆ ಶೃಂಗಾರ ಯಾಕೆ? ಗುಣಕ್ಕೆ ಮತ್ಸರ ಯಾಕೆ ಅಲ್ಲವೇ?
ಕನಿಷ್ಟ ಕೇಂದ್ರದ ರಾಜಕೀಯಕ್ಕೆ ಸಂಬಂಧಿಸಿದಂತೆಯಾದರೂ ನಮ್ಮ ಸರ್ವ ಪಕ್ಷಗಳು ಒಮ್ಮತ ಪ್ರದರ್ಶಿಸಬೇಕು ಈ ಮೂಲಕ ಇನ್ನಾದರೂ ಕೇಂದ್ರ ರಾಜಕಾರಣ ಗಟ್ಟಿಗೊಳ್ಳಬೇಕು, ಪಕ್ಷ ಯಾವುದಾದರೇನು? ನಾಡಿನ ಸಮನ್ವಯತೆಗೆ ಕೊರತೆ ಇರಬಾರದು, ಕನ್ನಡದ ಬಗ್ಗೆ, ನಾಡಿನ ಬಗ್ಗೆ ಕನಿಷ್ಟ ಭಾವನಾತ್ಮಕತೆ ಇರಬೇಕು. ಈ ಮೂಲಕವಾದರೂ ಸಮನ್ವಯತೆ ಸಾಧನೆಯಾಗಬೇಕು ನಮ್ಮ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಪ್ರಸ್ತಾಪಿಸುವಂತಹ ಕೇಂದ್ರಕ್ಕೆ ಮನವರಿಕೆ ಮಾಡುವಂತಹ ಮತ್ತು ಪರಿಹಾರ ಗಳಿಸಿಕೊಳ್ಳುವಂತಹ ಉತ್ತಮ ವಾಗ್ಮಿಗಳನ್ನು ನಮ್ಮ ಸಂಸದರನ್ನಾಗಿ ಆಯ್ಕೆಮಾಡಬೇಕು, ಏಕೆಂದರೆ ಆಧುನಿಕ ಸರ್ಕಾರಗಳಲ್ಲಿ ಚರ್ಚೆಯೇ ಬಂಡವಾಳ, ಚರ್ಚೆಯ ಮೂಲಕ ನಡೆಯುವಂತದ್ದೆ ಸರ್ಕಾರ, ಈ ವ್ಯವಸ್ಥೆಯ ನಡುವೆ " ಬಾಯಿದ್ದೋನು ಬರದಲ್ಲಿಯೂ ಬದುಕುತ್ತಾನೆ" ಈ ಮೂಲಕ ಕೇಂದ್ರದಂತಹ ದೊಡ್ಡ ವ್ಯವಸ್ಥೆಯೊಂದಿಗೆ ಹಗೆ ಇಟ್ಟುಕೊಳ್ಳದೆ, ನೆರೆ ರಾಜ್ಯಗಳಂತಹ ಸಣ್ಣ ವ್ಯವಸ್ಥೆಯೊಂದಿಗೆ ಸಲಿಗೆ ಇಟ್ಟುಕೊಳ್ಳದೆ ರಾಜಕಾರಣ ಮಾಡುವಂತಹ ರಾಜಕಾರಣಿಗಳು ನಮ್ಮ ಪ್ರತಿನಿಧಿಗಳಾಗಬೇಕು. ಎಲ್ಲಕಿಂತಲೂ ಮಿಗಿಲಾಗಿ ಜಾಗತೀಕರಣದಂತಹ ಈ ಸಂದರ್ಭದಲ್ಲಿಯಾದರೂ ಮತದಾರರು " ರಾಮರಾಜ್ಯವಾಳಿದರೂ ರಾಗಿ ಬೀಸುವುದೆ ತಪ್ಪುತ್ತದೆಯೇ" ಎಂಬ ಮನೋಬಾವದಿಂದ ಹೊರಬರಬೇಕಾದುದು ಅತ್ಯಗತ್ಯ ಇಲ್ಲವಾದರೆ ಕಾವೇರಿ ಕೃಷ್ಣೆಯಂತಹ ಮತ್ತು ಶಾಸ್ತ್ರೀಯ ಭಾಷೆಯಂತಹ ಮೌಲ್ಯಗಳು ಸದಾ ಪರರ ಪಾಲಾಗುತ್ತಿರುತ್ತವೆ ಇಂತಹ ಬೆಳವಣಿಗೆಯಿಂದ " ಕೋಣೆ ಮಕ್ಕಳು ಕೊಳೆತವು, ಬೀದಿ ಮಕ್ಕಳು ಬೆಳೆದವು" ಎಂಬಂತಹ ಸ್ಥಿತಿ ಕನ್ನಡಿಗರದ್ದಾಗುತ್ತವೆ. ಯಾವ ಸ್ಥಿತಿ ನಮ್ಮದಾಗಬೇಕು? ಅದನ್ನು ನಾವು ಹೇಗೆ ನಮ್ಮದಾಗಿಸಿಕೊಳ್ಳಬೇಕು ? ಆಯ್ಕೆ ನಮ್ಮ ಮುಂದೆಯೇ ಇದೆ. ಆಯ್ಕೆಯ ಕಾಲದಲ್ಲಿ ಜಾಗೃತರಾಗಬೇಕಾದುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ.

3 comments:

dinesh said...

ಭಾಷೆ ಹಾಗೂ ನಿರೂಪಣಾ ಶೈಲಿ ಉತ್ತಮವಾಗಿದೆ. ನಿಮ್ಮಿಂದ ಇನ್ನೂ ಹೆಚ್ಚಿನ ಬರಹಗಳು ಬರಲಿ ಎಂದು ಹಾರೈಸುತ್ತೇನೆ. - ದಿನೇಶ್

ದೀಪಸ್ಮಿತಾ said...

nija, nimma abhipraaya sariyaagide

rafee said...

dear madhu,

nimma barahagalu ninta neeragade sadaa hariyutirali.yuva barahagaarara avashyakate hindendigintalu prastuta samayadalli hechagide. kaarana, poorvaagruha peedita barahagalu oadugara manasthitiyannu haalugedavuthide. -rafee