Tuesday, October 7, 2008

ವಿಜಯ ದಶಮಿಯ ಸಂಕಲ್ಪ



ಭಾರತದಲ್ಲಿ ಆಚರಣೆಯಲ್ಲಿರುವ ವಿವಿಧ ಹಬ್ಬಗಳಂತೆ ದಸರೆಯೂ ಸಹ ಐತಿಹಾಸಿಕವಾದ ಮಹತ್ವವನ್ನು ಹೊಂದಿದೆ. ಆಶ್ವೀಜ ಶುದ್ದ, ಪಾಡ್ಯದಿಂದ ದಶಮಿಯವರೆಗೆ ಹತ್ತು ದಿವಸಗಳ ಕಾಲ ಆಚರಿಸಲ್ಪಡುವ ಹಬ್ಬವನ್ನು ದಸರಾ, ದಶಹರ ಹಾಗೂ ನವರಾತ್ರಿ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಈ ನವರಾತ್ರಿ ಅಥವಾ ಹತ್ತು ದಿವಸಗಳ ಕಾಲಾವಧಿಯಲ್ಲಿ ಬಹಳ ಮಹತ್ವ ಪಡೆದುಕೊಂಡಿರುವುದು ಕೊನೆಯ ದಿವಸಗಳಾದ ಮಹಾನವಮಿ ಮತ್ತು ವಿಜಯದಶಮಿಗಳು. ಇವು ದಸರೆಯ ದಿನಗಳಲ್ಲಿಯೇ ಬಹಳ ಮುಖ್ಯವಾದ ದಿವಸಗಳಾಗಿವೆ. ಈ ದಿವಸಗಳನ್ನು ಐತಿಹಾಸಿಕವಾಗಿ ದಾನವರಿಗೂ, ದೇವರಿಗೂ ನಡೆದ ಯುದ್ದದಲ್ಲಿ ದೇವತೆಗಳಿಗೆ ಉಂಟಾದ ವಿಜಯವನ್ನು ಆಚರಿಸುವ ಪದ್ದತಿ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಶ್ರೀರಾಮ ಲಂಕೆಯ ಮೇಲೆ ದಂಡೆತ್ತಿ ರಾವಣನನ್ನು ಸಂಹರಿಸಿ ವಿಜಯ ಸಾಧನೆಗೈದ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ಹೀಗೆಯೇ ಮುಹಿಷಾಸುರರಂತಹ ದುಷ್ಟ ಶಕ್ತಿಗಳನ್ನು ಸಂಹರಿಸಿದ ವಿಜಯದ ಸಂಕೇತವಾಗಿ ಪ್ರಾಚೀನ ಕಾಲದಿಂದಲೂ ಭಾರತದ ಎಲ್ಲೆಡೆಯೂ ಈ ಹಬ್ಬವನ್ನು ಆಚರಿಸುವ ಪದ್ದತಿ ನಡೆದು ಬಂದಿದೆ. ಈ ದಿನಗಳ ವಿಶೇಷ ಎಂದರೆ ಶಕ್ತಿ ಪೂಜೆ.

ಕರ್ನಾಟಕದಲ್ಲಿ ಈ ಹಬ್ಬವನ್ನು ಬಹಳ ವೈಭವದಿಂದ ವಿಜಯನಗರದ ಕಾಲದ ಸಾಮ್ರಾಜ್ಯದಲ್ಲಿ ಆಚರಿಸಲಾಗುತ್ತಿತ್ತು ಎಂಬುದಕ್ಕೆ ಅನೇಕ ಆಧಾರಗಳಿವೆ ಬಹುಮುಖ್ಯವಾಗಿ ವಿದೇಶಿ ಯಾತ್ರಿಕರಾದ ಅಬ್ದುಲ್ ರಜಾಕ್, ಪೆಯಾಸ್, ನ್ಯೂನಿಜ್ ಮೊದಲಾದವರು ತಮ್ಮ ಗ್ರಂಥಗಳಲ್ಲಿ ವಿಜಯನಗರದ ದಸರೆಯ ಸಂಭ್ರಮವನ್ನು ವರ್ಣಿಸಿದ್ದಾರೆ. ಮಳೆಗಾಲ ಇಳಿಮುಖಗೊಂಡು ಬಿಡುವಿರುತ್ತಿದ್ದ ಈ ಸಂದರ್ಭವನ್ನು ರಾಜ ಮಹಾರಾಜರು ಯುದ್ದಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು ನೆರೆ ರಾಜ್ಯಗಳ ಮೇಲೆ ದಂಡೆತ್ತಿ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವುದೇ ಈ ಯುದ್ದಗಳ ಮಹತ್ವವಾಗಿತ್ತು. ಹೀಗೆ ಕದನ ನಿರ್ಧರಿಸಿ ಯುದ್ದಕ್ಕೆ ಅಣಿಯಾಗುವ ಕಾಲವಾಗಿಯೂ ಸಹ ದಸರೆಯನ್ನು ಆಚರಿಸಲಾಗುತ್ತಿತ್ತು ಈ ವೇಳೆ ಇಡೀ ಸಾಮ್ರಾಜ್ಯದ ವಿವಿಧ ಭಾಗದ ಸೈನ್ಯಗಳು ಒಂದೆಡೆ ಜಮಾವಣೆಯಾಗುತ್ತಿತ್ತು. ಸಾಮಂತರು, ಮಂಡಲಾಧಿಪತಿಗಳು, ದಂಡನಾಯಕರು ತಮ್ಮ ತಮ್ಮ ಸೈನ್ಯಗಳ ಜೊತೆಗೆ ರಾಜಧಾನಿಗೆ ಆಗಮಿಸಿ ತಮ್ಮ ಸೈನ್ಯಗಳ ಪ್ರದರ್ಶನ ನಡೆಸುತ್ತಿದ್ದರು ಇದರ ಜೊತೆ ಜೊತೆಯಲ್ಲಿಯೇ ಕಪ್ಪ ಕಾಣಿಕೆಗಳನ್ನು ಒಪ್ಪಿಸಲೂ ಸಹ ಈ ಕಾಲವನ್ನು ನಿಶ್ಚಯಿಸಿಕೊಳ್ಲಲಾಗಿತ್ತು.

ಈ ಎಲ್ಲಾ ತಾಲೀಮು, ತಯಾರಿ ಹಾಗೂ ಪ್ರದರ್ಶನವನ್ನು ವೀಕ್ಷಿಸಲು ಉನ್ನತವಾದ, ಭವ್ಯವಾದ ಮಂಟಪವನ್ನು ಸಹ ನಿರ್ಮಿಸಲಾಗುತ್ತಿತ್ತು. ಹಂಪಿಯಲ್ಲಿ ಈಗಲೂ ಇರುವ ಮಹಾನವಮಿ ದಿಬ್ಬದ ಅವಶೇಷವೇ ಇದಕ್ಕೆ ಉದಾಹರಣೆ. ನವರಾತ್ರಿಯ ಒಂಬತ್ತು ದಿನಗಳೂ ಸಹ ಸಂಜೆ ರಾಜನು ಈ ಅತ್ಯುನ್ನತವಾದ ಮಂಟಪದಲ್ಲಿ ರತ್ನಖಚಿತವಾದ ಸಿಂಹಾಸನದ ಮೇಲೆ ಕುಳಿತು ಪ್ರದರ್ಶನವನ್ನು ವೀಕ್ಷಿಸುತ್ತಿದ್ದ.

ರಣಬಲಿಯಿಂದ ಆರಂಭವಾಗಿ ಪಟ್ಟದ ಕುದುರೆ ಆನೆಗಳನ್ನು ಪುರೋಹಿತರು ಪೂಜಿಸುತ್ತಿದ್ದರು ಈ ಮಂಟಪದಲ್ಲಿ ನೃತ್ಯ, ಗಾಯನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸಹ ನಡೆಯುತ್ತಿದ್ದವು, ಒಂಬತ್ತು ದಿವಸಗಳ ಕಾಲವೂ ಸಹ ವಿಧವಿಧವಾದ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿತ್ತು ಜೊತೆಗೆ ವಿವಿಧ ಸ್ಪರ್ಧೆಗಳೂ ಸಹ ನಡೆಯುತ್ತಿದ್ದವು ಗೆದ್ದವರಿಗೆ ರಾಜ ಬಹುಮಾನಗಳನ್ನು ವಿತರಿಸುತ್ತಿದ್ದ.

ನವಮಿಯ ದಿವಸ ಆಯುಧ ಪೂಜೆ ಹಮ್ಮಿಕೊಳ್ಳಲಾಗುತ್ತಿತ್ತು ಆ ವೇಳೆಗೆ ಕಪ್ಪ ಕಾಣಿಕೆಗಳ ಒಪ್ಪಿಸುವಿಕೆ ಮುಗಿದು ಜೈತ್ರಯಾತ್ರೆಗೆ ಪೂರ್ಣ ಸಿದ್ಧತೆ ನಡೆಸಿದಂತಾಗುತ್ತಿತ್ತು. ರಾಜರೂ ಹಾಗೂ ಅವರ ಸೈನಿಕರು ಶತ್ರುನಿಗ್ರಹಕ್ಕಾಗಿ ಬಳಸುತ್ತಿದ್ದ ಆಯುಧಗಳನ್ನು ಪೂಜಿಸುತ್ತಿದ್ದರು ಅಂತೆಯೇ ಜನಸಾಮಾನ್ಯರು ತಮ್ಮ ಜೀವನ ಪಯಣಕ್ಕೆ ಅನುಕೂಲ ಕಲ್ಪಿಸುತ್ತಿದ್ದ ಕೊಡಲಿ, ಕುಡುಗೋಲು, ನೇಗಿಲುಗಳನ್ನು ಪೂಜಿಸುತ್ತಿದ್ದರು ಆಧುನೀಕರಣ ಮುಂದುವರೆದಂತೆಲ್ಲ ಯಂತ್ರಗಳನ್ನು ಪೂಜಿಸುವ ಪರಿಪಾಠ ಬೆಳೆದು ಬಂತು.

ಈ ಎಲ್ಲಾ ಪ್ರದರ್ಶನ ಹಾಗೂ ಆಚರಣೆ ಅರಸರಿಗೆ ಪ್ರಮುಖವಾದುದಾಗಿತ್ತಾದರೂ ಅದನ್ನು ಜನಸಾಮಾನ್ಯರೂ ಆಚರಿಸುತ್ತಿದ್ದರು, ಬಹುಷ ಅದೇ ಇಂದು ದಸರಾ ಪಡೆದುಕೊಂಡಿರುವ ವೈಭವ ಹಾಗೂ ಸಂಭ್ರಮವನ್ನು ಪಡೆಯುತ್ತಿರಲಿಲ್ಲ ಅದಕ್ಕೆ ಬದಲಾಗಿ ಜನಸಾಮಾನ್ಯರು ಸಹ ಈ ಆಚರಣೆಯಲ್ಲಿ ಪಾಲ್ಗೊಂಡು ಸ್ವತಹ ಆಚರಿಸಿದ್ದುದ್ದರಿಂದ ಅದು ಮತ್ತಷ್ಟು ಸಂಭ್ರಮವನ್ನು ಹೊಂದಿತ್ತು.

ವಿಜಯನಗರದ ರಾಜಧಾನಿಯಲ್ಲಿ ಮಹಾನವಮಿಯ ಉತ್ಸವಕ್ಕಾಗಿ ಪ್ರತಿ ಮನೆ ಮನೆಯ ಮುಂದೆ ಮಂಟಪಗಳನ್ನು , ತೋರಣಗಳನ್ನು ನಿರ್ಮಿಸಿ ಉತ್ಸವ ಆಚರಿಸುತ್ತಿದ್ದರು ಹಾಗೂ ಅರಸರು ಆಚರಿಸುತ್ತಿದ್ದುದನ್ನು ಅನುಕರಿಸುವ ಸಲುವಾಗಿ ಪ್ರತಿ ಮನೆಯಲ್ಲಿಯೂ ಗೊಂಬೆಗಳನ್ನು ಕೂರಿಸಿ ರಾಜರು ನಡೆಸುತ್ತಿದ್ದ ದರ್ಬಾರನ್ನು ಅನುಕರಣೆ ಮಾಡುತ್ತಿದ್ದರು. ಗೊಂಬೆಗಳನ್ನು ಕೃತಕ ಆಭರಣ ಹಾಗೂ ವಸ್ತ್ರಗಳಿಂದ ಅಲಂಕರಿಸಿ ತಮ್ಮ ಕಲಾವಂತಿಕೆಯ ಜಾಣ್ಮೆ ಮೆರೆಯುತ್ತಿದ್ದರು.

ಈ ಪರಿಯ ವೈಭವದಲ್ಲಿ ನಡೆಯುತ್ತಿದ್ದ ದಸರಾ ಆಚರಣೆ ವಿಜಯನಗರ ಸಾಮ್ರಾಜ್ಯದ ಅವನತಿಯೊಂದಿಗೆ ಈ ಆಚರಣೆಯೂ ಅವನತಿ ಹೊಂದಿತು. ಆನಂತರ ಮೈಸೂರಿನ ಅರಸರು ವಿಜಯನಗರದ ಮಾಧರಿಯನ್ನು ಅನುಕರಿಸಿ ಹತ್ತು ದಿನಗಳ ದಸರೆಗೆ ತಮ್ಮದೇ ಆದಂತಹ ಹೊಸ ಮೆರುಗನ್ನು ನೀಡಿದರು. ಮೈಸೂರನ್ನು ಆಳಿದ ವಿವಿಧ ಅರಸರ ಕಾಲದಲ್ಲಿ ಬಗೆ ಬಗೆಯಾದ ಆಚರಣೆ ಉತ್ಸವಗಳನ್ನು ಮೈಗೂಡಿಸಿಕೊಂಡ ಮೈಸೂರು ದಸರಾ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ವಿಶ್ವವಿಖ್ಯಾತ ಮೈಸೂರು ದಸರೆ ಎಂದೆನಿಸಿಕೊಂಡಿತು.

ಮೈಸೂರರಸರ ಆಡಳಿತ ಕೊನೆಗೊಂಡ ಮೇಲೆ ತನ್ನ ವಿನ್ಯಾಸದಲ್ಲಿ ಅಲ್ಪ ಮಾರ್ಪಾಡುಗಳನ್ನು ಮಾಡಿಕೊಂಡು ದಸರೆ ಇಂದಿಗೂ ಆಚರಿಸಲ್ಪಡುತ್ತಿದೆ. ಒಟ್ಟಾರೆ ದಸರೆ ಎಂಬುದು ಆರಂಭವಾದುದೇ ದುಷ್ಟ ಸಂಹಾರದ ವಿಜಯದ ಸಂಕೇತವಾಗಿದೆ ಆದರೆ ಇಂದು ಅದರ ಮೂಲ ಆಶಯವನ್ನು ಮರೆತು ಕೇವಲ ವೈಭವ, ಸಂಭ್ರಮ, ಮೋಜು, ಮಸ್ತಿಗಾಗಿ ದಸರೆ ಆಚರಿಸ್ಪಡುತ್ತಿದೆ ಇದರ ಜೊತೆ ಜೊತೆಗೆ ದಸರಾ ಉತ್ಸವ ವಾಣಿಜ್ಯೀಕರಣಗೊಂಡಿದೆ. ದಸರೆಯ ಹೆಸರಿನಲ್ಲಿ ಪ್ರವಾಸಿಗರ ಆಕರ್ಷಣೆ, ವ್ಯಾಪಾರ, ಪ್ರಯೋಜಕತ್ವಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ.

ಯಾವುದೋ ಕಾಲದ ಏಕೈಕ ದುಷ್ಟ ಸಂಹಾರದ ವಿಜಯದ ಸಂಕೇತವಾಗಿ ದಸರೆ ಆಚರಿಸ್ಪಡಲಾಯ್ತು ಆದರೆ ದುಷ್ಟ ಶಕ್ತಿಯ ಸಂಪೂರ್ಣ ಹನನವಾಗಲಿಲ್ಲ. "ಸತ್ಯಕ್ಕೆ ಸಾವಿಲ್ಲ" ಎಂಬ ಮಾತು ಎಷ್ಟು ಸತ್ಯವೋ, ದುಷ್ಟ ಅಟ್ಟಹಾಸಕ್ಕೂ ಕೊನೆಯಿಲ್ಲ ಎಂಬುದು ಇತಿಹಾಸದಿಂದ ಹಾಗೂ ಇಂದು ಸಂಭವಿಸುತ್ತಿರುವ ವಿದ್ಯಾಮಾನಗಳಿಂದ ಸಾಬೀತಾಗುತ್ತಿದೆ. ಕಾಲಕಾಲಕ್ಕೆ ವಿವಿಧ ಪರಿಸ್ಥಿತಿಗಳಿಗೆ ಅನುಗುಣವಾಗಿ ದುಷ್ಟ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇಂದಿಗೂ ನಮ್ಮ ಸಮಾಜವನ್ನು ಭಾದಿಸುತ್ತಿರುವ ಭ್ರಷ್ಟಾಚಾರ, ಭಯೋತ್ಪಾದನೆ, ಮತಾಂದತೆ ಇವುಗಳೂ ಸಹ ದುಷ್ಟ ಚಟುವಟಿಕೆಯ ವಿವಿಧ ಮುಖಗಳು, ಜಾಗೃತಿಯ ಮೂಲಕ ಇವುಗಳ ಸಂಹಾರವೂ ಆಗಬೇಕು ಆಗ ಮಾತ್ರ ವಿಜಯದಶಮಿ ಆಚರಣೆ ಅರ್ಥ ಬಂದೀತು.

No comments: